ಬೆಳಗಾವಿ: ‘ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಯಾವುದೇ ದಾಖಲೆ ಇಲ್ಲದಿದ್ದರೂ, ನಮ್ಮ ಸರ್ಕಾರವನ್ನು 10 ಪರ್ಸೆಂಟ್ ಸರ್ಕಾರ ಎಂದು ದೂರಿದ್ದರು. ಆದರೆ, ಈಗ ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ದಾಖಲೆಗಳಿವೆ. ನಮ್ಮ ಅವಧಿಯಲ್ಲಿನ ಕಾಮಗಾರಿಗಳನ್ನೂ ಸೇರಿಸಿ ಸಮಗ್ರ ತನಿಖೆ ನಡೆಸಲಿ’.
– ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಕಿದ ಸವಾಲಿದು.
ಇಲ್ಲಿ ಪತ್ರಕರ್ತರೊಂದಿಗೆ ಗುರುವಾರ ಮಾತನಾಡಿದ ಅವರು, ‘ರಾಜ್ಯದಲ್ಲಿರುವುದು ವಿಶ್ವ ಮಟ್ಟದಲ್ಲೇ ಅತಿ ದೊಡ್ಡ ಭ್ರಷ್ಟ ಸರ್ಕಾರ ಎಂದು ಗುತ್ತಿಗೆದಾರರ ಸಂಘದವರೇ ಹೇಳಿದ್ದಾರೆ. ಪ್ರತಿ ಹಂತದಲ್ಲೂ ಈ ಸರ್ಕಾರದಲ್ಲಿ ಲಂಚಾವತಾರ ತಾಂಡವವಾಡುತ್ತಿದೆ. ಇದರಿಂದ ಗುಣಮಟ್ಟದ ಕೆಲಸ ಸಾಧ್ಯವಾಗುತ್ತಿಲ್ಲ ಎಂದು ಗುತ್ತಿಗೆದಾರರೆ ಹೇಳುತ್ತಿದ್ದಾರೆ’ ಎಂದರು.
‘ಶೇ 40 ಕಮಿಷನ್ ಸೇರಿದಂತೆ ಹಲವು ವಿಚಾರಗಳಿಂದ ರಾಜ್ಯದ ಗೌರವಕ್ಕೆ ಧಕ್ಕೆಯಾಗುತ್ತಿದೆ. ಬೆಳೆ ಹಾನಿಗೆ ನಯಾಪೈಸೆ ಪರಿಹಾರ ಸಿಕ್ಕಿಲ್ಲ’ ಎಂದು ದೂರಿದರು.
‘ಕೇಂದ್ರದ ಅನುದಾನ ಕಾಯದೆ ಅವರಿಗೆ ಪರಿಹಾರ ನೀಡಿ, ಮನೆ ಕಟ್ಟಿಕೊಡಿ ಎಂದು ಬಿ.ಎಸ್. ಯಡಿಯೂರಪ್ಪ ಅವರೇ ಹೇಳಿದ್ದಾರೆ. ಅವರಿಗೆ ನಾವು ಧ್ವನಿ ಸೇರಿಸುತ್ತೇವೆ’ ಎಂದು ತಿಳಿಸಿದರು.
‘ಕೋವಿಡ್‌ನಿಂದ ನಷ್ಟ ಅನುಭವಿಸಿದವರಲ್ಲಿ ಯಾರಿಗೆ ಪರಿಹಾರ ಕೊಟ್ಟಿದ್ದಾರೆ ಎಂಬ ಪಟ್ಟಿ ಬಿಡುಗಡೆ ಮಾಡಲಿ’ ಎಂದು ಸವಾಲೆಸೆದರು.
‘ಇದು ಕೇವಲ ಬಿಜೆಪಿ ಸರ್ಕಾರವಲ್ಲ, ಸಂಯುಕ್ತ ಸರ್ಕಾರ. ಇದರ ವಿರುದ್ಧ ಹೋರಾಟಕ್ಕೆ ಜನರನ್ನು ಸೇರಿಸಬೇಕಿಲ್ಲ. ಜನರು ಮತ ಹಾಕುವ ಮೂಲಕ ನಮಗೆ ಬೆಂಬಲ ನೀಡಿದ್ದಾರೆ’ ಎಂದರು.
ಮತಾಂತರ ನಿಷೇಧ ಕಾಯ್ದೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಈಗಾಗಲೇ ಮತಾಂತರ ನಿಷೇಧ ಕಾಯ್ದೆ ಇದೆ. ಹೀಗಾಗಿ ಈಗ ಮತ್ತೊಂದು ಏಕೆ ಬೇಕು? ಬಿಜೆಪಿಯವರಿಗೆ ಮೇಲಿಂದ ಮೇಲೆ ಚುನಾವಣೆ ಸೋಲಾಗುತ್ತಿರುವುದನ್ನು ಒಪ್ಪಿಕೊಳ್ಳಲು ಆಗುತ್ತಿಲ್ಲ. ಸರ್ಕಾರದ ವಿರುದ್ಧ ಜನ ಬೇಸತ್ತು ರಾಜ್ಯದಲ್ಲಿ ಬದಲಾವಣೆ ಬಯಸುತ್ತಿದ್ದಾರೆ. ಅದನ್ನು ಮುಚ್ಚಿಕೊಳ್ಳಲು ಏನೇನೋ ಆಟ ಆಡುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.
‘ಮತಾಂತರವಾದರೆ 10 ವರ್ಷ ಜೈಲು ಎಂದು ಮಾಡಲು ಹೊರಟಿದ್ದಾರೆ ಎಂದು ಮಾಧ್ಯಮದಲ್ಲಿ ನೋಡಿದೆ. ರಾಜ್ಯದ ನೆಮ್ಮದಿ ಕೆಡಿಸಲು ಸರ್ಕಾರ ಈ ರೀತಿ ಮಾಡುತ್ತಿದೆ. ಜನರನ್ನು ಭಾವನಾತ್ಮಕವಾಗಿ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದೆ’ ಎಂದು ದೂರಿದರು.
‘ವಿಧಾನಪರಿಷತ್‌ನ 15 ಶಾಸಕರನ್ನು ಕಲಾಪದಿಂದ ಹೊರಗಿಟ್ಟು ಇತಿಹಾಸ ಬರೆಯಲಾಗಿದೆ. ಒಬ್ಬ ಮಂತ್ರಿ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದರೆ, ಆ ಬಗ್ಗೆಯೂ ನೋಟೀಸ್ ಕೊಟ್ಟು ಚರ್ಚಿಸಬೇಕು ಎಂದರೆ ಹೇಗೆ? ಇದು ಪ್ರಜಾಪ್ರಭುತ್ವದ ಸರ್ಕಾರವೇ? ಸಭಾಪತಿ ಬಸವರಾಜ ಹೊರಟ್ಟಿ ಅವರ ನಡೆಯ ಬಗ್ಗೆ ಅಚ್ಚರಿಯಾಗುತ್ತಿದೆ’ ಎಂದರು.
‘ಜನರ ಪರವಾಗಿ ಧ್ವನಿ ಎತ್ತಲು ನಾವು ಬಂದಿದ್ದೇವೆ. ಅದನ್ನು ಹೋರಾಟದ ಮೂಲಕ ನಿರ್ವಹಿಸುತ್ತೇವೆ’ ಎಂದು ಗುಡುಗಿದರು.
ಇದನ್ನೂ ಓದಿ– ಗುತ್ತಿಗೆ ಕಾಮಗಾರಿಗಳಲ್ಲಿ ಶೇ 40ರಷ್ಟು ಲಂಚ: ತನಿಖೆಗೆ ಸಿದ್ದರಾಮಯ್ಯ ಆಗ್ರಹ