Source : Online Desk
ಬೆಳಗಾವಿ: ಔರಂಗಜೇಬನ ಪರವಾಗಿರುವವರು ಹಾಗೂ ಸೇನಾಧಿಕಾರಿಗಳು ಮೃತರಾದಾಗ ಸಂತೋಷ ಪಡುವ ಜನಾಂಗಕ್ಕೆ 2 ಸಾವಿರ ಕೋಟಿ ರೂಪಾಯಿ ಅನುದಾನ ಕೊಡುತ್ತೀರಿ. ಆದರೆ, ಹಿಂದೂ ಧರ್ಮವನ್ನು ರಕ್ಷಣೆ ಮಾಡಿದ ಶಿವಾಜಿ ಮಹಾರಾಜರು ಕಟ್ಟಿದ ಮರಾಠ ಸಮುದಾಯಕ್ಕೆ ಅನುದಾನ ಕೊಡುತ್ತಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ
ವಿಧಾನಸಭೆಯ 4ನೇ ದಿನದ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಛತ್ರಪತಿ ಶಿವಾಜಿ ಮಹಾರಾಜರು, ಔರಂಗಜೇಬ ಹಾಗೂ ಟಿಪ್ಟು ಸುಲ್ತಾನ್ ಎಂಬ ಧರ್ಮಾಂಧಕರಿಂದ ಹಿಂದೂ ಧರ್ಮವನ್ನು ರಕ್ಷಣೆ ಮಾಡಿದ್ದಾರೆ. ಇದನ್ನು ಪ್ರಧಾನಿ ಮೋದಿಯವರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಆದರೆ, ನಿಕಟ ಪೂರ್ವ ಮುಖ್ಯಮಂತ್ರಿಗಳು ಮರಾಠ ಸಮಾಜದ ವಿವಿಧ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರು. ಆದರೆ, ಈವರೆಗೆ ಆಗಿಲ್ಲ ಎಂದು ಆರೋಪಿಸಿದರು.
ಮರಾಠ ನಿಗಮಕ್ಕೆ 250 ಕೋಟಿ ರೂಪಾಯಿ ಅನುದಾನ. ಈವರೆಗೆ ಮರಾಠ ಅಭಿವೃದ್ಧಿ ನಿಗಮ ಜಾರಿಗೆ ಬರದೇ ಇರುವುದನ್ನು ಶಾಸಕರು ಸದನದಲ್ಲಿ ಪ್ರಶ್ನೆ ಮಾಡಿದರು. ರಾಜ್ಯದಲ್ಲಿ ಮರಾಠ ಸಮುದಾಯವರನ್ನು ಸಂಪೂರ್ಣ ನಿರ್ಲಕ್ಷಿಸುವ ಕಾರ್ಯ ನಡೆಯುತ್ತಿದೆ. ಮರಾಠ ಸಮಾಜಕ್ಕೆ 100 ಕೋಟಿ ರೂಪಾಯಿ ಬಿಡುಗಡೆ ಮಾಡಬೇಕೆಂದ ಅವರು, 6 ಪಂಗಡಗಳು ಹಿಂದುಳಿದ ವರ್ಗಗಳ (ಬಿ)ಯಲ್ಲಿವೆ ಅದನ್ನು (ಎ)ನಲ್ಲಿ ಸೇರಿಸಬೇಕು. ಅಲ್ಲದೆ, ತಕ್ಷಣವೇ ನಿಗಮದ ಅಧ್ಯಕ್ಷರನ್ನು ಪ್ರಾಮಾಣಿಕ ಮರಾಠದ ಸಮುದಾಯಕ್ಕೆ ಸೇರಿದವರನ್ನು ಆಯ್ಕೆ ಮಾಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ನಿಮ್ಮಿಂದಲೇ ಸರ್ಕಾರ ಅಲ್ಲ, ಕನಿಷ್ಠ ಪೋನ್ ಕಾಲ್ ರಿಸೀವ್ ಮಾಡಿ: ಬಿಜೆಪಿ ಸಚಿವರ ವಿರುದ್ಧ ಸ್ವಪಕ್ಷೀಯ ಶಾಸಕರ ಆಕ್ರೋಶ
ಈ ವೇಳೆ ಉತ್ತರಿಸಿದ ಕಂದಾಯ ಸಚಿವ ಆರ್. ಅಶೋಕ್, ಇದು ಭಾಷೆಗೆ ಸಂಬಂಧಿಸಿದ ವಿಚಾರವಲ್ಲ. ಮರಾಠ ಸಮಾಜದ ಅಭಿವೃದ್ಧಿಗೆ ಸಂಬಂಧಿಸಿದ್ದಾಗಿದೆ. ಚುನಾವಣೆ ನೀತಿ ಸಂಹಿತೆ ಇದ್ದಿದ್ದರಿಂದ ಮರಾಠ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನು, ಪದಾಧಿಕಾರಿಗಳನ್ನು ಘೋಷಣೆ ಮಾಡಿಲ್ಲ. ಶೀಘ್ರವೇ ಈ ಬಗ್ಗೆ ಕ್ರಮಕೈಗೊಂಡು ನೇಮಕ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಅಲ್ಲದೆ ಮರಾಠ ನಿಗಮದ ಅನುದಾನಕ್ಕೆ ಸಂಬಂಧಿಸಿದಂತೆ, ಈ ಹಿಂದೆ ಘೋಷಣೆ ಮಾಡಿದ್ದ 50 ಕೋಟಿ ರೂಪಾಯಿ ಜೊತೆಗೆ ಇನ್ನು ಹೆಚ್ಚಿನ ಹಣವನ್ನು ಬಿಡುಗಡೆ ಮಾಡಲು ರಾಜ್ಯ ಸರ್ಕಾರ ತಯಾರು ಇದೆ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.