ಬೆಳಗಾವಿ: ‘ರಾಜ್ಯ ಬಜೆಟ್ ತಯಾರಿ ಪ್ರಕ್ರಿಯೆ ಆರಂಭಿಸಿದ್ದು, ಈಗಾಗಲೇ ಹಲವು ಇಲಾಖೆಗಳ ಸಭೆ ನಡೆಸಿದ್ದೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಲ್ಲಿನ ಸಾಂಬ್ರಾ ವಿಮಾನನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಶನಿವಾರ ಮಾತನಾಡಿದ ಅವರು, ‘ಫೆ. 14 ಹಾಗೂ 15ರಂದು ಕೂಡ ಹಲವು ಸಭೆಗಳನ್ನು ನಡೆಸಲಿದ್ದೇನೆ. ಫೆ.25ರ ನಂತರ ಎಲ್ಲ ಇಲಾಖೆಗಳ ಬೇಡಿಕೆಗಳು ಹಾಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳನ್ನು ಗಮನಿಸಿ ಮುಂದಿನ ಬಜೆಟ್ ಮಾಡಲಾಗುವುದು’ ಎಂದರು.
‘ನಮ್ಮ ಆರ್ಥಿಕ ಸ್ಥಿತಿ ಪರಿಗಣಿಸಿ ಬಜೆಟ್ ಸಿದ್ಧಪಡಿಸಬೇಕಾಗುತ್ತದೆ. ಇದಕ್ಕಾಗಿ ಸಂಪನ್ಮೂಲ ಕ್ರೋಢೀಕರಣ ಪ್ರಮಾಣ ಹೆಚ್ಚಿಸುವಂತೆ ಆದೇಶಿಸಿದ್ದೇನೆ. ಅದರ ಪ್ರಗತಿಯನ್ನೂ ಪರಿಶೀಲಿಸುತ್ತೇನೆ. ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ಏನೇನು ಕೊಡಲಾಗುತ್ತದೆ ಎನ್ನುವುದನ್ನು ಈಗಲೇ ಹೇಳಲಾಗದು’ ಎಂದು ಪ್ರತಿಕ್ರಿಯಿಸಿದರು.
‘ಹಿಜಾಬ್‌ಗೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿದ್ದು, ವಿಚಾರಣೆ ನಡೆಯುತ್ತಿದೆ. ಮಧ್ಯಂತರ ಆದೇಶವನ್ನೂ ನ್ಯಾಯಾಲಯ ನೀಡಿದೆ. ರಾಜ್ಯದಲ್ಲಿ ಶಾಂತಿ ನೆಲೆಸಬೇಕು ಮತ್ತು ಮಕ್ಕಳಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳು ಮೂಡದಂತೆ ನೋಡಿಕೊಂಡು ಶಾಲಾ–ಕಾಲೇಜುಗಳಲ್ಲಿ ತರಗತಿಗಳನ್ನು ಪುನರಾರಂಭಿಸಬೇಕು ಎನ್ನುವುದು ನಮ್ಮ ಮೊದಲ ಆದ್ಯತೆಯಾಗಿದೆ. ನ್ಯಾಯಾಲಯ ಕೂಡ ಅದನ್ನೇ ಹೇಳಿದೆ. ಅದಕ್ಕೆ ಒತ್ತು ಕೊಡುತ್ತಿದ್ದೇವೆ’ ಎಂದು ತಿಳಿಸಿದರು.
‘ಬೆಳಗಾವಿಯಲ್ಲಿ ರಕ್ಷಣಾ ಇಲಾಖೆಗೆ ನೀಡಿದ್ದ 750 ಎಕರೆ ಹುಲ್ಲುಗಾವಲು ಪ್ರದೇಶ ವಾಪಸ್ ಕೊಡುವಂತೆ ಕೇಂದ್ರ ಸಚಿವರನ್ನು ಇತ್ತೀಚೆಗೆ ಕೋರಿದ್ದೇನೆ. ಸಂಗೊಳ್ಳಿಯಲ್ಲಿ ನಿರ್ಮಿಸಿರುವ ಸಂಗೊಳ್ಳಿರಾಯಣ್ಣ ಶಾಲೆಯನ್ನು ರಕ್ಷಣಾ ಇಲಾಖೆಗೆ ತೆಗೆದುಕೊಂಡು ಮಿಲಿಟರಿ ಶಾಲೆ ಮಾಡಬೇಕು ಎಂದು ಕೋರಿದ್ದೇನೆ. ಈ ಸಂಬಂಧ ಈಗಾಗಲೇ ವರದಿ ಪಡೆಯಲಾಗಿದೆ. ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ’ ಎಂದು ಹೇಳಿದರು.
ಶಾಸಕ ದುರ್ಯೋಧನ ಐಹೊಳೆ, ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಇದ್ದರು.
ಇದಕ್ಕೂ ಮುನ್ನ ಮುಖ್ಯಮಂತ್ರಿ, ವಿವಿಧ ಸಂಘಟನೆಗಳ ಪ್ರತಿನಿಧಿಗಳಿಂದ ಮನವಿ ಸ್ವೀಕರಿಸಿದರು.
Read more from source
[wpas_products keywords=”deal of the day sale today kitchen”]