Karnataka news paper

ಆತ್ಮಹತ್ಯೆ ಮಾಡಿಕೊಂಡ ನೇಕಾರರ ಕುಟುಂಬಗಳಿಗೆ ₹ 5 ಲಕ್ಷ ಪರಿಹಾರ: ಬೊಮ್ಮಾಯಿ ಸಮ್ಮತಿ


 

ಬೆಳಗಾವಿ: ‘ನೇಕಾರರ ಉತ್ಪನ್ನಗಳಿಗೆ ಸುಸ್ಥಿರ ಮಾರುಕಟ್ಟೆ ಹಾಗೂ ಸಮರ್ಪಕ ದರ ಒದಗಿಸಲು ಪೂರಕವಾದ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಇಲ್ಲಿನ ವಿಟಿಯುನಲ್ಲಿ ಗುರುವಾರ ನಡೆದ ಸಭೆಯಲ್ಲಿ ನೇಕಾರರ ಸಮಸ್ಯೆಗಳು ಮತ್ತು ಬೇಡಿಕೆಗಳನ್ನು ಆಲಿಸಿದ ನಂತರ ಅವರು ಮಾತನಾಡಿದರು.

‘ಸರ್ಕಾರದ ವಿವಿಧ ಇಲಾಖೆಗಳಿಗೆ ಅಗತ್ಯವಿರುವ ಬಟ್ಟೆ, ಸೀರೆಗಳನ್ನು ನೇಕಾರರ ಸಾಮರ್ಥ್ಯಕ್ಕೆ ಅನುಗುಣವಾಗಿ ಖರೀದಿಸಲು ಪ್ರಮಾಣವನ್ನು ನಿಗದಿಪಡಿಸಲಾಗುವುದು. ಕೈಮಗ್ಗ ಅಭಿವೃದ್ಧಿ ನಿಗಮದ ಮೂಲಕ ಕೈಮಗ್ಗದ ಉತ್ಪನ್ನಗಳಿಗೆ ಡಿಜಿಟಲ್ ವೇದಿಕೆಯಲ್ಲೂ ಮಾರುಕಟ್ಟೆ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಲಾಗುವುದು’ ಎಂದು ತಿಳಿಸಿದರು.

ಸಚಿವರಾದ ಗೋವಿಂದ ಕಾರಜೋಳ, ಶಿವರಾಮ ಹೆಬ್ಬಾರ, ಶಂಕರ ಪಾಟೀಲ ಮುನೇನಕೊಪ್ಪ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿದ್ದು ಸವದಿ, ಆರ್ಥಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್, ಮುಖ್ಯಮಂತ್ರಿ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್, ಶಾಸಕರಾದ ಅಭಯ ಪಾಟೀಲ, ವೀರಣ್ಣ ಚರಂತಿಮಠ, ಮಹಾದೇವಪ್ಪ ಯಾದವಾಡ, ಹಿರಿಯ ಅಧಿಕಾರಿಗಳು ಹಾಗೂ ನೇಕಾರ ಮುಖಂಡರು ಭಾಗವಹಿಸಿದ್ದರು.

ಮುಖ್ಯಮಂತ್ರಿ ಆಶ್ವಾಸನೆಗಳು

* ಗಿರಿಜನ ಉಪ ಯೋಜನೆಯ ಮಾದರಿಯಲ್ಲಿ ವೃತ್ತಿಪರ ನೇಕಾರರಿಗೆ ಸಹಾಯಧನ ನೀಡುವ ಬೇಡಿಕೆಯ ಕುರಿತು ಆರ್ಥಿಕ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಸಕಾರಾತ್ಮಕವಾಗಿ ಸೂಕ್ತ ಆದೇಶ ಹೊರಡಿಸಲಾಗುವುದು.

* ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಮಾದರಿಯಲ್ಲಿ ವೃತ್ತಿಪರ ಕೂಲಿ ನೇಕಾರರಿಗೂ ವಿವಿಧ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಉದ್ಯಮಗಳಿಗೆ ಅಲ್ಪ ಪ್ರಮಾಣದ ಸೆಸ್ ವಿಧಿಸುವ ಮೂಲಕ ನೆರವು ನೀಡಲು ಚಿಂತನೆ ನಡೆಸಿ ಕ್ರಮ.

* ನೇಕಾರರು ವಾಸಿಸುವ ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮ, ಕಾಲೊನಿಗಳನ್ನಾಗಿ ಪರಿವರ್ತಿಸುವ ಕುರಿತು ಕ್ರಮ ಕೈಗೊಳ್ಳುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ.

* ಮನೆಯಲ್ಲಿಯೇ ಉದ್ಯೋಗ ನಡೆಸುತ್ತಿರುವ ನೇಕಾರರಿಗೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಪಡೆಯುವ ಪ್ರಕ್ರಿಯೆ ಕುರಿತು ಸೂಕ್ತ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು. ನೇಕಾರರಿಗೆ ಆಗುವ ಕಿರುಕುಳ ತಪ್ಪಿಸಲು ಕ್ರಮಕ್ಕೆ ಸೂಚನೆ.

* ನೇಕಾರರಿಗೆ ಸಂಬಂಧಿಸಿದ 3 ನಿಗಮಗಳನ್ನು ಒಗ್ಗೂಡಿಸಿ ಬಲಪಡಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಲಾಗುತ್ತಿದೆ.

* ನೇಕಾರರ ಮಕ್ಕಳಿಗೆ ವಿದ್ಯಾರ್ಥಿವೇತನ, ಆರೋಗ್ಯ ಸೌಲಭ್ಯ ಒದಗಿಸುವ ಬೇಡಿಕೆ ಈಡೇರಿಕೆ ಸಮ್ಮತಿ. ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣೆ ಹಾಗೂ ಬಡ್ಡಿ ಸಹಾಯಧನ ಮೊತ್ತ ಹೆಚ್ಚಿಸಲು ಚರ್ಚಿಸಿ ಕ್ರಮ.

* ಕೋವಿಡ್ ಲಾಕ್‌ಡೌನ್ ನಂತರ ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ನೇಕಾರರ ಕುಟುಂಬಗಳಿಗೆ ₹ 5 ಲಕ್ಷ ಪರಿಹಾರ ನೀಡಲು ಸಮ್ಮತಿ.

* ಮಹಾರಾಷ್ಟ್ರ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ನೇಕಾರರಿಗೆ ನೀಡುತ್ತಿರುವ ಸೌಲಭ್ಯಗಳ ಕುರಿತು ವರದಿ ಪಡೆದು ರಾಜ್ಯದ ನೇಕಾರರ ಹಿತಕ್ಕಾಗಿ ಕೈಗೊಳ್ಳಬಹುದಾದ ಕ್ರಮಗಳ ಅನುಷ್ಠಾನಕ್ಕೆ ಪರಿಶೀಲನೆ.

* ನೂತನ ಜವಳಿ ಮತ್ತು ಸಿದ್ಧ ಉಡುಪು ನೀತಿಯಲ್ಲಿ ಸ್ಥಾಪಿಸಲಾಗಿರುವ ಕೌಶಲಲ ಅಭಿವೃದ್ಧಿ ತರಬೇತಿ ಕೇಂದ್ರಗಳನ್ನು ಕೌಶಲ ಅಭಿವೃದ್ಧಿ ಇಲಾಖೆಗೆ ವರ್ಗಾವಣೆ ಮಾಡಿರುವುದನ್ನು ರದ್ದುಪಡಿಸಿ, ಜವಳಿ ಇಲಾಖೆಯಲ್ಲಿ ಮುಂದುವರಿಸಲು ತೀರ್ಮಾನ.



Read more from source