Karnataka news paper

ಭೀಕರ ಬರಗಾಲದ ಎದೆ ನಡುಗಿಸುವ ಚಿತ್ರ: ಆಹಾರ, ನೀರು ಇಲ್ಲದೆ ಸಾಯುತ್ತಿವೆ ಜಿರಾಫೆಗಳು


ಹೈಲೈಟ್ಸ್‌:

  • ಕೀನ್ಯಾದಲ್ಲಿ ಭೀಕರ ಬರಗಾಲದಿಂದ ಬಳಲಿ ಸಾಯುತ್ತಿವೆ ಜಿರಾಫೆಗಳು
  • ಆರು ಜಿರಾಫೆಗಳ ಕಳೇಬರದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್
  • ಕುಡಿಯಲು ನೀರು, ತಿನ್ನಲು ಆಹಾರವಿಲ್ಲದೆ ಹಸಿವಿನಿಂದ ಪರದಾಟ
  • ಸಾಕುಪ್ರಾಣಿಗಳೊಂದಿಗೆ ಊರು ಬಿಟ್ಟು ಗುಳೆ ಹೋಗುತ್ತಿರುವ ಜನರು

ನೈರೋಬಿ: ಭೀಕರ ನೆರೆ ಮತ್ತು ಕ್ಷಾಮ ಎರಡೂ ನಿಸರ್ಗ ಹಾಗೂ ಅದನ್ನು ಅವಲಂಬಿಸಿರುವ ಜೀವ ಸಂಕುಲದ ದುರಂತ ಅಂತ್ಯಗಳು, ಸಾಲು ಸಾಲು ಸಂಕಷ್ಟಗಳಿಗೆ ಕಾರಣವಾಗುತ್ತದೆ. ಕೀನ್ಯಾದಲ್ಲಿ ಬರಗಾಲ ಜಿರಾಫೆಗಳ ಸಂಖ್ಯೆಗೆ ಮಾರಕವಾಗಿ ಪರಿಣಮಿಸಿದೆ. ಬರಗಾಲದಿಂದ ನೀರು, ಆಹಾರ ಸಿಗದೆ ಹಸಿವಿನಿಂದ ಜಿರಾಫೆಗಳು ಒಂದರ ಮೇಲೊಂದು ಬಿತ್ತು ಸತ್ತಿರುವ ಕಳೇಬರದ ಚಿತ್ರಗಳು ಹೃದಯ ಹಿಂಡುವಂತಿವೆ.

ಅದರಲ್ಲಿಯೂ ಎತ್ತರದಿಂದ ತೆಗೆದ ಒಂದು ಫೋಟೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಕೀನ್ಯಾದ ವಾಜಿರ್‌ನಲ್ಲಿರುವ ಸಬೂಲಿ ವನ್ಯಜೀವಿ ಸಂರಕ್ಷಣಾ ಅರಣ್ಯದ ಒಳಗೆ ಆರು ಜಿರಾಫೆಗಳು ಹೆಣವಾಗಿ ಬಿದ್ದಿರುವುದನ್ನು ಈ ಚಿತ್ರ ಸೆರೆಹಿಡಿದಿದೆ. ಬಹುತೇಕ ಒಣಗಿ ಹೋದ ಜಲಾಶಯವೊಂದರಲ್ಲಿ ನೀರು ಹುಡುಕುತ್ತಾ ಕೆಸರಿನ ಒಳಗೆ ಇಳಿದಿದ್ದ ಜಿರಾಫೆಗಳು ಅಲ್ಲಿಯೇ ಸಿಲುಕಿಕೊಂಡಿದ್ದವು. ಅಲ್ಲಿಂದ ಹೊರಬರಲಾಗದೆ ಪರದಾಡಿ ಮೃತಪಟ್ಟಿದ್ದವು. ಆ ಜಲಾಶಯದ ನೀರು ಕಲುಷಿತವಾಗಬಾರದು ಎಂಬ ಉದ್ದೇಶದಿಂದ ಅಲ್ಲಿಂದ ಜಿರಾಫೆ ಕಳೇಬರಗಳನ್ನು ಬೇರೆ ಕಡೆಗೆ ಸಾಗಿಸಿ ಅಲ್ಲಿ ಈ ಚಿತ್ರಗಳನ್ನು ತೆಗೆಯಲಾಗಿದೆ ಎಂದು ಹೇಳಲಾಗಿದೆ.
Ndakasi: ಬಹು ಪ್ರಸಿದ್ಧ ‘ಸೆಲ್ಫಿ ಕ್ವೀನ್’ ಗೊರಿಲ್ಲಾ ಇನ್ನಿಲ್ಲ; ಪಾಲಕನ ತೋಳುಗಳಲ್ಲೇ ಕೊನೆಯುಸಿರೆಳೆದ ನಕಾಸಿ
ಕೀನ್ಯಾ ಉತ್ತರ ಭಾಗದಲ್ಲಿ ಸೆಪ್ಟೆಂಬರ್‌ ಬಳಿಕ ವಾಡಿಕೆಗಿಂತ ಶೇ 30ಕ್ಕಿಂತಲೂ ಕಡಿಮೆ ಮಳೆಯಾಗಿದೆ. ಇದರಿಂದ ಈ ಪ್ರದೇಶಗಳಲ್ಲಿ ತೀವ್ರ ಬರಗಾಲ ಉಂಟಾಗಿದೆ. ಮಳೆ ಕೊರತೆಯು ಈ ಭಾಗದಲ್ಲಿ ವನ್ಯಜೀವಿಗಳ ಮೇಲೆ ಆಘಾತಕಾರಿ ಪರಿಣಾಮ ಉಂಟುಮಾಡಿದೆ. ಇಲ್ಲಿನ ಅರಣ್ಯ ಪ್ರದೇಶಗಳಲ್ಲಿ ಆಹಾರ ಹಾಗೂ ನೀರಿನ ಅಭಾವ ತಲೆದೋರಿದೆ.

ಪ್ರಾಣಿಗಳು ಮಾತ್ರವಲ್ಲ, ಕೀನ್ಯಾದ ಅಂದಾಜು 2.1 ಮಿಲಿಯನ್ ಜನರು ಅತೀವ ಕ್ಷಾಮದಿಂದ ಹಸಿವಿನಿಂದ ಬಳಲುತ್ತಿದ್ದಾರೆ. ಇಲ್ಲಿನ 2.9 ಮಿಲಿಯನ್ ಜನರಿಗೆ ತುರ್ತು ಮಾನವೀಯ ನೆರವಿನ ಅಗತ್ಯವಿದೆ ಎಂದು ವಿಶ್ವಸಂಸ್ಥೆ ಮಂಗಳವಾರ ಹೇಳಿದೆ. ಕೀನ್ಯಾದ ಅನೇಕ ಭಾಗಗಳಲ್ಲಿ ದಶಕಗಳಲ್ಲಿಯೇ ಅತಿ ಕಡಿಮೆ ಮಳೆಯಾಗಿದೆ.

ಜನರು ಮತ್ತು ಸಾಕುಪ್ರಾಣಿಗಳಿಗೆ ಕುಡಿಯುವ ನೀರಿನ ಆಧಾರವಾಗಿದ್ದ ಜಲಮೂಲಗಳು ಒಣಗಿ ಹೋಗಿವೆ. ಇದರಿಂದ ಜನರು ಗುಂಪುಗೂಡಿ ದೂರದ ಊರುಗಳಿಗೆ ಗುಳೆ ಹೋಗುತ್ತಿದ್ದಾರೆ. ಇದರಿಂದ ಜನಸಮುದಾಯಗಳ ನಡುವೆ ಉದ್ವಿಗ್ನತೆಗೆ ಕಾರಣವಾಗುತ್ತಿದೆ. ಹೀಗಾಗಿ ಅಂತರ್ ಸಮುದಾಯ ಸಂಘರ್ಷಗಳು ಶುರುವಾಗಿವೆ ಎಂದು ಮಾನವೀಯ ವ್ಯವಹಾರಗಳ ಸಂಯೋಜನೆಯ ವಿಶ್ವಸಂಸ್ಥೆಯ ಕಚೇರಿ ತಿಳಿಸಿದೆ.
ಭಾರತದಲ್ಲಿ ಮೊದಲ ಬಾರಿ ಬಲು ಅಪರೂಪದ ‘ಗುಲಾಬಿ’ ಚಿರತೆ ಪತ್ತೆ
ವನ್ಯಜೀವಿಗಳು ಬಹಳ ಅಪಾಯದಲ್ಲಿವೆ. ಸಾಕುಪ್ರಾಣಿಗಳಿಗೆ ಹೇಗೋ ನೀರು ಆಹಾರ ಪೂರೈಸಲಾಗುತ್ತಿದೆ. ಆದರೆ ವನ್ಯಜೀವಿಗಳಿಗೆ ಯಾವುದೇ ನೆರವು ಸಿಗುತ್ತಿಲ್ಲ. ನದಿ ತೀರಗಳಲ್ಲಿನ ಕೃಷಿ ಚಟುವಟಿಕೆಗಳು ಜಿರಾಫೆಗಳಿಗೆ ನೀರು ಕುಡಿಯುವ ಮಾರ್ಗಕ್ಕೆ ಅಡ್ಡಿಯುಂಟುಮಾಡುತ್ತಿವೆ. ಇದರಿಂದ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗಿದೆ ಎಂದು ಬೌರ್-ಅಲ್ಗಿ ಜಿರಾಫೆ ಸಂರಕ್ಷಣ ಅರಣ್ಯದ ಬಟ್ ಇಬ್ರಾಹಿಂ ಅಲಿ ತಿಳಿಸಿದ್ದಾರೆ.

ಗರಿಸ್ಸಾ ಕೌಂಟಿಯಲ್ಲಿ ಸುಮಾರು 4,000 ಜಿರಾಫೆಗಳು ಬರಗಾಲದ ಕಾರಣದಿಂದ ಜೀವ ಕಳೆದುಕೊಳ್ಳುವ ಅಪಾಯದಲ್ಲಿವೆ. ವಾಜಿರ್ ಕೌಂಟಿಯಲ್ಲಿ ಕಳೆದ ಎರಡು ಮೂರು ತಿಂಗಳಲ್ಲಿ ನೂರಾರು ಸಾಕು ಪ್ರಾಣಿಗಳು ಹಸಿವು ಮತ್ತು ಬಾಯಾರಿಕೆಯಿಂದ ಬಳಲಿ ಮೃತಪಟ್ಟಿವೆ. ಹಸುಗಳ ಸಾಕಾಣಿಕೆ ಜನಸಾಮಾನ್ಯರಿಗೆ ಹೊರೆಯಾಗಿದೆ. ಅವುಗಳಿಗೆ ಸಾಕಷ್ಟು ಆಹಾರ ಮತ್ತು ನೀರು ಒದಗಿಸಲು ಆಗುತ್ತಿಲ್ಲ. ಹೀಗಾಗಿ ಪ್ರಾಣಿಗಳನ್ನು ತ್ಯಜಿಸಿ ಗುಳೆ ಹೋಗುತ್ತಿರುವ ದೃಶ್ಯಗಳು ಮನಕಲಕುವಂತಿವೆ.

giraffe



Read more