Karnataka news paper

ಗುತ್ತಿಗೆ ಕಾಮಗಾರಿಗಳಲ್ಲಿ ಶೇ 40ರಷ್ಟು ಲಂಚ: ತನಿಖೆಗೆ ಸಿದ್ದರಾಮಯ್ಯ ಆಗ್ರಹ


ಬೆಳಗಾವಿ: ‘ಶೇ 40ರಷ್ಟು ಲಂಚ ಬೇಡಿಕೆ ವಿಚಾರವಾಗಿ ಗುತ್ತಿಗೆದಾರರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಅಥವಾ ಸದನ ಸಮಿತಿ ರಚಿಸಬೇಕು’ ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

‘ನಮ್ಮದು (ಕಾಂಗ್ರೆಸ್) 10 ಪರ್ಸೆಂಟ್‌ ಸರ್ಕಾರ ಎಂದು ಮೋದಿ ದೂರಿದ್ದರು. ಅದನ್ನೂ ಸೇರಿಸಿ ಮೋದಿ ತನಿಖೆ ‌ಮಾಡಿಸಲಿ’ ಎಂದು ಸವಾಲು ಹಾಕಿದ ಸಿದ್ದರಾಮಯ್ಯ, ‘ಟ್ರ್ಯಾಕ್ಟರ್ ಪ್ರತಿಭಟನೆ ಮೂಲಕ ಸರ್ಕಾರದ ಮತ್ತು ಸಾರ್ವಜನಿಕರ ಗಮನಸೆಳೆದಿದ್ದೇವೆ. ರಾಜ್ಯ ಸರ್ಕಾರ ಭ್ರಷ್ಟಾಚಾರದಿಂದ ತುಂಬಿ ಹೋಗಿದೆ. ಅದಕ್ಕೆ ಪೂರಕವಾಗಿ ಗುತ್ತಿಗೆದಾರರು ಆರೋಪ ಮಾಡಿದ್ದಾರೆ’ ಎಂದರು.

‘ರಾಜ್ಯದಲ್ಲಿ ಎಲ್ಲ ಅಭಿವೃದ್ಧಿ ಕೆಲಸಗಳೂ ಸ್ಥಗಿತಗೊಂಡಿವೆ. ನೆರೆ ಮತ್ತು ಅತಿವೃಷ್ಟಿ ಸಂತ್ರಸ್ತರಿಗೆ ಪರಿಹಾರ  ನೀಡಿಲ್ಲ. ಕೇಂದ್ರದಿಂದ ಒಂದು ರೂಪಾಯಿಯೂ ಬಂದಿಲ್ಲ. ಕೋವಿಡ್‌ನಿಂದ ಮೃತಪಟ್ಟವರಿಗೆ, ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಪರಿಹಾರ ಕೊಟ್ಟಿಲ್ಲ’ ಎಂದು ದೂರಿದ ಅವರು, ‘ಬೆಳೆ ಪರಿಹಾರ ಮೊತ್ತವನ್ನು 3 ಪಟ್ಟು ಹೆಚ್ಚಿಸಬೇಕು’ ಎಂದು ಒತ್ತಾಯಿಸಿದರು.

‘ಕೇಂದ್ರ ಸರ್ಕಾರದ ಪರಿಹಾರಕ್ಕೆ ಕಾಯದೆ ನೀವೇ ಕೊಡಿ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಅದನ್ನು ನಾನು ಸ್ವಾಗತಿಸುತ್ತೇನೆ’ ಎಂದರು.



Read more from source