Karnataka news paper

Hijab Row: ‘ಹಿಜಾಬ್ ಧರಿಸುವ ಮಹಿಳೆ ಒಂದು ದಿನ ಪ್ರಧಾನಿ ಆಗುತ್ತಾಳೆ’: ಓವೈಸಿ ಭವಿಷ್ಯ!


ಹೊಸದಿಲ್ಲಿ: ಹಿಜಾಬ್ ಧರಿಸಿರುವ ಮಹಿಳೆ ಒಂದು ದಿನ ಭಾರತದ ಪ್ರಧಾನಿ ಆಗುತ್ತಾಳೆ ಎಂದು ಎಐಎಂಐಎಂ ಮುಖ್ಯಸ್ಥ ಹಾಗೂ ಲೋಕಸಭಾ ಸಂಸದ ಅಸಾದುದ್ದೀನ್ ಓವೈಸಿ ಭಾನುವಾರ ಭವಿಷ್ಯ ನುಡಿದಿದ್ದಾರೆ. ಹಿಜಾಬ್ ಧರಿಸಿದ ಮುಸ್ಲಿಂ ವಿದ್ಯಾರ್ಥಿನಿಯರಿಗೆ ತರಗತಿಗಳಿಗೆ ಪ್ರವೇಶ ನಿರಾಕರಿಸುವ ವಿವಾದ ಚರ್ಚೆಯಲ್ಲಿ ಇರುವ ಸಂದರ್ಭದಲ್ಲಿ ಓವೈಸಿ ಈ ಹೇಳಿಕೆ ನೀಡಿದ್ದಾರೆ.

ಸೋಮವಾರ ಟ್ವಿಟ್ಟರ್‌ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿರುವ ಓವೈಸಿ, ಹಿಜಾಬ್ ಧರಿಸಿದ ಮಹಿಳೆಯರು ಕಾಲೇಜುಗಳಿಗೆ ಹೋಗುತ್ತಾರೆ. ಜಿಲ್ಲಾ ಕಲೆಕ್ಟರ್‌ಗಳು, ಮ್ಯಾಜಿಸ್ಟ್ರೇಟ್‌ಗಳು, ವೈದ್ಯರು, ಉದ್ಯಮಿಗಳು ಹಾಗೂ ಇತ್ಯಾದಿಗಳು ಆಗುತ್ತಾರೆ ಎಂದು ಹೇಳಿದ್ದಾರೆ.

ಮಂಡ್ಯದಲ್ಲಿ ಅಲ್ಲಾ ಹು ಅಕ್ಬರ್‌ ಎಂದ ವಿದ್ಯಾರ್ಥಿನಿಗೆ ನನ್ನ ಸಲಾಂ: ಅಸಾದುದ್ದೀನ್‌ ಓವೈಸಿ

“ನಾನು ಇದನ್ನು ನೋಡಲು ಜೀವಂತ ಇರದೆ ಇರಬಹುದು. ಆದರೆ ನನ್ನ ಮಾತುಗಳನ್ನು ನೆನಪಿಡಿ. ಒಂದು ದಿನ ಹಿಜಾಬ್ ಧರಿಸಿದ ಮಹಿಳೆ ಈ ದೇಶದ ಪ್ರಧಾನಿ ಆಗುತ್ತಾಳೆ” ಎಂದು ಓವೈಸಿ ವಿಡಿಯೋದಲ್ಲಿ ಭವಿಷ್ಯ ನುಡಿದಿದ್ದಾರೆ.

“ನಮ್ಮ ಹೆಣ್ಣುಮಕ್ಕಳು, ತಾವು ಹಿಜಾಬ್ ಧರಿಸಲು ಬಯಸಿರುವುದಾಗಿ ನಿರ್ಧರಿಸಿ ತಮ್ಮ ಪೋಷಕರಿಗೆ ಹೇಳಿದರೆ, ಅವರ ಪೋಷಕರು ಅವರನ್ನು ಬೆಂಲಿಸುತ್ತಾರೆ. ಅವರನ್ನು ಯಾರು ತಡೆಯುತ್ತಾರೆ ನೋಡೋಣ” ಎಂದು ಸವಾಲು ಹಾಕಿದ್ದಾರೆ.

ಬಿಜೆಪಿ ಪ್ರತಿಕ್ರಿಯೆ
ಓವೈಸಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ದಿನೇಶ್ ಶರ್ಮಾ, “ಉತ್ತರ ಪ್ರದೇಶದಲ್ಲಿ ಕೋಮುವಾದ ಹರಡಲು ವಿರೋಧ ಪಕ್ಷಗಳು ಸಂಚು ರೂಪಿಸಿವೆ. ಎಐಎಂಐಎಂ ಸಮಾಜವಾದಿ ಪಕ್ಷದ ಬಿ ಟೀಮ್ ಆಗಿದೆ. ರಾಜ್ಯದಲ್ಲಿ ಅಭಿವೃದ್ಧಿಯ ಪರಿಮಳ ಪಸರಿಸಿದೆ. ಇಲ್ಲಿ ಕೋಮುವಾದದ ಕೆಟ್ಟ ವಾಸನೆಗೆ ಜಾಗವಿಲ್ಲ” ಎಂದಿದ್ದಾರೆ.
ಉತ್ತರ ಪ್ರದೇಶದಲ್ಲಿ ಗುಂಡಿನ ದಾಳಿ: ಓವೈಸಿಗೆ ಝೆಡ್ ಸೆಕ್ಯುರಿಟಿ ನೀಡಿದ ಸರ್ಕಾರ

“ಬಿಜೆಪಿ ಇಲ್ಲಿ ಇರುವವರೆಗೂ ಯಾವ ‘ಬುರ್ಕಾ-ವಾಲಿ’ ಪ್ರಧಾನಿಯಾಗುವುದಿಲ್ಲ. ನೀವು ನಿಮ್ಮ ಜನಸಂಖ್ಯೆಯನ್ನು ಎಷ್ಟೇ ಹೆಚ್ಚಿಸಿದರೂ ನಾವು ನಿಮ್ಮ ಕನಸು ನನಸಾಗಲು ಬಿಡುವುದಿಲ್ಲ. ಶೀಘ್ರದಲ್ಲಿಯೇ ‘ನಾವಿಬ್ಬರು, ನಮಗಿಬ್ಬರು’ ನಿಯಮ ಜಾರಿಗೆ ಬರಲಿದೆ. ನಿಮ್ಮ ಜನಸಂಖ್ಯೆ ಏರಿಕೆಗೆ ಕಡಿವಾಣ ಹಾಕುವುದು ಹೇಗೆ ಎನ್ನುವುದು ನಮಗೆ ಬಹಳ ಚೆನ್ನಾಗಿ ತಿಳಿದಿದೆ” ಎಂದು ತೆಲಂಗಾಣ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ಹೇಳಿದ್ದಾರೆ.

ಮಂಡ್ಯದ ವಿದ್ಯಾರ್ಥಿನಿಗೆ ಶ್ಲಾಘನೆ
ಕರ್ನಾಟಕದಲ್ಲಿನ ಹಿಜಾಬ್‌ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ್ದ ಎಐಎಂಐಎಂ ಅಧ್ಯಕ್ಷ ಹಾಗೂ ಸಂಸದ ಅಸಾದುದ್ದೀನ್‌ ಓವೈಸಿ ಇದು ಸಂವಿಧಾನದ ಸ್ಪಷ್ಟ ಉಲ್ಲಂಘನೆ ಎಂದು ಹೇಳಿದ್ದರು. ಉತ್ತರ ಪ್ರದೇಶದ ಸಾಂಬಾಲ್‌ನಲ್ಲಿ ಆಯೋಜಿಸಿದ್ದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ್ದ ಅವರು, ಸಂವಿಧಾನದ 15, 19 ಮತ್ತು 21ನೇ ವಿಧಿಗಳನ್ನು ಕರ್ನಾಟಕ ಸರ್ಕಾರ ಸ್ಪಷ್ಟವಾಗಿ ಉಲ್ಲಂಘಿಸಿದೆ. ನಮ್ಮ ಸಹೋದರಿಯರಿಗೆ ಹಿಜಾಬ್‌ ಹೋರಾಟದಲ್ಲಿ ಯಶಸ್ಸು ಸಿಗಲಿದೆ. ನಾನು ಕರ್ನಾಟಕ ಸರ್ಕಾರದ ನಿರ್ಧಾರವನ್ನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ. ಇನ್ನು, ಜೈ ಶ್ರೀರಾಮ ಘೋಷಣೆಗೆ ಎದುರು ಅಲ್ಲಾ ಹು ಅಕ್ಬರ್‌ ಎಂದ ಮಂಡ್ಯ ವಿದ್ಯಾರ್ಥಿನಿಯ ಬಗ್ಗೆ ಪ್ರಸ್ತಾಪಿಸಿದ ಓವೈಸಿ ವಿದ್ಯಾರ್ಥಿನಿಯ ಧೈರ್ಯಕ್ಕೆ ನನ್ನ ಸಲಾಂ ಎಂದು ಹೇಳಿದ್ದರು.



Read more

[wpas_products keywords=”deal of the day sale today offer all”]