ಹೈಲೈಟ್ಸ್:
- ಮಂಗಳೂರಿನ ಕದ್ರಿ ಹಿಲ್ಸ್‌ನ ಯುದ್ಧ ಸ್ಮಾರಕದಲ್ಲಿ ವಿಜಯ್ ದಿವಸ್ ಆಚರಣೆ
- ಯೋಧರ ಪರಾಕ್ರಮ, ತ್ಯಾಗ, ಬಲಿದಾನ ಕೇಳಿ ಭಾವುಕರಾದ ಮಂಗಳೂರಿನ ಜನ
- ಯುದ್ಧ ಒಂದು ಕ್ರೂರ ಆಟ ಎಂದು ಗದ್ಗದಿತರಾದ ಮಾಜಿ ಯೋಧ ಬ್ರಿಗೇಡಿಯರ್ ಐಎನ್ ರೈ
ಮಾಜಿ ಯೋಧ ಬ್ರಿಗೇಡಿಯರ್ ಐಎನ್ ರೈ ಯುದ್ಧದ ಸನ್ನಿವೇಶಗಳನ್ನು ಜನರ ಮುಂದಿಟ್ಟು, ಯೋಧರ ಪರಾಕ್ರಮ ಹಾಗೂ ಸಾವು ನೋವುಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿ, ‘ಯುದ್ಧ ಒಂದು ಕ್ರೂರ ಆಟ’ ಎಂದು ಒಂದು ಕ್ಷಣ ಗದ್ಗದಿತರಾದರು. ಸೇರಿದ್ದ ಜನರು ಭಾವುಕರಾಗಿ ಎದ್ದು ನಿಂತು ಅವರನ್ನು ಕರತಾಡನ ಮೂಲಕ ಗೌರವಿಸಿದರು.
ಕದ್ರಿ ಹಿಲ್ಸ್‌ನಲ್ಲಿ ಯುದ್ಧ ಸ್ಮಾರಕದಲ್ಲಿಗುರುವಾರ ದಕ್ಷಿಣ ಕನ್ನಡ ಮಾಜಿ ಸೈನಿಕರ ಸಂಘ, ನಿಟ್ಟೆ ಎಜುಕೇಶನ್ ಟ್ರಸ್ಟ್, ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್, ರೋಟರಿ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್, ಶಾಸ್ತಾವು ಶ್ರೀ ಭೂತನಾಥೇಶ್ವರ ಟ್ರಸ್ಟ್ ಆಶ್ರಯದಲ್ಲಿಸ್ವರ್ಣಿಮ್ ವಿಜಯ್ ದಿವಸ್- ಸೈನಿಕರ ಸ್ಮರಣೆ ನಡೆಯಿತು.
ಪಾಕಿಸ್ತಾನದ ವಿರುದ್ಧದ ಯುದ್ಧಕ್ಕೆ ಕಾರಣವಾದ ಅಂಶಗಳು, ಸಾವು ನೋವು, ಯುದ್ಧ ಕೈದಿಗಳು, ನಿರಾಶ್ರಿತರು, ಬಾಂಗ್ಲಾಉದಯ ಹಾಗೂ ನಂತರದ ಬೆಳವಣಿಗೆಗಳ ಸ್ಥೂಲ ಮಾಹಿತಿಯನ್ನು ಮಾಜಿ ಯೋಧ ಕರ್ನಲ್ ಎನ್‌ಎಸ್ ಭಂಡಾರಿ ಮುಂದಿಟ್ಟರು. ಸೈನಿಕರ ತ್ಯಾಗ, ಬಲಿದಾನದ ಯಶೋಗಾಥೆಯನ್ನು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ವಿವರಿಸಿದರು.
ಇನ್ನು , ಈ ವೇಳೆ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆವಿ, ಐಎಎಸ್ ಅಧಿಕಾರಿಗಳ ತರಬೇತಿ ಸಂದರ್ಭದಲ್ಲಿ ಸುರಾನ್‌ಕೋಟ್‌ನ ಮೈನಸ್ ಡಿಗ್ರಿ ಮೈಕೊರೆವ ಚಳಿಯಲ್ಲಿ ನಾಲ್ಕೈದು ಬಟ್ಟೆ ಧರಿಸಿ, ಬಂಕರ್‌ನಲ್ಲಿ ಸ್ನಾನವನ್ನೂ ಮಾಡಲಾಗದ ಪರಿಸ್ಥಿತಿಯಲ್ಲಿ ಹಾಗೂ ಯೋಧರೊಂದಿಗೆ ಅಲ್ಲೇ ಅಡುಗೆ ಮಾಡುತ್ತಾ, ರಾತ್ರಿ ಗಸ್ತು ಮಾಡುವವರ ಜತೆ ಕಳೆದ ದಿನಗಳಿನ್ನೂ ನೆನಪಿದೆ. ನಮ್ಮ ನೆಮ್ಮದಿಗಾಗಿ ಪ್ರತಿದಿನವೂ ಶಿಸ್ತು, ಬದ್ಧತೆಯೊಂದಿಗೆ ಮಾಡುವ ಬಲಿದಾನವನ್ನು ವ್ಯರ್ಥ ಮಾಡಲು ಬಿಡಬಾರದು ಎಂದರು.
ರಾಷ್ಟ್ರಮಟ್ಟದ ಸೇವೆಯಲ್ಲಿರುವ ನಾನು ಯೋಧರ ಕಾರ್ಯಕ್ರಮಕ್ಕೆ ಬರಲು 14 ವರ್ಷ ಬೇಕಾಯಿತು. ಹುತಾತ್ಮರ ಬಗ್ಗೆ ಕೇವಲವಾಗಿ ಮಾತನಾಡುವ ಶೋಚನೀಯ ಪರಿಸ್ಥಿತಿಯಲ್ಲಿ ಹಳ್ಳಿ ಹಳ್ಳಿಗೂ ಸೈನಿಕರ ತ್ಯಾಗ, ಬಲಿದಾನದ ಯಶೋಗಾಥೆಯನ್ನು ಮುಟ್ಟಿಸಬೇಕು ಎಂದು ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಹೇಳಿದರು.
ಎಸ್‌ಪಿ ಋುಷಿಕೇಶ್ ಭಗವಾನ್ ಸೋನವಾಣೆ, ಜಿಲ್ಲಾಪಂಚಾಯಿತಿ ಸಿಇಒ ಡಾ.ಕುಮಾರ, ಲಯನ್ಸ್ ಜಿಲ್ಲಾಗವರ್ನರ್ ವಸಂತ್ ಡಿ.ಶೆಟ್ಟಿ, ರೋಟರಿ ಜಿಲ್ಲಾಗವರ್ನರ್ ರವೀಂದ್ರ ಭಟ್, ಶಾಸ್ತಾವು ಭೂತನಾಥೇಶ್ವರ ಟ್ರಸ್ಟ್‌ನ ಅರ್ಜುನ್ ಶೆಟ್ಟಿ ಕ್ರಮವಾಗಿ ಎನ್‌ಸಿಸಿ ಬೆಂಗಾವಲಿನಲ್ಲಿ ಸಾಗಿ ಬಂದು ಯೋಧರ ಸ್ಮಾರಕಕ್ಕೆ ಪುಷ್ಪ ಅರ್ಪಿಸಿ, ಗೌರವ ಸಲ್ಲಿಸಿದರು. ಕವಾಯತು ಮೂಲಕ ಯೋಧರನ್ನು ಸ್ಮರಿಸಲಾಯಿತು.
ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಸ್.ಎಂ.ಐರನ್ ಸ್ವಾಗತಿಸಿದರು. ಕಾರ್ಯದರ್ಶಿ ಕ್ಯಾಪ್ಟನ್ ದೀಪಕ್ ಅಡ್ಯಂತಾಯ ವಂದಿಸಿದರು.