Karnataka news paper

‘ಈ ಆಟಗಾರನನ್ನು ತಕ್ಷಣ ತೆಗೆದುಹಾಕಿ’: ಸಿಎಸ್‌ಕೆ ವಿರುದ್ಧ ಫ್ಯಾನ್ಸ್‌ ಕಿಡಿ!


ಹೊಸದಿಲ್ಲಿ: ಹದಿನೈದನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಆಟಗಾರರ ಮೆಗಾ ಹರಾಜು ಮುಕ್ತಾಯವಾದ ಬೆನ್ನಲ್ಲೆ ನಾಲ್ಕು ಬಾರಿ ಐಪಿಎಲ್ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ತಂಡದ ವಿರುದ್ಧ ಅಭಿಮಾನಿಗಳು ತಿರುಗಿ ಬಿದ್ದಿದ್ದಾರೆ.

ಬೆಂಗಳೂರಿನಲ್ಲಿ ಕಳೆದ ವಾರಾಂತ್ಯದಲ್ಲಿ ಮುಗಿದಿದ್ದ ಐಪಿಎಲ್ ಮೆಗಾ ಹರಾಜಿನಲ್ಲಿ ಎಲ್ಲಾ ತಂಡಗಳು ಒಟ್ಟು 204 ಆಟಗಾರರನ್ನು 551.70 ಕೋಟಿ ರೂ. ಗಳಿಗೆ ಖರೀದಿಸಿದ್ದವು. ಇದರಲ್ಲಿ 137 ಭಾರತೀಯ ಆಟಗಾರರಾಗಿದ್ದರೆ, 67 ವಿದೇಶಿ ಆಟಗಾರರಾಗಿದ್ದಾರೆ. ಪ್ರತೀ ಹರಾಜಿನಂತೆ ಈ ಹರಾಜಿನಲ್ಲಿಯೂ ಚೆನ್ನೈ ಫ್ರಾಂಚೈಸಿ ಅತ್ಯುತ್ತಮ ಆಟಗಾರರ ತಂಡವನ್ನು ಕಟ್ಟಿದೆ.

ಒಂದು ಕಡೆ ಎಂಎಸ್‌ ಧೋನಿ ಜೊತೆ ದೀರ್ಘಾವಧಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಲ್ಲಿ ಆಡಿದ್ದ ಸುರೇಶ್‌ ರೈನಾ ಅವರನ್ನು ಬಿಡ್‌ ಮಾಡುವಲ್ಲಿ ಸಿಎಸ್‌ಕೆ ಮನಸು ಮಾಡಲಿಲ್ಲ. ಈ ಹಿನ್ನೆಲೆಯಲ್ಲಿ ರೈನಾ ಅನ್‌ಸೋಲ್ಡ್‌ ಆದರು. ಹಾಗಾಗಿ ಸುರೇಶ್‌ ರೈನಾ ಅಭಿಮಾನಿಗಳು ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಸೋಶಿಯಲ್‌ ಮೀಡಿಯಾದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆರ್‌ಸಿಬಿ ಮೆಗಾ ಆಕ್ಷನ್‌ ಬೆನ್ನಲ್ಲೇ ಮ್ಯಾಕ್ಸ್‌ವೆಲ್‌ ಕಡೆಯಿಂದ ಆರ್‌ಸಿಬಿಗೆ ಆಘಾತದ ಸುದ್ದಿ!

ಮತ್ತೊಂದೆಡೆ ಶ್ರೀಲಂಕಾದ ಯುವ ಆಫ್‌ ಸ್ಪಿನ್ನರ್‌ ಮಹೇಶ್‌ ತೀಕ್ಷಣ ಅವರನ್ನು ಮೆಗಾ ಹರಾಜಿನಲ್ಲಿ ಚೆನ್ನೈ ಫ್ರಾಂಚೈಸಿ 70 ಲಕ್ಷ ರೂ. ಗಳಿಗೆ ಖರೀದಿಸಿರುವ ಹಿನ್ನೆಲೆಯಲ್ಲಿ ಕೆಲ ಅಭಿಮಾನಿಗಳು ಸೋಶಿಯಲ್‌ ಮೀಡಿಯಾದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚೆನ್ನೈ ಸೂಪರ್‌ ಕಿಂಗ್ಸ್ ತಮಿಳಿಗರ ತಂಡವಾಗಿದೆ. ಹಾಗಾಗಿ ಶ್ರೀಲಂಕಾ ಆಟಗಾರರನ್ನು ಕೂಡಲೇ ಕೈ ಬಿಡಬೇಕೆಂದು ಕೆಲ ಅಭಿಮಾನಿಗಳು ಟ್ವಿಟರ್‌ನಲ್ಲಿ ಹೋರಾಟ ಪ್ರಾರಂಭಿಸಿದ್ದಾರೆ.

ಬಾಯ್ಕಟ್‌ ಚೆನ್ನೈ ಸೂಪರ್ ಕಿಂಗ್ಸ್‌ ಎಂಬ ಹ್ಯಾಶ್‌ ಟ್ಯಾಗ್‌ನೊಂದಿಗೆ ಕೆಲವರು ಟ್ವಿಟರ್‌ನಲ್ಲಿ ಹೋರಾಟ ಆರಂಭಿಸಿದ್ದಾರೆ. ಈ ಹ್ಯಾಸ್‌ ಟ್ಯಾಗ್‌ ಬರೆದುಕೊಂಡಿರುವ ಹಲವು ಟ್ವಿಟರ್‌ ಬಳಕೆದಾರರು, ಶ್ರೀಲಂಕಾ ಆಟಗಾರನನ್ನು ತಕ್ಷಣ ತಂಡದಿಂದ ವಜಾಗೊಳಿಸಬೇಕು. ಇಲ್ಲವಾದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ತಂಡವನ್ನು ಐಪಿಎಲ್ ಟೂರ್ನಿಯಲ್ಲಿ ಬ್ಯಾನ್‌ ಮಾಡಬೇಕೆಂದು ಆಗ್ರಹಿಸುತ್ತಿದ್ದಾರೆ.

ಶ್ರೀಲಂಕಾದಲ್ಲಿ ಸಿಂಹಳೀಯರು ಹಾಗೂ ತಮಿಳರ ನಡುವೆ ಹಲವು ವರ್ಷಗಳಿಂದ ಉದ್ವಿಗ್ನತೆಯ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಕಳೆದ 2009ರಲ್ಲಿ ಸಿಂಹಳೀಯ ಸೈನಿಕರು ಎಲ್‌ಟಿಟಿಇ ವಿರುದ್ಧ ಕ್ರಮ ಕೈಗೊಳ್ಳುವ ವೇಳೆ ಶ್ರೀಲಂಕಾದ ಹಲವು ತಮಿಳಿಗರ ಗುಂಪಿನ ಮೇಲೆ ದಾಳಿ ನಡೆಸಿದ್ದರು. ಇದರಿಂದ ಸಾಕಷ್ಟು ತಮಿಳಿಗರು ಸಾವೀಗೀಡಾಗಿದ್ದರು ಎಂಬ ವರದಿ ಇದೆ.

ಇದರಿಂದ ಕೋಪಗೊಂಡಿರುವ ತಮಿಳಿಗರು ಹಲವು ವರ್ಷಗಳಿಂದಲೂ ಸಿಂಹಳೀಯರ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ತಮಿಳಿಗರ ಒಡೆತನದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಿಂದ ಸಿಂಹಳೀಯರ ಮೂಲದ ಆಟಗಾರ ಮಹೇಶ್‌ ತೀಕ್ಷಣ ಅವರನ್ನು ತೆಗೆದು ಹಾಕಿ, ಇಲ್ಲವೇ ಸಿಎಸ್‌ಕೆ ತಂಡವನ್ನು ಐಪಿಎಲ್‌ನಿಂದ ಬ್ಯಾನ್‌ ಮಾಡಿ ಎಂಬ ಕೂಗು ಜೋರಾಗಿ ಕೇಳಿ ಬರುತ್ತಿದೆ.

ಈ ಹಿಂದೆ 2013ರಲ್ಲಿ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯ ಲಲಿತಾ ಅವರು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಲ್ಲಿ ಶ್ರೀಲಂಕಾ ಆಟಗಾರರನ್ನು ನಿಷೇಧಿಸಿದ್ದರು. ಈ ಹಿನ್ನೆಲೆಯಲ್ಲಿ ಹಲವು ಶ್ರೀಲಂಕಾ ಆಟಗಾರರನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಿಂದ ಕೈ ಬಿಟ್ಟಿತ್ತು. ಈಗ ಇದೇ ರೀತಿಯ ನಿಯಮವನ್ನು ಸಿಎಸ್‌ಕೆ ತಂಡದಲ್ಲಿ ತರಬೇಕೆಂದು ವಿಶ್ವದಾದ್ಯಂತ ತಮಿಳಿಗರು ಆಗ್ರಹಿಸುತ್ತಿದ್ದಾರೆ.

“ಶ್ರೀಲಂಕಾ ತಂಡದ ಆಟಗಾರನನ್ನು ಕೈ ಬಿಡಿ ಅಥವಾ ಫ್ರಾಂಚೈಸಿಯಲ್ಲಿರುವ ಚೆನ್ನೈ ಪದವನ್ನು ತೆಗೆದು ಹಾಕಿ. ನಿಮಗೆ ತಮಿಳಿಗರ ಭಾವನೆಗಳಿಗಿಂತ ಲಂಕಾ ಆಟಗಾರನೇ ಹೆಚ್ಚಾದರೆ, ಐಪಿಎಲ್‌ ಟೂರ್ನಿಯಲ್ಲಿ ಚೆನ್ನೈ ಪ್ರತಿನಿಧಿಸಬಾರದು,” ಎಂದು ಅಭಿಮಾನಿಯೊಬ್ಬರು ಟ್ವೀಟ್‌ ಮಾಡಿದ್ದಾರೆ.



Read more

[wpas_products keywords=”deal of the day gym”]