ಹುಬ್ಬಳ್ಳಿ: ಹಣ್ಣಿನ ರಾಜ ಈ ಬಾರಿ ಲೇಟಾಗಿ ಮಾರುಕಟ್ಟೆಗೆ ಬರಲಿದ್ದಾನೆ. ಮಾವು ಪ್ರಿಯರಿಗೆ ಬೇಗ ಸವಿಯಲು ಸಿಗುವುದಿಲ್ಲ. ಹಣ್ಣಿನ ಗಿಡಗಳ ತುಂಬ ಈ ಬಾರಿ ಅಪಾರ ಪ್ರಮಾಣದ ಹೂವುಗಳು ಬಿಟ್ಟಿದ್ದು, ಹೆಚ್ಚಿನ ನಿರೀಕ್ಷೆಯನ್ನೇನೋ ಹುಟ್ಟಿಸಿವೆ.
ಮುಂಗಾರು ಮಳೆ ನವೆಂಬರ್ 3ನೇ ವಾರದವರೆಗೂ ಮುಂದುವರಿದ ಕಾರಣ, ಭೂಮಿಯೆಲ್ಲ ಹಸಿಯಾಗಿಯೇ ಉಳಿಯಿತು. ಹೂವು ಬಿಡುವ ವೇಳೆ ಬಿಡಲಿಲ್ಲ. ಹೂವು ಅರಳಲು ಅನುಕೂಲಕರ ವಾತಾವರಣ ಉಂಟಾಗಲಿಲ್ಲ. ಹಾಗೆಯೇ ಚಳಿಗಾಲವೂ ಲೇಟಾಗಿ ಶುರುವಾಗಿ ಲೇಟಾಗಿ ಕೊನೆಗೊಂಡಿತು. ಹಣ್ಣು ಬರುವುದು ಈ ಬಾರಿ 3 – 4 ವಾರ ವಿಳಂಬವಾಗುತ್ತದೆ. ಧಾರವಾಡ ಜಿಲ್ಲೆಯ ಸ್ಥಳೀಯ ಹಣ್ಣು ಕನಿಷ್ಠ 3 ವಾರವಂತೂ ವಿಳಂಬವಾಗಿ ಬರುತ್ತದೆ. ಏಪ್ರಿಲ್, ಮೇ ತಿಂಗಳಲ್ಲಿ ಹೆಚ್ಚೆಚ್ಚು ಹಣ್ಣುಗಳು ಮಾರುಕಟ್ಟೆಗೆ ಬರಬಹುದು ಎನ್ನುತ್ತಾರೆ ತಜ್ಞರು.
ಈ ವರ್ಷ ಚಳಿ ಪ್ರಮಾಣ ಜಾಸ್ತಿ ಇದ್ದ ಕಾರಣವೂ ಮಾವಿನ ಹೂವು ಚೆನ್ನಾಗಿ ಬಿಟ್ಟಿದೆ. ಇದೀಗ ಇಬ್ಬನಿ ಅಲ್ಲಲ್ಲಿ ಬೀಳುತ್ತಿದ್ದರೂ, ಇದು ಮಾವಿನ ಫಸಲಿಗೆ ದುಷ್ಪರಿಣಾಮ ಬೀರಲಾರದಂತೆ. ತೋಟಗಾರಿಕೆ ತಜ್ಞರ ಪ್ರಕಾರ ಕರಿ ಮಂಜು ಬೀಳಬಾರದು. ಬೆಳಗಿನ ವೇಳೆ ಬೀಳುವ ಮಂಜಿನಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದರೆ ಅದಕ್ಕೆ ಕರಿ ಮಂಜು ಎನ್ನುತ್ತಾರೆ. ಇದರಿಂದ ಹೂವು ಕಚ್ಚುತ್ತದೆ. ಅಂತಹ ಇಬ್ಬನಿ ಈಗ ಇಲ್ಲದ ಕಾರಣ ಮಾವಿಗೆ ಪೂರಕ ವಾತಾವರಣವೇ ಇದೆಯಂತೆ.
ರೈತರದ್ದೂ ಶ್ರಮ ಬೇಕು
ಹವಾಮಾನ ವೈಪರೀತ್ಯದಿಂದ ಮಾವಿನ ಹಣ್ಣಿಗೆ ಹುಳು ಬಾಧೆ ಕಾಡುತ್ತದೆ ಎಂಬ ಅಭಿಪ್ರಾಯ ರೈತರಲ್ಲಿದೆ. ಆದರೆ ತೋಟಗಳನ್ನು ಸ್ವಚ್ಛವಿಟ್ಟುಕೊಂಡರೆ ಉತ್ತಮ ಫಸಲು ಬರುತ್ತದೆ ಎಂದು ತಜ್ಞರು ಹೇಳುತ್ತಾರೆ.
ತೋಟದಲ್ಲಿ ಅನವಶ್ಯಕವಾಗಿ ಬೆಳೆದ ಸಸಿಗಳನ್ನು ರೋಟಾವೇಟರ್‌ದಿಂದ ಹೊಡೆದು ಹೊಲವನ್ನು ಸ್ವಚ್ಛಗೊಳಿಸಬೇಕು. ಮಣ್ಣನ್ನು ಸಡಿಲಗೊಳಿಸಬೇಕು. ಕಸ ಕಡ್ಡಿ ಜಾಸ್ತಿ ಇದ್ದರೆ ಹುಳುಗಳು ತತ್ತಿ ಇಟ್ಟು ಹೋಗುತ್ತವೆ. ಇದರಿಂದ ಹಣ್ಣಿನಲ್ಲಿ ಹುಳುಗಳಾಗುತ್ತವೆ. ಈಗಾಗಲೇ ಈ ಸ್ವಚ್ಛತೆ ಕೆಲಸವನ್ನು ಮಾಡಿರಬೇಕು. ಈ ವರ್ಷ ಇಲ್ಲಿಯವರೆಗೂ ಎಲ್ಲ ತೋಟಗಳು ಚೆನ್ನಾಗಿವೆ. ಏನೂ ಸಮಸ್ಯೆ ಇಲ್ಲ.
ಧಾರವಾಡ ಜಿಲ್ಲೆಯ ಸ್ಥಳೀಯ ಹಣ್ಣು ಬರುವುದು 3 – 4 ವಾರ ಲೇಟಾಗುತ್ತದೆ. ಈ ಬಾರಿ ಚೆನ್ನಾಗಿ ಹೂವು ಅರಳಿದ್ದರಿಂದ ಚೆನ್ನಾಗಿಯೇ ಕಾಯಿ ಕಚ್ಚುವ ನಿರೀಕ್ಷೆ ಇದೆ. ರೈತರು ಹೊಲವನ್ನು ಸ್ವಚ್ಛವಿಟ್ಟುಕೊಂಡರೆ ಹುಳು ಬಾಧೆ ಕಾಡಲಾರದು.
ಆರ್. ಎಚ್. ಪಾಟೀಲ, ಹವಾಮಾನ ಶಾಸ್ತ್ರ ವಿಭಾಗದ ಮುಖ್ಯಸ್ಥ, ಕೃಷಿ ವಿವಿ, ಧಾರವಾಡ
ಈ ಬಾರಿ ಹೆಚ್ಚಿನ ಪ್ರಮಾಣದ ಹೂವು ಅರಳಿದ್ದರಿಂದ ಹೆಕ್ಟೇರಿಗೆ 8 – 9 ಟನ್ ಹಣ್ಣು ಬೆಳೆಯಬಹುದು ಎಂದು ತೋಟಗಾರಿಕೆ ಅಧಿಕಾರಿಗಳು ಹೇಳುತ್ತಾರೆ. ಹಗಲು ಹೊತ್ತಿನಲ್ಲಿ ಚೆನ್ನಾಗಿ ಬಿಸಿಲು, ರಾತ್ರಿ ತಾಪಮಾನ ಕಡಿಮೆ ಇದ್ದರೆ ಫಸಲಿಗೆ ಅನುಕೂಲ. ಈ ಬಾರಿ 100ಕ್ಕೆ 90ರಷ್ಟು ತೋಟಗಳಲ್ಲಿ ಕಾಯಿ ಚೆನ್ನಾಗಿ ಬರುವ ನಿರೀಕ್ಷೆ ಇದೆ.
ಈ ಬಾರಿ ಧಾರವಾಡ ಜಿಲ್ಲೆಯಲ್ಲಿ ಹೆಕ್ಟೇರಿಗೆ 8 – 9 ಟನ್ ಹಣ್ಣುಗಳು ಬರುವ ಸಾಧ್ಯತೆ ಇದೆ. ಹಾನಿ ಅನುಭವಿಸಿದರೆ, ಬೆಳೆವಿಮೆ ಮಾಡಿಸಿದವರು ಪರಿಹಾರ ಪಡೆಯಬಹುದು.
ಕಾಶಿನಾಥ ಭದ್ರಣ್ಣವರ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ, ಧಾರವಾಡ
8450 ಹೆಕ್ಟೇರ್ ಭೂಮಿ
ಧಾರವಾಡ ಜಿಲ್ಲೆಯಲ್ಲಿ ಕಲಘಟಗಿ ಹಾಗೂ ಧಾರವಾಡ ತಾಲೂಕುಗಳಲ್ಲಿ ಹೆಚ್ಚಿನ ಪ್ರಮಾಣದ ಮಾವಿನ ತೋಟಗಳಿವೆ. ಜಿಲ್ಲೆಯ 8450 ಹೆಕ್ಟೇರ್ ಭೂಮಿಯಲ್ಲಿ ಮಾವಿನ ತೋಟಗಳು ಹರಡಿವೆ. ಇಲ್ಲಿ ಬೆಳೆಯುವ ಶೇ.90 ಹಣ್ಣುಗಳು ಅಲ್ಫಾನ್ಸೋ ತಳಿಯವು. ತೋತಾಪುರಿ, ಮಲ್ಲಿಕಾ, ಕೇಸರ ತಳಿಗಳು ಕೊಂಚ ಮಟ್ಟಿಗೆ ಅಲ್ಲಲ್ಲಿ ಬೆಳೆಯುತ್ತವೆ. ಇಲ್ಲಿಯ ಹಣ್ಣುಗಳು ಹೈದರಾಬಾದ್, ಮುಂಬಯಿ, ದಿಲ್ಲಿ, ಬೆಂಗಳೂರು ಕಡೆ ರಫ್ತಾಗುತ್ತವೆ.
Read more
[wpas_products keywords=”deal of the day sale today offer all”]