
ನವದೆಹಲಿ: ಕಳೆನಾಶಕ ‘ಗ್ಲೈಫೊಸೇಟ್’ ಬಳಕೆ ಮೇಲೆ ಸಂಪೂರ್ಣ ನಿಷೇಧ ಹೇರಬೇಕು ಎಂದು ಆರ್‌ಎಸ್‌ಎಸ್‌ನ ಅಂಗಸಂಸ್ಥೆಯಾದ ಸ್ವದೇಶಿ ಜಾಗರಣ್ ಮಂಚ್ ಶನಿವಾರ ಆಗ್ರಹಿಸಿದೆ.
ಎರಡು ಲಕ್ಷಕ್ಕೂ ಅಧಿಕ ಜನರು ಸಹಿ ಮಾಡಿರುವ ಮನವಿ ಪತ್ರವನ್ನು ಕೇಂದ್ರ ಕೃಷಿ ಮತ್ತು ಕೃಷಿಕರ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಅವರಿಗೆ ಸಲ್ಲಿಸಲಾಗಿದೆ ಎಂದು ಸಂಘಟನೆಯ ಸಹಸಂಚಾಲಕ ಅಶ್ವನಿ ಮಹಾಜನ್ ತಿಳಿಸಿದ್ದಾರೆ.
‘ಗ್ಲೈಫೊಸೇಟ್ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಈ ಕಳೆನಾಶಕ ಗ್ರಾಹಕರ ಆರೋಗ್ಯ, ಪರಿಸರ, ರೈತರು ಹಾಗೂ ಕೃಷಿ ಕೂಲಿಕಾರ್ಮಿಕರ ಪಾಲಿಗೆ ಕಂಟಕವಾಗಿದೆ’ ಎಂದು ಸಂಘಟನೆ ತಿಳಿಸಿದೆ.
‘ಗ್ಲೈಫೊಸೇಟ್‌ನ ನಿರ್ಬಂಧಿತ ಬಳಕೆಗೆ ಸರ್ಕಾರ ಅನುಮತಿ ನೀಡಿದೆ. ‘ಪೆಸ್ಟ್ ಕಂಟ್ರೋಲ್ ಆಪರೇಟರ್ಸ್’ ಅನುಮತಿ ಇದ್ದರೆ ಮಾತ್ರ ಈ ಕಳೆನಾಶಕ ಬಳಸಬೇಕು ಎಂದು 2020ರ ಜುಲೈನಲ್ಲಿ ಆದೇಶ ಹೊರಡಿಸಿದೆ. ಆದರೆ, ಇಂಥ ಆದೇಶಕ್ಕೆ ಅರ್ಥವಿಲ್ಲ. ಕಾನೂನುಬಾಹಿರವಾಗಿ ಗ್ಲೈಫೊಸೇಟ್ ಮಾರಾಟವನ್ನು ಇಂಥ ಕ್ರಮಗಳಿಂದ ತಡೆಯಲು ಸಾಧ್ಯ ಇಲ್ಲ’ ಎಂದು ಸಂಘಟನೆ ಹೇಳಿದೆ.