ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಉಚಿತವಾಗಿ ಸಂಗ್ರಹಿಸುವ ಕೇಂದ್ರ ಸರಕಾರದ ರಾಷ್ಟ್ರೀಯ ಶೈಕ್ಷಣಿಕ ಠೇವಣಿ (ಎನ್ಎಡಿ) ಇದ್ದರೂ ಕಿಯೋನಿಕ್ಸ್ನ ಇಡಿಜಿಎಸ್ ಡಿಜಿಟಲ್ ಲೈಬ್ರರಿ ಕಡ್ಡಾಯ ಜಾರಿಗೆ ರಾಜ್ಯಪಾಲರು ವಿಶ್ವವಿದ್ಯಾಲಯಗಳಿಗೆ ಸೂಚನೆ ನೀಡಿರುವುದು ಶೈಕ್ಷಣಿಕ ಕ್ಷೇತ್ರದಲ್ಲಿ ಚರ್ಚೆಗೆ ಗ್ರಾಸವಾಗಿದೆ.
2017ರಿಂದಲೇ ದೇಶದೆಲ್ಲೆಡೆ ವಿಶ್ವವಿದ್ಯಾಲಯಗಳು ಪ್ರತಿಯೊಬ್ಬ ವಿದ್ಯಾರ್ಥಿಯ ಶೈಕ್ಷಣಿಕ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಲು ಕೇಂದ್ರದ ಮಾನವ ಸಂಪನ್ಮೂಲ ಸಚಿವಾಲಯವು ರಾಷ್ಟ್ರೀಯ ಶೈಕ್ಷಣಿಕ ಠೇವಣಿ (ನ್ಯಾಡ್)ಗೆ ಅಪ್ಲೋಡ್ ಮಾಡುತ್ತಾ ಬಂದಿವೆ. ಅಂಕಪಟ್ಟಿ, ಪದವಿ ಪ್ರಮಾಣ ಪತ್ರಗಳ ನಕಲು ತಡೆಯುವುದು, ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ದಾಖಲೆಗಳನ್ನು ಕಳೆದುಕೊಂಡಾಗ ಮತ್ತೆ ವಿಶ್ವವಿದ್ಯಾಲಯಗಳಿಗೆ ಅಲೆಯುವುದನ್ನು ತಪ್ಪಿಸುವುದು ಮತ್ತು ಉದ್ಯೋಗದಾತರು ಅಭ್ಯರ್ಥಿಯ ಶೈಕ್ಷಣಿಕ ದಾಖಲೆಗಳ ನೈಜತೆಯನ್ನು ದೃಢೀಕರಿಸಿಕೊಳ್ಳಲು ಅನುಕೂಲ ಮಾಡಿಕೊಡುವ ಸಲುವಾಗಿ ದೇಶದೆಲ್ಲೆಡೆ ಈ ವ್ಯವಸ್ಥೆಯನ್ನು ತರಲಾಗಿದೆ.
ಡಿಜಿಟಲ್ ಲೈಬ್ರರಿ:
ಇದರ ಮಧ್ಯೆ ರಾಜ್ಯ ಉನ್ನತ ಶಿಕ್ಷಣ ಇಲಾಖೆಯು ಕಿಯೋನಿಕ್ಸ್ ಮೂಲಕ ಇಡಿಜಿಎಸ್ ಯೋಜನೆಯಡಿ ಶೈಕ್ಷಣಿಕ ದಾಖಲೆಗಳ ಸಂಗ್ರಹಕ್ಕೆ ಮತ್ತೊಂದು ‘ಡಿಜಿಟಲ್ ಲೈಬ್ರರಿ’ ಮಾಡಲು ಹೊರಟಿತು. 2019-20ರಿಂದಲೇ ಎಲ್ಲ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಅಂಕಪಟ್ಟಿ ಮತ್ತು ಪದವಿ ಪ್ರಮಾಣ ಪತ್ರಗಳನ್ನು ಅಪ್ಲೋಡ್ ಮಾಡುವುದನ್ನು ಕಡ್ಡಾಯಗೊಳಿಸಿತ್ತು. ಈ ಸಂಬಂಧವಾಗಿ ‘ವಿಜಯ ಕರ್ನಾಟಕ’ ಪತ್ರಿಕೆಯು 2019ನೇ ಆಗಸ್ಟ್ 25ರಂದು ‘ದುಬಾರಿ ಲೈಬ್ರರಿ ಏಕೆ?’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.
ಕಿಯೋನಿಕ್ಸ್ ಮೂಲಕ ಅನುಷ್ಠಾನಗೊಳಿಸಲು ಹೊರಟ ಡಿಜಿಟಲ್ ಲೈಬ್ರರಿಗೆ ಪ್ರತಿವರ್ಷ ಕೋಟ್ಯಂತ ರೂಪಾಯಿ ಪಾವತಿಸಬೇಕಾಗಿದೆ. ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು ನ್ಯಾಡ್ನಲ್ಲಿ ಉಚಿತ ಅವಕಾಶ ನೀಡಿರುವಾಗ ರಾಜ್ಯದಲ್ಲಿ ಕಿಯೋನಿಕ್ಸ್ಗೆ ದುಬಾರಿ ಶುಲ್ಕ ಪಾವತಿಸುವುದರ ಔಚಿತ್ಯವಾದರೂ ಏನು ಎಂಬ ಪ್ರಶ್ನೆ ಎದುರಾಗಿತ್ತು.
ಉನ್ನತ ಶಿಕ್ಷಣ ಇಲಾಖೆಯು 2019ರಲ್ಲಿ ಡಿಜಿಟಲ್ ಲೈಬ್ರರಿ ಜಾರಿಗೆ ಆದೇಶ ಹೊರಡಿಸಿದಾಗ ಬಹುತೇಕ ವಿಶ್ವವಿದ್ಯಾಲಯಗಳ ಕುಲಪತಿಗಳ ಅಧಿಕಾರ ಅಂತ್ಯದಲ್ಲಿತ್ತು. ಒಂದೆರಡು ವಿಶ್ವವಿದ್ಯಾಲಯಗಳ ಹೊರತಾಗಿ ಬಹುತೇಕ ವಿಶ್ವವಿದ್ಯಾಲಯಗಳು ಜಾಣ ಮೌನಕ್ಕೆ ಜಾರಿ ವಿದ್ಯಾರ್ಥಿಗಳ ಮೇಲೆ ಶುಲ್ಕದ ಭಾರ ಹಾಕಲು ನಿರ್ಧರಿಸಿದ್ದವು. ಆದರೆ, ಹೊಸದಾಗಿ ಬಂದ ಕುಲಪತಿಗಳು ಮತ್ತು ಪರೀಕ್ಷಾಂಗ ಕುಲಸಚಿವರು ಡಿಜಿಟಲ್ ಲೈಬ್ರರಿಗೆ ವಿರೋಧ ವ್ಯಕ್ತಪಡಿಸಿ ಉನ್ನತ ಶಿಕ್ಷಣ ಇಲಾಖೆಯ ಉನ್ನತಾಧಿಕಾರಿಗಳ ಗಮನ ಸೆಳೆದಿದ್ದರು. ಇದರ ಬಗ್ಗೆ ಸಾಕಷ್ಟು ಪರವಿರೋಧ ಚರ್ಚೆಗಳು ನಡೆದು ಎಲ್ಲ ವಿಶ್ವವಿದ್ಯಾಲಯಗಳಿಂದ ವಿರೋಧ ವ್ಯಕ್ತವಾಗಿದೆ.
ಅಂತಿಮವಾಗಿ ರಾಜ್ಯ ಸರಕಾರವು ಇಡಿಜಿಎಸ್ನ ಡಿಜಿಟಲ್ ಲೈಬ್ರರಿಗೆ ತಡೆ ನೀಡಲು ನಿರ್ಧರಿಸಿತು. ‘ಕೇಂದ್ರ ಸರಕಾರ ಉಚಿತವಾಗಿ ಡಿಜಿ ಲಾಕರ್ ನ್ಯಾಡ್ನಲ್ಲಿ ಶೈಕ್ಷಣಿಕ ದಾಖಲೆಗಳ ಸಂಗ್ರಹಕ್ಕೆ ಅವಕಾಶ ನೀಡಿರುವುದರಿಂದ ಕಿಯೋನಿಕ್ಸ್ ಸಂಸ್ಥೆಯ ಇಡಿಜಿಎಸ್ ಯೋಜನೆಯನ್ನು ತಡೆಹಿಡಿಯಲಾಗಿದೆ’ ಎಂದು ಉನ್ನತ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಆರ್. ಮಹೇಶ್ ಜ.14ರಂದು ಆದೇಶ ಹೊರಡಿಸಿದ್ದರು.
ರಾಜ್ಯಪಾಲರ ಆದೇಶ:
ಅದಾಗಿ ಕೇವಲ 15 ದಿನದಲ್ಲಿ ಅಂದರೆ ಜ.31ರಂದು ರಾಜ್ಯ ಕಿಯೋನಿಕ್ಸ್ ಮೂಲಕವೇ ಇಡಿಜಿಎಸ್ ಯೋಜನೆಯನ್ನು ಜಾರಿಗೊಳಿಸಬೇಕೆಂದು ಕುಲಾಧಿಪತಿಗಳೂ ಆದ ರಾಜ್ಯಪಾಲರು ಎಲ್ಲ ವಿಶ್ವವಿದ್ಯಾಲಯ ಕುಲಪತಿಗಳಿಗೆ ಆದೇಶ ನೀಡಿದ್ದಾರೆ. ವಿಶ್ವವಿದ್ಯಾಲಯಗಳು ದುಬಾರಿ ಶುಲ್ಕ ಪಾವತಿಸಬೇಕಾದ ಸಂಕಷ್ಟದಿಂದ ಪಾರಾದ ಸಂತಸದಲ್ಲಿ ಇರುವಾಗಲೇ ರಾಜ್ಯಭವನದಿಂದ ಹೊರಟ ಮತ್ತೊಂದು ಆದೇಶ ಕುಲಪತಿ ಮತ್ತು ಕುಲಸಚಿವರನ್ನು ತಲೆ ಮೇಲೆ ಕೈ ಹೊತ್ತುಕೊಳ್ಳುವಂತೆ ಮಾಡಿದೆ. ಸರಕಾರ ಮತ್ತು ರಾಜಭವನಕ್ಕೆ ವಸ್ತುಸ್ಥಿತಿಯನ್ನು ವಿವರಿಸಿದ ಬಳಿಕವೂ, ಕಡ್ಡಾಯ ಜಾರಿಗೆ ಆದೇಶ ನೀಡಿರುವುದು ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಬೇಸರ ತರಿಸಿದೆ. ಆದರೆ, ಯಾವುದೇ ವಿಶ್ವವಿದ್ಯಾಲಯಗಳ ಕುಲಪತಿಗಳು ಪ್ರತಿಕ್ರಿಯೆ ನೀಡುತ್ತಿಲ್ಲ.
ದುಬಾರಿ ಶುಲ್ಕ
ಕಿಯೋನಿಕ್ಸ್ನ ಡಿಜಿಟಲ್ ಲೈಬ್ರರಿಗೆ ಪ್ರತಿ ವಿದ್ಯಾರ್ಥಿಯ ಶೈಕ್ಷಣಿಕ ದಾಖಲೆಗಳನ್ನು ಅಪ್ಲೋಡ್ ಮಾಡಲು 160 (130+ಜಿಎಸ್ಟಿ 30)ರೂ. ನಂತೆ ಶುಲ್ಕ ಪಾವತಿಸಬೇಕು. ರಾಜ್ಯದ ಎಲ್ಲ 17 ವಿಶ್ವವಿದ್ಯಾಲಯಗಳಲ್ಲಿ ವಾರ್ಷಿಕ ಅಂದಾಜು 30 ಲಕ್ಷ ವಿದ್ಯಾರ್ಥಿಗಳ ಅಂಕಪಟ್ಟಿ, ಪದವಿ ಪ್ರಮಾಣ ಪತ್ರ ಮತ್ತು ಇತರೆ ದಾಖಲೆಗಳನ್ನು ಡಿಜಿಟಲ್ ಲೈಬ್ರರಿಗೆ ಅಪ್ಲೋಡ್ ಮಾಡಲು 45ರಿಂದ 50 ಕೋಟಿ ರೂ. ಪಾವತಿಸಬೇಕಾಗುತ್ತದೆ.
ಕುವೆಂಪು ವಿವಿಯಲ್ಲಿ ಮೈ ವೆರಿಫಿಕೇಶನ್
ಕುವೆಂಪು ವಿಶ್ವವಿದ್ಯಾಲಯವು 1989ರಿಂದ ಇಲ್ಲಿವರೆಗಿನ ಎಲ್ಲ ವಿದ್ಯಾರ್ಥಿಗಳ ಅಂಕಪಟ್ಟಿ, ಪದವಿ ಪ್ರಮಾಣ ಪತ್ರಗಳನ್ನು ಆನ್ಲೈನ್ನಲ್ಲಿ ಲಭ್ಯವಾಗುವಂತೆ ಮಾಡಿದೆ. ವಿದ್ಯಾರ್ಥಿಗಳು ಮನೆಯಲ್ಲೇ ಕುಳಿತು ದಾಖಲೆಗಳನ್ನು ಡೌನ್ಲೋಡ್ ಮಾಡಿಕೊಳ್ಳುವುದಲ್ಲದೆ ಉದ್ಯೋಗದಾತರು ದಾಖಲೆಗಳ ಪರಿಶೀಲನೆಗೆ ಅವಕಾಶ ಮಾಡಿಕೊಡಲಾಗಿದೆ. ಇದರ ಜತೆಗೆ ನ್ಯಾಡ್ನಲ್ಲೂ ದಾಖಲೆಗಳು ಸಿಗುತ್ತವೆ.
Read more
[wpas_products keywords=”deal of the day sale today offer all”]