Karnataka news paper

ರಾಸಾಯನಿಕ ಕಾರ್ಖಾನೆಯಲ್ಲಿ ಭಾರಿ ಸ್ಫೋಟ: ಕನಿಷ್ಠ ಇಬ್ಬರ ಸಾವು, ಅನೇಕರಿಗೆ ಸುಟ್ಟ ಗಾಯ


ಹೈಲೈಟ್ಸ್‌:

  • ಗುಜರಾತ್‌ನ ಪಂಚಮಹಲ್ ಜಿಲ್ಲೆಯ ಗೋಘಂಬಾ ತಾಲೂಕಿನಲ್ಲಿ ಗುರುವಾರ ಅವಘಡ
  • ಗುಜರಾತ್ ಫ್ಲೋರೊ ಕೆಮಿಕಲ್ಸ್ ಫ್ಯಾಕ್ಟರಿಯಲ್ಲಿ ಭಾರಿ ಸ್ಫೋಟದ ಬಳಿಕ ಹೊತ್ತಿಕೊಂಡ ಬೆಂಕಿ
  • ಸುಮಾರು ಹತ್ತು ಕಿಮೀ ದೂರದವರೆಗೂ ಕೇಳಿಸಿದ ಸ್ಫೋಟದ ಸದ್ದು, ಬೆಂಕಿ ನಿಯಂತ್ರಣಕ್ಕೆ

ಅಹ್ಮದಾಬಾದ್: ಗುಜರಾತ್‌ನ ಪಂಚಮಹಲ್ ಜಿಲ್ಲೆಯಲ್ಲಿನ ಕಾರ್ಖಾನೆಯೊಂದರಲ್ಲಿ ಗುರುವಾರ ಸಂಭವಿಸಿದ ಭಾರಿ ಸ್ಫೋಟದಲ್ಲಿ ಕನಿಷ್ಠ ಇಬ್ಬರು ಮೃತಪಟ್ಟಿದ್ದು, ಸುಮಾರು 15 ಮಂದಿ ಗಾಯಗೊಂಡಿದ್ದಾರೆ. ಗುಜರಾತ್ ಫ್ಲೋರೊ ಕೆಮಿಕಲ್ಸ್ ಫ್ಯಾಕ್ಟರಿಯಲ್ಲಿ ಈ ಸ್ಫೋಟ ಸಂಭವಿಸಿದೆ.

ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಹಲವು ಕಿಲೋಮೀಟರ್‌ಗಳಷ್ಟು ದೂರದವರೆಗೂ ಶಬ್ದ ಕೇಳಿದೆ. ಫ್ಯಾಕ್ಟರಿಯಲ್ಲಿ ರಕ್ಷಣಾ ಕಾರ್ಯಚರಣೆ ಹಾಗೂ ಬೆಂಕಿ ನಂದಿಸುವ ಕಾರ್ಯ ತ್ವರಿತಗತಿಯಲ್ಲಿ ನಡೆದಿದೆ. ಈಗ ಬೆಂಕಿ ನಿಯಂತ್ರಣಕ್ಕೆ ಬಂದಿದೆ ಎಂದು ಪಂಚಮಹಲ್ ಪೊಲೀಸ್ ವರಿಷ್ಠಾಧಿಕಾರಿ ಲೀನಾ ಪಾಟೀಲ್ ತಿಳಿಸಿದ್ದಾರೆ.
ಬೆಳ್ಳಂಬೆಳಿಗ್ಗೆ ಭಾರಿ ಅಗ್ನಿ ಅನಾಹುತ: 45 ದುಬಾರಿ ಬಿಎಂಡಬ್ಲ್ಯೂ ಕಾರುಗಳು ಸುಟ್ಟು ಕರಕಲು
ಗೋಘಂಬಾ ತಾಲೂಕಿನ ರಂಜಿತನಗರ ಗ್ರಾಮದ ಸಮೀಪ ಇರುವ ಗುಜರಾತ್ ಫ್ಲೂರೋ ಕೆಮಿಕಲ್ಸ್ ಲಿ (GFL) ಕಾರ್ಖಾನೆಯ ರಾಸಾಯನಿಕ ಉತ್ಪಾದನಾ ಸ್ಥಾವರದಲ್ಲಿ ಗುರುವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಈ ಸ್ಫೋಟ ಉಂಟಾಗಿದೆ. ಪಂಚಮಹಲ್‌ನಲ್ಲಿ ಉಂಟಾದ ಭಾರಿ ಸ್ಫೋಟದ ಸದ್ದು 10 ಕಿಮೀ ದೂರದವರೆಗೂ ಕೇಳಿಸಿದೆ ಎಂದು ಗೋಧ್ರಾದಲ್ಲಿನ ಅಧಿಕಾರಿಗಳು ಹೇಳಿದ್ದಾರೆ.

ಸಮೀಪದ ಗೋಧ್ರಾ, ಹಾಲೊಲ್ ಮತ್ತು ಕಾಲೊಲ್ ಪಟ್ಟಣಗಳಿಂದ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದವು. ಭಾರಿ ಪ್ರಮಾಣದಲ್ಲಿ ಜ್ವಾಲೆಗಳನ್ನು ಚಿಮ್ಮಿಸುತ್ತಿದ್ದ ಬೆಂಕಿಯನ್ನು ಸತತ ಐದು ಗಂಟೆಗಳ ಕಾರ್ಯಾಚರಣೆ ಬಳಿಕ ನಿಯಂತ್ರಣಕ್ಕೆ ತಂದರು.

‘ಸುಮಾರು 15 ಕಾರ್ಮಿಕರು ಸ್ಫೋಟ ಹಾಗೂ ತರುವಾಯ ಹೊತ್ತಿಕೊಂಡ ಬೆಂಕಿಯಿಂದ ಗಾಯಗೊಂಡಿದ್ದಾರೆ. ಅವರನ್ನು ಬೇರೆ ಬೇರೆ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅವರ ಪೈಕಿ ಕೆಲವರಲ್ಲಿ ವಿಪರೀತ ಸುಟ್ಟ ಗಾಯಗಳಾಗಿವೆ. ಕಾರ್ಖಾನೆ ಒಳಗೆ ಬದುಕಿ ಉಳಿದಿರಬಹುದಾದ ಮತ್ತು ಗಾಯಾಳು ವ್ಯಕ್ತಿಗಳಿಗಾಗಿ ಹುಡುಕಾಟ ಮುಂದುವರಿದಿದೆ’ ಎಂದು ಎಸ್‌ಪಿ ಲೀನಾ ಪಾಟೀಲ್ ತಿಳಿಸಿದ್ದಾರೆ.
ಇಂಧನ ಸಾಗಿಸುತ್ತಿದ್ದ ಟ್ರಕ್ ಸ್ಫೋಟಗೊಂಡು ಭೀಕರ ದುರಂತ: ಕನಿಷ್ಠ 62 ಮಂದಿ ಸಜೀವ ದಹನ
ಕೆಮಿಕಲ್ ಫ್ಯಾಕ್ಟರಿಯ ಸುತ್ತಮುತ್ತಲಿನ ಸುಮಾರು 5 ಕಿಮೀ ದೂರದ ಜಾಗದ ಮೇಲೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ. ಗಾಳಿಯಲ್ಲಿ ವಿಷಪೂರಿತ ಅನಿಲಗಳು ಸೇರ್ಪಡೆಯಾಗಿರುವುದರಿಂದ ಮತ್ತಷ್ಟು ಅಪಾಯ ತಪ್ಪಿಸಲು ಪ್ರಯತ್ನಿಸಲಾಗುತ್ತಿದೆ. ಸ್ಫೋಟ ಹೇಗೆ ಸಂಭವಿಸಿತು ಎನ್ನುವುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಕೆಲವು ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ.

ಜಿಎಫ್‌ಎಲ್ ಫ್ಲೋರೀನ್ ರಾಸಾಯನಿಕದಲ್ಲಿ 30ಕ್ಕೂ ಹೆಚ್ಚು ವರ್ಷಗಳ ಪರಿಣತಿ ಹೊಂದಿದೆ. ಅದು ಫ್ಲೋರೋಪಾಲಿಮರ್, ಫ್ಲೋರೋ- ಸ್ಪೆಷಾಲಿಟೀಸ್, ರೆಫ್ರಿಜರೆಂಟ್ಸ್ ಮತ್ತು ರಾಸಾಯನಿಕಗಳನ್ನು ತಯಾರಿಸುತ್ತದೆ. ಆಧುನಿಕ ಜಗತ್ತಿನ ಅಗತ್ಯಗಳಿಗೆ ತಕ್ಕಂತೆ ಸಾಮಗ್ರಿಗಳನ್ನು ಪೂರೈಕೆ ಮಾಡುತ್ತದೆ.



Read more