Karnataka news paper

ಪೊಲೀಸರ ವಿರುದ್ಧ ದುರ್ನಡತೆ ಆರೋಪ; ತನಿಖೆ ನಡೆಸದೆ ಏಕಾಏಕಿ ವಜಾ ಮಾಡುವಂತಿಲ್ಲ; ಹೈಕೋರ್ಟ್


ಬೆಂಗಳೂರು: ಪ್ರೊಬೆಷನರಿಯಲ್ಲಿರುವ ಪೊಲೀಸ್‌ ಸಿಬ್ಬಂದಿ ವಿರುದ್ಧ ದುರ್ನಡತೆ ಆರೋಪ ಬಂದರೆ ಅವರ ವಿರುದ್ಧ ತನಿಖೆ ನಡೆಸದೆ ಏಕಾಏಕಿ ವಜಾ ಮಾಡುವಂತಿಲ್ಲ ಎಂದು ಹೈಕೋರ್ಟ್‌ ವಿಭಾಗೀಯ ಪೀಠ ಆದೇಶಿಸಿದೆ.

ರಮೇಶ್‌ ಮಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡ ಪೀಠದಲ್ಲಿ ಆಲಿಸಿದ ನ್ಯಾಯಮೂರ್ತಿ ಎಸ್‌. ಜಿ ಪಂಡಿತ್‌ ಮತ್ತು ನ್ಯಾ ಅನಂತ ರಾಮನಾಥ ಹೆಗಡೆ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ. ಅರ್ಜಿಯನ್ನು ನ್ಯಾಯಪೀಠ ಮಾನ್ಯ ಮಾಡಿದೆ. ಅಲ್ಲದೇ, ವಜಾ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಜಾಗೊಳಿಸಿದ್ದ ಬೆಳಗಾವಿಯ ಕರ್ನಾಟಕ ಆಡಳಿತ ಮಂಡಳಿ ಆದೇಶವನ್ನೂ ನ್ಯಾಯಾಲಯ ರದ್ದುಗೊಳಿಸಿದೆ. ನಿಯಮದ ಪ್ರಕಾರ ಪ್ರೊಬೆಷನರಿ ಸಮಯದಲ್ಲಿ ಅರ್ಜಿದಾರರನ್ನು ವಜಾಗೊಳಿಸುವ ಅಧಿಕಾರ ಇದೆ. ಆದರೆ ಅಂತಹ ಸಿಬ್ಬಂದಿ ವಿರುದ್ಧ ದುರಾಚಾರ ಅಥವಾ ತಪ್ಪು ನಡವಳಿಕೆಯ ದೂರುಗಳು ಬಂದಾಗ ಕರ್ನಾಟಕ ಸಿವಿಲ್‌ ಸರ್ವಿಸ್‌ (ಪ್ರೊಬೇಷನ್‌) ನಿಯಮ 1977 ಅಧಿನಿಯಮ 5ರ ಪ್ರಕಾರ ತನಿಖೆ ಅತ್ಯಗತ್ಯ. ತನಿಖೆ ನಡೆಸದಂತೆ ಏಕಾಏಕಿ ಸೇವೆಯಿಂದ ವಜಾ ಮಾಡಬಾರದು ಎಂದು ಆದೇಶ ನೀಡಿದೆ.
ಪೊಲೀಸರಿಗೆ ನೀಡಲಾಗುವ ಬಾಡಿವೋರ್ನ್‌ ಕ್ಯಾಮೆರಾ ಬಳಸುವಂತೆ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ
ಅರ್ಜಿದಾರರ ಪರ ವಕೀಲರು, ‘ಅರ್ಜಿದಾರರ ಮೇಲಿನ ಆರೋಪದ ಬಗ್ಗೆ ತನಿಖೆ ನಡೆಸದೆ ಏಕಾಎಕಿ ವಜಾಗೊಳಿಸಲಾಗಿದೆ, ಅವರ ಅಹವಾಲು ಆಲಿಸಿಲ್ಲ’ ಎಂದರು. ಸರಕಾರಿ ವಕೀಲರು, ‘ಪ್ರಶ್ನೆ ಪತ್ರಿಕೆಯಂತಹ ಗಂಭೀರ ಆರೋಪ ಅರ್ಜಿದಾರನ ಮೇಲಿತ್ತು. ಅದನ್ನು ಆಧರಿಸಿಯೇ ವರದಿ ತರಿಸಿಕೊಂಡು ನಿಯಮದಂತೆಯೇ ವಜಾಗೊಳಿಸಲಾಗಿದೆ’ ಎಂದು ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: 2017 ರಲ್ಲಿ ರಮೇಶ್‌ ಮಲ್ಲಿ ಪೊಲೀಸ್‌ ಕಾನ್ಸಟೇಬಲ್‌ (ವೈರ್‌ ಲೆಸ್‌) ಆಗಿ ನೇಮಕ ಗೊಂಡಿದ್ದರು. ಅವರು ಇನ್ನು ಪ್ರೊಬೇಷನರಿ ಆಗಿದ್ದಾಗ 2018 ರಲ್ಲಿ ಪೊಲೀಸ್‌ ಇಲಾಖೆ ಸಬ್‌ ಇನ್ಸ್‌ಪೆಕ್ಟರ್‌ (ಸಿವಿಲ್‌) ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಆಗ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಲು ಕೆಲವು ವ್ಯಕ್ತಿಗಳು ಸಂಚು ರೂಪಿಸಿದ್ದರು ಎಂಬ ಮಾಹಿತಿ ಸಿಸಿಬಿಗೆ ದೊರಕಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಅರ್ಜಿದಾರ ರಮೇಶ್‌ ಮಲ್ಲಿ ಸೇರಿದಂತೆ ಕೆಲವು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದರು. ಬಳಿಕ ಅರ್ಜಿದಾರರು ಜಾಮೀನು ಪಡೆದು ಹೊರಬಂದಿದ್ದರು. ಅಷ್ಟರಲ್ಲಿ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಅದನ್ನು ಕೆಎಟಿ ಮುಂದೆ ರಮೇಶ್‌ ಪ್ರಶ್ನಿಸಿದ್ದು, ಕೆಎಟಿ ಕೂಡ ಅವರ ಅರ್ಜಿಯನ್ನು ವಜಾಗೊಳಿಸಿತ್ತು. ಹಾಗಾಗಿ ಅವರು ಹೈಕೋರ್ಟ್‌ ಮೊರೆ ಹೋಗಿದ್ದರು.



Read more

[wpas_products keywords=”deal of the day sale today offer all”]