The New Indian Express
ಹೊಸದಿಲ್ಲಿ: ರಾಷ್ಟ್ರದಾದ್ಯಂತ ಕೋವಿಡ್-19 ಪ್ರಕರಣಗಳಲ್ಲಿ ನಿರಂತರ ಇಳಿಕೆಯ ಪ್ರವೃತ್ತಿ ಕಂಡುಬರುತ್ತಿರುವುದಾಗಿ ಹೇಳಿರುವ ಕೇಂದ್ರ ಸರ್ಕಾರ, ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ತಮ್ಮ ವಲಯಗಳಲ್ಲಿನ ಹೊಸ ಪ್ರಕರಣಗಳು ಮತ್ತು ಪಾಸಿಟಿವಿಟಿ ದರ ಪರಿಗಣಿಸಿದ ನಂತರ ಹೆಚ್ಚುವರಿ ಕೋವಿಡ್-19 ನಿರ್ಬಂಧಗಳ ಪರಾಮರ್ಶೆ, ತಿದ್ದುಪಡಿ ಅಥವಾ ತೆಗೆದುಹಾಕುವಂತೆ ಹೇಳಿದೆ.
ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಜನವರಿ 21 ರಿಂದಲೂ ದೇಶದಲ್ಲಿ ಕೊರೋನಾವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರ ಇಳಿಕೆ ಕಂಡುಬರುತ್ತಿರುವುದಾಗಿ ತಿಳಿಸಿದ್ದಾರೆ.
ಕಳೆದ ವಾರದಲ್ಲಿ ಸರಾಸರಿ ದೈನಂದಿನ ಪ್ರಕರಣಗಳು 50,476 ಆಗಿದ್ದು, ಕಳೆದ 24 ಗಂಟೆಗಳಲ್ಲಿ 27,409 ಹೊಸ ಪ್ರಕರಣಗಳು ವರದಿಯಾಗಿವೆ. ದೈನಂದಿನ ಕೇಸ್ ಪಾಸಿಟಿವಿಟಿ ದರ ಮಂಗಳವಾರ 3.63 ಶೇಕಡಾಕ್ಕೆ ಕುಸಿದಿದೆ. ಜನವರಿ ತಿಂಗಳಲ್ಲಿ ಹೆಚ್ಚಿನ ಪ್ರಕರಣಗಳ ಉಲ್ಬಣದಿಂದಾಗಿ ಕೆಲವು ರಾಜ್ಯಗಳು ತಮ್ಮ ಗಡಿಗಳಲ್ಲಿ ಮತ್ತು ವಿಮಾನ ನಿಲ್ದಾಣಗಳಲ್ಲಿ ಹೆಚ್ಚುವರಿ ನಿರ್ಬಂಧಗಳನ್ನು ವಿಧಿಸಿದ್ದವು ಎಂದು ಅವರು ಹೇಳಿದ್ದಾರೆ.
ಕೋವಿಡ್-19 ಸವಾಲನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಾಗ, ರಾಜ್ಯದ ಗಡಿಗಳಲ್ಲಿ ಹೇರಲಾದ ಹೆಚ್ಚುವರಿ ನಿರ್ಬಂಧಗಳಿಂದ ಜನರ ಚಲನೆ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಅಡ್ಡಿಯಾಗಬಾರದು ಎಂಬುದು ಅಷ್ಟೇ ಮುಖ್ಯ ಎಂದು ಭೂಷಣ್ ಪತ್ರದಲ್ಲಿ ತಿಳಿಸಿದ್ದಾರೆ.
“ಪ್ರಸ್ತುತ ರಾಷ್ಟ್ರದಾದ್ಯಂತ ಪ್ರಕರಣದ ಹಾದಿ ನಿರಂತರವಾದ ಇಳಿಮುಖ ಪ್ರವೃತ್ತಿಯನ್ನು ತೋರಿಸುತ್ತಿರುವುದರಿಂದ, ಹೊಸ ಪ್ರಕರಣಗಳ ಪ್ರವೃತ್ತಿ, ಸಕ್ರಿಯ ಪ್ರಕರಣಗಳು ಮತ್ತು ಪಾಸಿಟಿವಿಟಿ ದರವನ್ನು ಪರಿಗಣಿಸಿದ ನಂತರ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಹೆಚ್ಚುವರಿ ನಿರ್ಬಂಧಗಳನ್ನು ಪರಿಶೀಲಿಸಿ ತಿದ್ದುಪಡಿ ಮಾಡಿದರೆ ಅದು ಉಪಯುಕ್ತವಾಗಿರುತ್ತದೆ ಎಂದು ಅವರು ಹೇಳಿದ್ದಾರೆ.
Read more
[wpas_products keywords=”deal of the day”]