Karnataka news paper

ಪಾಕಿಸ್ತಾನ: ಇಮ್ರಾನ್ ಖಾನ್ ಸರ್ಕಾರಕ್ಕೆ ಸಂಕಷ್ಟ; ಅವಿಶ್ವಾಸ ನಿರ್ಣಯ ಮಂಡಿಸಲು ಪ್ರತಿಪಕ್ಷಗಳು ನಿರ್ಧಾರ


Online Desk

ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಚೀನಾ ಪ್ರವಾಸದಿಂದ ಹಿಂತಿರುಗಿದ ಬಳಿಕ ಅವರ ಕುರ್ಚಿಗೆ ಬಿಕ್ಕಟ್ಟು ಎದುರಾಗಿದೆ. ಪಾಕಿಸ್ತಾನದ ವಿರೋಧ ಪಕ್ಷಗಳು ಒಟ್ಟಾಗಿ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ನಿರ್ಧರಿಸಿವೆ. ಅವಿಶ್ವಾಸ ನಿರ್ಣಯದ ವೇಳೆ ಇಮ್ರಾನ್ ಖಾನ್ ಸರ್ಕಾರ ಪತನವಾಗಲಿದೆ ಎಂದು ಪ್ರತಿಪಕ್ಷಗಳು ಹೇಳಿಕೊಳ್ಳುತ್ತಿವೆ.

ಪಾಕಿಸ್ತಾನಿ ಪತ್ರಿಕೆ ಡಾನ್ ವರದಿಯ ಪ್ರಕಾರ, ಬಿಲಾವಲ್ ಭುಟ್ಟೋ ಮತ್ತು ನವಾಜ್ ಷರೀಫ್ ಅವರ ಪಕ್ಷ ಜಂಟಿಯಾಗಿ ಪಾಕಿಸ್ತಾನ್ ಡೆವಲಪ್‌ಮೆಂಟ್ ಮೂವ್‌ಮೆಂಟ್ ಎಂಬ ಮೈತ್ರಿಕೂಟವನ್ನು ರಚಿಸಿವೆ. ಅವಿಶ್ವಾಸ ಗೊತ್ತುವಳಿ ಮಂಡನೆಗೆ ಸಂಬಂಧಿಸಿದಂತೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ ಎಂದು ಮೈತ್ರಿಕೂಟದ ನಾಯಕ ಫಜಲುರ್ ರೆಹಮಾನ್ ಹೇಳಿದ್ದಾರೆ.

ಸರ್ಕಾರವನ್ನು ಬೆಂಬಲಿಸುವ ಕೆಲವು ನಾಯಕರೂ ನಮ್ಮ ಸಂಪರ್ಕದಲ್ಲಿದ್ದಾರೆ. 2021ರಲ್ಲೂ ನವಾಜ್ ಷರೀಫ್ ಅವರ ಸಹೋದರ ಶಹಬಾಜ್ ಷರೀಫ್ ಅವರು ಇಮ್ರಾನ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದರು, ಆದರೆ ಒಂದು ಮತದಿಂದ ಇಮ್ರಾನ್ ಸರ್ಕಾರ ಉಳಿದಿತ್ತು.

ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಮುಖ್ಯಸ್ಥ ಬಿಲಾವಲ್ ಭುಟ್ಟೊ ಅವರು ಟ್ವೀಟ್ ಮಾಡುವ ಮೂಲಕ ಇಮ್ರಾನ್ ಖಾನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಹುಪಾಲು ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯದ ಪರವಾಗಿವೆ ಎಂದು ಭುಟ್ಟೊ ಬರೆದಿದ್ದಾರೆ. ಇಮ್ರಾನ್ ಸರ್ಕಾರ ಸಾರ್ವಜನಿಕರ ವಿಶ್ವಾಸ ಕಳೆದುಕೊಂಡಿದೆ. ಶೀಘ್ರದಲ್ಲೇ ಸಂಸತ್ತು ಕೂಡ ಸರ್ಕಾರದ ಮೇಲಿನ ವಿಶ್ವಾಸವನ್ನು ಕಳೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.

ಈ ಹಿಂದೆ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ ನಾಯಕಿ ಮರ್ಯಮ್ ನವಾಜ್ ಅವರು ಶೀಘ್ರದಲ್ಲೇ ಜನರಿಗೆ ಒಳ್ಳೆಯ ಸುದ್ದಿ ನೀಡಲಿದ್ದಾರೆ ಎಂದು ಹೇಳಿದ್ದರು.

ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಒಟ್ಟು 342 ಸ್ಥಾನಗಳಿವೆ. ಸರ್ಕಾರ ರಚನೆಗೆ 177 ಸ್ಥಾನಗಳ ಅಗತ್ಯವಿದೆ. ಇಮ್ರಾನ್ ಖಾನ್ ಅವರ ಪಕ್ಷ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪ್ರಸ್ತುತ 156 ಸ್ಥಾನಗಳನ್ನು ಹೊಂದಿದೆ. ಇಮ್ರಾನ್ ಮಿತ್ರಪಕ್ಷಗಳೊಂದಿಗೆ ಸಮ್ಮಿಶ್ರ ಸರ್ಕಾರ ನಡೆಸುತ್ತಿದ್ದಾರೆ. ಮಿತ್ರಪಕ್ಷಗಳ ಬಗ್ಗೆ ಪ್ರತಿಪಕ್ಷಗಳ ಮಾತು ನಿಜವಾದರೆ ಇಮ್ರಾನ್ ಖಾನ್ ಕುರ್ಚಿ ಅಲಗಾಡಲಿದೆ. ಮುಂದಿನ ವರ್ಷ 2023ರಲ್ಲಿ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆ ಎದುರಿಸಲಿದೆ.





Read more

[wpas_products keywords=”deal of the day”]