ಹೈಲೈಟ್ಸ್:
- ಲಖಿಂಪುರ ಖೇರಿಯಲ್ಲಿ ಪ್ರತಿಭಟನಾಕಾರರ ಮೇಲೆ ಕಾರು ಹರಿಸಿದ್ದ ಆರೋಪ
- ಜೈಲಿನಲ್ಲಿರುವ ಪ್ರಮುಖ ಆರೋಪಿ, ಕೇಂದ್ರ ಸಚಿವರ ಮಗ ಆಶೀಶ್ ಮಿಶ್ರಾ
- ಅಜಯ್ ಮಿಶ್ರಾ ಅವರನ್ನು ಸಂಪುಟದಿಂದ ವಜಾಗೊಳಿಸಲು ವಿಪಕ್ಷಗಳ ಆಗ್ರಹ
- ಮಗ ಮಾಡಿರುವ ಕೃತ್ಯಕ್ಕೆ ತಂದೆಗೆ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ ಎಂದಿರುವ ಬಿಜೆಪಿ
ಸಂಸತ್‌ನಲ್ಲಿ ಗುರುವಾರ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ಸಚಿವರು ರಾಜೀನಾಮೆ ನೀಡಲೇಬೇಕು. ಅವರೊಬ್ಬ ಕ್ರಿಮಿನಲ್’ ಎಂದು ಆರೋಪಿಸಿದರು. ‘ಲಖಿಂಪುರ ಖೇರಿಯಲ್ಲಿ ನಡೆದ ಹತ್ಯೆಯ ಬಗ್ಗೆ ಮಾತನಾಡಲು ನಮಗೆ ಅವಕಾಶ ನೀಡಬೇಕು. ಅದರಲ್ಲಿ ಸಚಿವರ ಪಾತ್ರ ಇತ್ತು ಮತ್ತು ಅದೊಂದು ಸಂಚು ಎಂದು ಹೇಳಲಾಗುತ್ತಿದೆ’ ಎಂದು ರಾಹುಲ್ ಹೇಳಿದ್ದಾರೆ.
ಮಗ ಮಾಡಿರುವ ಕೃತ್ಯಗಳಿಗಾಗಿ ತಂದೆಗೆ ಶಿಕ್ಷೆ ನೀಡಲು ಸಾಧ್ಯವಿಲ್ಲ ಎಂದಿರುವ ಬಿಜೆಪಿ, ಅಜಯ್ ಮಿಶ್ರಾ ಅವರಿಂದ ರಾಜೀನಾಮೆ ಪಡೆಯುವುದು ಅಥವಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯೆ ನೀಡಿದೆ.
ಲಖಿಂಪುರ ಖೇರಿ ಘಟನೆ ಪೂರ್ವಯೋಜಿತ ಸಂಚು ಎಂಬ ಎಸ್‌ಐಟಿ ಹೇಳಿಕೆಯ ಬಗ್ಗೆ ಚರ್ಚೆಗಳು ನಡೆಯಬೇಕು ಎಂದು ವಿರೋಧಪಕ್ಷಗಳ ಸಂಸದರು ಎರಡೂ ಸದನಗಳಲ್ಲಿ ನೋಟಿಸ್‌ಗಳನ್ನು ನೀಡಿದ್ದಾರೆ. ‘ಲಖಿಂಪುರ ಬಲಿಪಶುಗಳಿಗೆ ನ್ಯಾಯ ಬೇಕು’ ಮತ್ತು ‘ಗೃಹ ಖಾತೆ ರಾಜ್ಯ ಸಚಿವರನ್ನು ವಜಾಗೊಳಿಸಿ’ ಎಂಬ ಫಲಕಗಳನ್ನು ಸದನದಲ್ಲಿ ಪ್ರದರ್ಶಿಸಿದರು. ರಾಜೀನಾಮೆ ಗದ್ದಲಗಳ ನಡುವೆ ಉಭಯ ಸದನಗಳ ಕಲಾಪ ಮಧ್ಯಾಹ್ನದ ಬಳಿಕ ಕೂಡ ಮುಂದೂಡಲ್ಪಟ್ಟಿತು.
ಈ ಉದ್ದೇಶಕ್ಕೆ ಸದನದ ಕಲಾಪ ಹಾಳಾಗಲು ತಾವು ಬಿಡುವುದಿಲ್ಲ ಎಂದು ರಾಜ್ಯಸಭೆ ಅಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಹೇಳಿದರು. ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡುತ್ತಿದ್ದಾಗ ಅದಕ್ಕೆ ಅಡ್ಡಿಪಡಿಸಿದ್ದು, ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳ ಪ್ರತಿಭಟನೆ ತೀವ್ರಗೊಳ್ಳಲು ಕಾರಣವಾಯಿತು.
‘ಅಜಯ್ ಮಿಶ್ರಾ ತೇನಿ ಅವರನ್ನು ವಜಾಗೊಳಿಸಲು ಸರ್ಕಾರ ನಿರಾಕರಿಸುತ್ತಿರುವುದು ನೈತಿಕ ದಿವಾಳಿತನದ ಸೂಚಕವಾಗಿದೆ. ನರೇಂದ್ರ ಮೋದಿ ಅವರೇ, ನೀವು ಜಾಗರೂಕವಾಗಿ ರೂಪಿಸಿದ ಧರ್ಮನಿಷ್ಠೆಯ ಕನ್ನಡಕವನ್ನು ಮತ್ತು ಧಾರ್ಮಿಕ ದಿರಿಸನ್ನು ತೊಡುವುದು, ನೀವು ಅಪರಾಧಿಯೊಬ್ಬನನ್ನು ರಕ್ಷಿಸುತ್ತಿರುವ ಸತ್ಯವನ್ನು ಬದಲಿಸುವುದಿಲ್ಲ. ಅಜಯ್ ಮಿಶ್ರಾ ತೇನಿ ಅವರನ್ನು ವಜಾಗೊಳಿಸಬೇಕು ಮತ್ತು ಕಾನೂನಿಗೆ ಅನುಗುಣವಾಗಿ ಪ್ರಕರಣ ದಾಖಲಿಸಬೇಕು’ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್ ಮಾಡಿದ್ದಾರೆ.
ಮಿಶ್ರಾ ಅವರ ವಿರುದ್ಧ ಕ್ರಮ ಕೈಗೊಳ್ಳಲು ಬಿಜೆಪಿ ನಾಯಕತ್ವ ಸಿದ್ಧವಿಲ್ಲ. ಅವರನ್ನು ಸದ್ಯಕ್ಕೆ ಸಚಿವ ಸಂಪುಟದಿಂದ ಕೈಬಿಡುವುದಿಲ್ಲ. ಲಖಿಂಪುರ ಖೇರಿ ಪ್ರಕರಣ ಇನ್ನೂ ಕೋರ್ಟ್‌ನಲ್ಲಿದೆ. ಎಸ್‌ಐಟಿ ತನ್ನ ಅಂತಿಮ ವರದಿ ಸಲ್ಲಿಸಬೇಕಿದೆ ಎಂದು ಪಕ್ಷದ ಸಚಿವರು ಹಾಗೂ ಹಿರಿಯ ನಾಯಕರು ಹೇಳಿದ್ದಾರೆ.
ಆದರೆ, ಲಖಿಂಪುರ ಖೇರಿಯಲ್ಲಿ ಆಕ್ಸಿಜನ್ ಪ್ಲಾಂಟ್ ಉದ್ಘಾಟನೆಗೆಂದು ತೆರಳಿದ್ದ ಸಂದರ್ಭದಲ್ಲಿ ಅಜಯ್ ಮಿಶ್ರಾ ಅವರು ಪತ್ರಕರ್ತರ ವಿರುದ್ಧ ರೇಗಾಡಿದ ಘಟನೆಯನ್ನು ಪಕ್ಷದ ನಾಯಕರು ‘ತಪ್ಪು’ ಎಂದು ಖಂಡಿಸಿದ್ದಾರೆ. ಅವರಿಗೆ ಈ ಬಗ್ಗೆ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.