Karnataka news paper

ಗಣಿತಶಾಸ್ತ್ರ ಪ್ರಾಧ್ಯಾಪಕಿಗೆ ಒಲಿದ ಒಲಿಂಪಿಕ್ಸ್ ಚಿನ್ನದ ಪದಕ!


Online Desk

ಬೆಂಗಳೂರು: ಇತ್ತೀಚೆಗೆ ನಡೆದ ಟೋಕಿಯೋ ಒಲಿಂಪಿಕ್ಸ್ ನ ಮಹಿಳಾ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನುಆಸ್ಟ್ರಿಯಾದ ಅನ್ನಾಕೀಸೆನ್‌ ಹೋಫರ್ ಪಡೆದಿದ್ದಾರೆ. ಈ ಮೂಲಕ ಆಸ್ಟ್ರಿಯಕ್ಕೆ ಸೈಕ್ಲಿಂಗ್‌ ವಿಭಾಗದಲ್ಲಿ, ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಮೊದಲ ಚಿನ್ನದ ಪದಕ ಗಳಿಸಿಕೊಟ್ಟರು.

ನಮಗೆ ಅವರ ಈ ಸಾಧನೆಯ ಪ್ರಸ್ತುತತೆ ಏನೆಂದರೆ ಅಧ್ಯಯನ ಮತ್ತು ಕ್ರೀಡೆ ಒಂದಕ್ಕೊಂದು ಪೂರಕ ಚಟುವಟಿಕೆಗಳು ಎನ್ನುವುದಕ್ಕೆ ಅವರೊಂದು ಅತ್ತ್ಯುತ್ತಮ ನಿದರ್ಶನ. ಪ್ರಸಕ್ತ ಸ್ವಿಟ್ಜರ್‌ಲ್ಯಾಂಡ್‌ನ ಶಿಕ್ಷಣಸಂಸ್ಥೆಯೊಂದರಲ್ಲಿ ಗಣಿತಶಾಸ್ತ್ರದ ಪ್ರಾಧ್ಯಾಪಕಿಯಾಗಿ ಕೆಲಸಮಾಡುತ್ತಿರುವ ಅನ್ನಾ, ವಿಯೆನ್ನಾದ ತಾಂತ್ರಿಕ ವಿಶ್ವವಿದ್ಯಾನಿಲಯದಿಂದ ಬಿಎಸ್ಸಿ, ಕೇಂಬ್ರಿಡ್ಜ್‌ ವಿಶ್ವ ವಿದ್ಯಾನಿಲಯದಿಂದ ಎಂಎಸ್ಸಿ ಮತ್ತು ಕ್ಯಾಟಲೊನಿಯಾದ ಪಾಲಿಟೆಕ್ನಿಕ್ ವಿಶ್ವ ವಿದ್ಯಾನಿಲಯದಿಂದ ಪಿಎಚ್‌ಡಿ ಪಡೆದಿದ್ದಾರೆ. 
ಸಾಮಾನ್ಯವಾಗಿ ಕ್ರೀಡೆಯಲ್ಲಿ ವಿಶೇಷ ಆಸಕ್ತಿ ತೋರಿಸುವ ಮಕ್ಕಳು, ವಿದ್ಯೆಯಲ್ಲಿ ಹಿಂದೆ ಉಳಿಯುತ್ತಾರೆ ಎಂದು ತಪ್ಪಾಗಿ ಗ್ರಹಿಸುವ ಹೆತ್ತವರು ತಮ್ಮ ಮಕ್ಕಳ ಕ್ರೀಡಾಸಕ್ತಿಗೆ ತಣ್ಣೀರೆರಚುವುದೇ ಹೆಚ್ಚು. ಈ ನಿಟ್ಟಿನಲ್ಲಿ, ಅನ್ನಾ ಅವರ ಸಾಧನೆ ಕ್ರೀಡಾಸಕ್ತರಿಗೆ ಪ್ರೇರಣೆಯಾಗಬಹುದು ಮತ್ತು ಕ್ರೀಡೆಯ ಕುರಿತಾಗಿರುವ ತಪ್ಪು ಗ್ರಹಿಕೆಯನ್ನು ಹೋಗಲಾಡಿಸಲು ಸಹಾಯಕವಾಗಬಹುದು.

ಒಲಿಂಪಿಕ್ಸ್ ಸೈಕ್ಲಿಂಗ್  ಸ್ಪರ್ಧೆಯಲ್ಲಿ ಘಟಾನುಘಟಿಗಳಿಗೆ ಹೋಲಿಸಿದರೆ ಅನ್ನಾ ಅನನುಭವಿಯೆಂದೇ ಪರಿಗಣಿಸಲ್ಪಟ್ಟಿದ್ದರು. ‘ನಾನು ಈ ಪಂದ್ಯಕ್ಕಾಗಿ ನನ್ನ ಕಾಲಿನ ಪ್ರತಿಯೊಂದು ಸ್ನಾಯುವನ್ನು ಪಳಗಿಸಿ ಹತೋಟಿಯಲ್ಲಿಟ್ಟಿದ್ದೇನೆ’ ಎಂದು ಹೇಳುವ ಅನ್ನಾ, ಸ್ಪರ್ಧೆಯಲ್ಲಿ ಗೆಲ್ಲುವ ಸಂಪೂರ್ಣ ಭರವಸೆಯಿಲ್ಲದ ವಾಸ್ತವದ ಅರಿವಿದ್ದರೂ, ತನ್ನ ಶಕ್ತಿ ಮೀರಿ ಪ್ರಯತ್ನಿಸಲು ನಿರ್ಧರಿಸಿದರು. ಅವರೇ ಹೇಳಿದಂತೆ, ‘ಕೆಲವೊಮ್ಮೆ  ಯಾವುದೇ ನಿರೀಕ್ಷೆಗಳಿಲ್ಲದೇ ಭಾಗವಹಿಸುವ ಸ್ಪರ್ಧೆ, ನಮ್ಮಿಂದ ಅತ್ಯುತ್ತಮವಾದ ಸಾಧನೆಯನ್ನು ಮಾಡಿಸುತ್ತದೆ.’ ಪಂದ್ಯದ ನಂತರ ಸ್ವಲ್ಪಸಮಯ ಅವರಿಗೆ, ತನಗೆ ಚಿನ್ನದ ಪದಕ ಸಿಕ್ಕಿದೆಯೆಂದು ನಂಬಲಾಗಲಿಲ್ಲ. ಈ ಸಂದರ್ಭದಲ್ಲಿ, ತನ್ನ ಪೋಷಕರು ಮತ್ತು ಸ್ನೇಹಿತರಿಗೆ ಸ್ವತಃ ಸೈಕ್ಲಿಂಗ್ನಲ್ಲಿ ಆಸಕ್ತಿ ಇಲ್ಲದಿದ್ದರೂ, ತನ್ನ ಮನದಿಚ್ಛೆಯಂತೆ ಮುಂದುವರಿಯಲು ಪ್ರೋತ್ಸಾಹಿಸಿದನ್ನು ಕೃತಜ್ಞತೆಯಿಂದ ಅನ್ನಾ ನೆನಪಿಸಿಕೊಳ್ಳುತ್ತಾರೆ.

ವಿಶೇಷವೆಂದರೆ, ಅನ್ನಾ ತನ್ನ ಸೈಕ್ಲಿಂಗ್ ತರಬೇತಿಗಾಗಿ, ತಜ್ಞ ತರಬೇತುದಾರರನ್ನು ಹೆಚ್ಚಾಗಿ ಅವಲಂಬಿಸದೆ, ಅದಕ್ಕೆ ಬೇಕಾದ ದೈಹಿಕ ಪೋಷಣೆ ಮತ್ತು ತಂತ್ರಗಾರಿಕೆಯನ್ನು ತನ್ನಿಷ್ಟದಂತೆ ಸ್ವತಃ ತಾನೇ ರೂಪಿಸಿಕೊಂಡು. ಅದನ್ನು ವಸ್ತುಶಃ ಅನುಸರಿಸಿಕೊಳ್ಳುತ್ತಾ, ಒಲಿಂಪಿಕ್ಸ್ ಸಿದ್ಧತೆ ನಡೆಸಿದ್ದರು. ಈ ರೀತಿಯಲ್ಲಿ ಅವರೊಬ್ಬ ಏಕಾಂಗಿ ಸಾಹಸಿಯೆನ್ನಬಹುದು. ಅವರ ಅಭೂತಪೂರ್ವ ಶೈಕ್ಷಣಿಕ ಸಾಧನೆಯೂ ಕೂಡ ಈ ಆತ್ಮವಿಶ್ವಾಸವನ್ನು ಅವರಲ್ಲಿ ತುಂಬಿಸಿರಬಹುದು.

‘ನನ್ನ ವಿಭಿನ್ನತೆ ಮತ್ತು ಇಚ್ಚಾಶಕ್ತಿಯೇ ನನ್ನ ಬಂಡವಾಳ ಹಾಗೂ ಯಶಸ್ಸಿನ ಗುಟ್ಟು. ನಾನು ಎಲ್ಲರಂತಿರಲು ಇಷ್ಟಪಡುವುದಿಲ್ಲ. ಆತ್ಮಸಾಕ್ಷಿಯ ಮಾತನಷ್ಟೇ ಆಲಿಸುತ್ತೇನೆ’ ಎನ್ನುವ ಅನ್ನಾ, ‘ನನ್ನ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಮುಂದಿನ ಸೆಮಿಸ್ಟರ್ನ ನನ್ನ ತರಗತಿಗಾಗಿ ಕಾಯುತ್ತಿದ್ದಾರೆ. ಅದಕ್ಕಾಗಿ ನಾನು ಸಿದ್ಧತೆ ನಡೆಸಬೇಕಾಗಿದೆ. ಆದಷ್ಟು ಬೇಗ ಜನಗಂಗುಳಿಯಿಂದ ದೂರವಾಗಿ ಸಾಮಾನ್ಯ ಬದುಕಿಗೆ ಮರಳಲು ಕಾಯುತ್ತಿದ್ದೇನೆ.’ ಎನ್ನುವ ವಿನಮ್ರತೆಯನ್ನು ಪ್ರದರ್ಶಿಸುತ್ತಾರೆ.

ಈ ಹಿನ್ನೆಲೆಯಲ್ಲಿ ಅನ್ನಾ ಕೀಸೆನ್‌ ಹೋಫರ್, ಕ್ರೀಡೆ ಮತ್ತು ಅಧ್ಯಯನದಲ್ಲಿ ಸಿದ್ಧಿಸಿರುವ ಸಮತೋಲಿತ ತಸಾಧನೆಯನ್ನು ಆಧಾರವಾಗಿಟ್ಟುಕೊಂಡು ನಾವಿಲ್ಲಿ ಚರ್ಚಿಸಬಹುದಾದ ಮುಖ್ಯಪ್ರಶ್ನೆಯೆಂದರೆ- ಅಧ್ಯಯನ ಮತ್ತು ಕ್ರೀಡೆಯನ್ನು ಒಂದಕ್ಕೊಂದು ಪೂರಕ ಚಟುವಟಿಕೆಯನ್ನಾಗಿ ನೋಡಲು ಸಾಧ್ಯವಿಲ್ಲವೇ? ಈ ಕುರಿತು, ಶಿಕ್ಷಣ ತಜ್ಞರ ಸಂಶೋಧನೆಗಳು ಗಮನಿಸಿದಂತೆ, ಯಾವುದಾದರೂ ಕ್ರೀಡೆಯಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಶಿಸ್ತು, ಪರಿಶ್ರಮ, ಏಕಾಗ್ರತೆ ಹಾಗೂ ಸಮೂಹ ಪರಿಕಲ್ಪನೆ ಜಾಗ್ರತಗೊಂಡಿರುತ್ತದೆ. ಈ ಅಂಶಗಳೆಲ್ಲವು ವಿದ್ಯಾರ್ಜನೆಗೂ ಕೂಡ ಅಷ್ಟೇಮುಖ್ಯ. ಹಾಗೆಯೇ, ಎಲ್ಲಾ ಕ್ರೀಡೆಗಳಿಗೆ ಅಗತ್ಯವಾಗಿರುವ ದೈಹಿಕ ಮತ್ತು ಮಾನಸಿಕ ಕೌಶಲಗಳು ಕೂಡ, ಮೂಲತಃ ವೈಜ್ಞಾನಿಕ ಪರಿಕಲ್ಪನೆಯನ್ನು ಆಧರಿಸಿವೆ.



Read more…

[wpas_products keywords=”deal of the day sports items”]