Karnataka news paper

IPL 2022 Auction: ಕೇವಲ 3 ಆಟಗಾರರಿಗೆ 28.5 ಕೋಟಿ ರೂ. ಖರ್ಚು ಮಾಡಿದ ಆರ್‌ಸಿಬಿ!


ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಮತ್ತದೇ ತಪ್ಪು ಮಾಡಿದಂತೆ ಕಾಣಿಸುತ್ತಿದೆ. ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ ಹರಾಜು ಪ್ರಕ್ರಿಯೆ ಇತಿಹಾಸ ಕೆದಕಿದರೆ ಆರ್‌ಸಿಬಿ ಈ ಹಿಂದೆ ತಾನು ಉಳಿಸಿಕೊಳ್ಳದೆ ಹರಾಜಿಗೆ ಬಿಟ್ಟಿದ್ದ ಆಟಗಾರರನ್ನು ಮರಳಿ ಭಾರಿ ಬೆಲೆಗೆ ಖರೀದಿಸಿದ ಉದಾಹರಣೆಗಳಿವೆ.

ಈ ಬಾರಿಯೂ ಅದೇ ರಣನೀತಿ ಅನುಸರಿಸಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ಐಪಿಎಲ್‌ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ತನ್ನದೇ ಇಬ್ಬರು ಆಟಗಾರರ ಖರೀದಿ ಸಲುವಾಗಿ ಬರೋಬ್ಬರಿ 21.5 ಕೋಟಿ ರೂ. ಖರ್ಚು ಮಾಡುವ ಮೂಲಕ ಹುಬ್ಬೇರುವಂತೆ ಮಾಡಿದೆ.

ಅಂದಹಾಗೆ ಐಪಿಎಲ್‌ 2022 ಟೂರ್ನಿಯ ಮೆಗಾ ಆಕ್ಷನ್‌ಗೂ ಮುನ್ನ ಚಾಲೆಂಜರ್ಸ್‌ ತಂಡ ಜೇಸನ್‌ ಹೋಲ್ಡರ್‌, ಡೇವಿಡ್‌ ವಾರ್ನರ್‌ ಮತ್ತು ಶ್ರೇಯಸ್‌ ಅಯ್ಯರ್‌ ಅವರಂತಹ ಸ್ಟಾರ್‌ಗಳ ಖರೀದಿಗೆ ಹಣದ ಹೊಳೆ ಹರಿಸಲಿದೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಚಾಲೆಂಜರ್ಸ್‌ ಬೇರೆಯ ಲೆಕ್ಕಾಚಾರವನ್ನೇ ಹಾಕಿಕೊಂಡಿದೆ.

8.75 ಕೋಟಿ ರೂ. ಬೆಲೆಗೆ ಲಖನೌ ಪಾಲಾದ ಹೋಲ್ಡರ್‌, ಟ್ರೋಲಾದ ರಾಯಲ್ಸ್‌!

ಫಾಫ್‌ ಕ್ಯಾಪ್ಟನ್‌ ಆಗುವ ಸಾಧ್ಯತೆ!
ಹರಾಜಿನ ಆರಂಭದಲ್ಲಿ ಕಾಸು ಬಿಚ್ಚದೇ ಕುಳಿತಿದ್ದ ರಾಯಲ್‌ ಚಾಲೆಂಜರ್ಸ್‌, ಮೊದಲು ಬಿಡ್ಡಿಂಗ್‌ಗೆ ಇಳಿದಿದ್ದೇ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಫಾಫ್‌ ಡು’ಪ್ಲೆಸಿಸ್‌ ಸಲುವಾಗಿ. ವಿರಾಟ್‌ ಕೊಹ್ಲಿ ಕ್ಯಾಪ್ಟನ್ಸಿ ಬಿಟ್ಟಿರುವ ಕಾರಣ ಅನುಭವಿ ನಾಯಕನನ್ನು ತಂಡಕ್ಕೆ ಕರೆ ತರುವ ಉದ್ದೇಶದಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಬಿಡ್ಡಿಂಗ್‌ ವಾರ್‌ನಲ್ಲಿ ಸೋಲಿಸಿ ಬರೋಬ್ಬರಿ 7 ಕೋಟಿ ರೂ. ಬೆಲೆಗೆ ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕನ ಸೇವೆಯನ್ನು ತನ್ನದಾಗಿಸಿಕೊಂಡಿದೆ.

ಈ ಮೂಲಕ ಫಾಫ್, ಇದೇ ಮೊದಲ ಬಾರಿ ಧೋನಿ ನಾಯಕತ್ವ ಇಲ್ಲದ ತಂಡವೊಂದರಲ್ಲಿ ಆಡಲಿದ್ದಾರೆ. ಈ ಮೊದಲು ಧೋನಿ ಸಾರಥ್ಯದ ಪುಣೆ ಸೂಪರ್‌ ಜಯಂಟ್ಸ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳ ಪರ ಆಡಿದ್ದರು.

ಮೆಗಾ ಆಕ್ಷನ್‌ಗೂ ಮೊದಲೇ 45 ಲಕ್ಷ ರೂ. ಬೆಲೆ ಹೆಚ್ಚಿಸಿಕೊಂಡ ಹೂಡ!

ಆಲ್‌ರೌಂಡರ್‌ಗಳ ಖರೀದಿಗೆ ಹಣದ ಹೊಳೆ
ರಾಯಲ್‌ ಚಾಲೆಂಜರ್ಸ್‌ ಹರಾಜಿಗೆ ಬಿಟ್ಟುಕೊಟ್ಟಿದ್ದ ತನ್ನ ಇಬ್ಬರು ಸ್ಟಾರ್‌ ಆಲ್‌ರೌಂಡರ್‌ಗಳಾದ ಹರ್ಷಲ್‌ ಪಟೇಲ್‌ ಮತ್ತು ವಾನಿಂದು ಹಸರಂಗ ಅವರನ್ನು ಖರೀದಿಸಲು ಹಣದ ಹೊಳೆ ಹರಿಸಿದೆ. ಇಬ್ಬರಿಗೆ ತಲಾ 10.75 ಕೋಟಿ ರೂ. ನೀಡಿದ ಆರ್‌ಸಿಬಿ ಕೇವಲ 3 ಆಟಗಾರರ ಖರೀದಿ ಸಲುವಾಗಿ ಬರೋಬ್ಬರಿ 28.5 ಕೋಟಿ ರೂ ಖರ್ಚು ಮಾಡಿದೆ. ಇನ್ನು 18 ಆಟಗಾರರನ್ನು ಆರ್‌ಸಿಬಿ ಖರೀದಿಸುವುದು ಬಾಕಿ ಇದೆ. ಈ ನಡುವೆ ಆರ್‌ಸಿಬಿ ಮಾಜಿ ಆಲ್‌ರೌಂಡರ್‌ ವಾಷಿಂಗ್ಟನ್‌ ಸುಂದರ್‌ ಅವರನ್ನು 8.75 ಕೋಟಿ ರೂ. ಬೆಲೆಗೆ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಖರೀದಿಸಿದೆ. ದೇವದತ್‌ ಪಡಿಕ್ಕಲ್‌ ಕೂಡ 7.75 ಕೋಟಿ ರೂ.ಗಳಿಗೆ ರಾಜಸ್ಥಾನ್‌ ರಾಯಲ್ಸ್‌ ಸೇರಿದ್ದಾರೆ.

ಹರಾಜಿನಲ್ಲಿ ಖರೀದಿಸಿದ ಮೊದಲ ಮೂರು ಆಟಗಾರರು
1. ಹರ್ಷಲ್‌ ಪಟೇಲ್‌ (10.75 ಕೋಟಿ ರೂ.)
2. ವಾನಿಂದು ಹಸರಂಗ (10.75 ಕೋಟಿ ರೂ.)
3. ಫಾಫ್‌ ಡು’ಪ್ಲೆಸಿಸ್‌ (7 ಕೋಟಿ ರೂ.)

ಉಳಿಸಿಕೊಂಡ ಆಟಗಾರರು
ವಿರಾಟ್‌ ಕೊಹ್ಲಿ (15 ಕೋಟಿ ರೂ.)
ಗ್ಲೆನ್‌ ಮ್ಯಾಕ್ಸ್‌ವೆಲ್‌ (11 ಕೋಟಿ ರೂ.)
ಮೊಹಮ್ಮದ್‌ ಸಿರಾಜ್‌ (7 ಕೋಟಿ ರೂ.)



Read more

[wpas_products keywords=”deal of the day gym”]