ಪರಿಚಯ ಸ್ನೇಹಕ್ಕೆ ತಿರುಗಿ, ಸಲುಗೆಗೆ ದಾರಿ ಮಾಡಿಕೊಟ್ಟು, ಆ ಸಲುಗೆ ಮನದಲ್ಲೇ ಹೊಸ ಮಧುರ ಭಾವನೆಗೆ ನಾಂದಿಯಾಗಿ, ಅದು ಮರಿ ಹಾಕಿ, ಕೊನೆಗೆ ಅದೇ ಮಾತಾಗಿ ಪ್ರೀತಿ ಎಂಬ ಅರ್ಥವನ್ನು ಪಡೆದುಕೊಳ್ಳುತ್ತದೆ. ಈ ಪ್ರೇಮದ ಸುಂದರ ಪಾಶಕ್ಕೆ ಬಿದ್ದವರು ಪ್ರೇಮಿಗಳೆನ್ನಿಸಿಕೊಳ್ಳುತ್ತಾರೆ. ಪ್ರೀತಿ ಜಗತ್ತಿನ ಎಲ್ಲಾ ಸಂಬಂಧಗಳಿಗಿಂತ ವಿಭಿನ್ನವಾದ ಬಂಧ. ಪ್ರೇಮ ಪಾಶಕ್ಕೆ ಬೀಳದ ಜನರೇ ಇಲ್ಲ, ಇದ್ದರೂ ಬೆರಳೆಣಿಕೆಯಷ್ಟೇ. ಪ್ರೀತಿ ಎಂದರೆ ಹಾಗೇ ಅದೊಂದು ರಮ್ಯ ಅನುಭವ, ಅರಿತವನೇ ಬಲ್ಲ ಅದರ ಸವಿಯ.
ಪ್ರೇಮಲೋಕಕ್ಕೆ ಕಾಲಿಟ್ಟ ನವಪ್ರೇಮಿಗಳಿಗೆ ಇದು ಅದ್ಭುತವೆನಿಸುವುದಂತೂ ಸುಳ್ಳಲ್ಲ. ಅವರಿಗೆ ಬೇರೆ ಲೋಕದ ಅರಿವೇ ಇರುವುದಿಲ್ಲ, ಇದ್ದರೂ ಇದರಷ್ಟು ಖುಷಿ ಕೊಡುವುದಿಲ್ಲ. ಪ್ರೇಮಿಗಳಿಗೆ ಪ್ರೇಮವೇ ತಮ್ಮ ಸಾಮ್ರಾಜ್ಯ, ಹುಡುಗನೇ ರಾಜ, ಹುಡುಗಿಯೇ ರಾಣಿ, ಹೃದಯವೇ ಅವರ ರಾಜಧಾನಿ, ಇಲ್ಲಿ ಅವರ ಸರಸ – ಮುನಿಸುಗಳೇ ಪ್ರಜೆಗಳು! ಇಲ್ಲಿ ಅವರಿಗವರೇ ತಂದೆ – ತಾಯಿ, ಬಂಧು – ಬಳಗ. ಬೇರೆ ಯಾವುದೇ ಸಂಬಂಧ ಅವರ ಮಧ್ಯೆ ಬರಲಾರದು. ಪ್ರೀತಿಯ ಮಜಲೇ ಹಾಗೇ ಎಲ್ಲವನ್ನು ಮರೆಸಿಬಿಡುತ್ತದೆ! ಪ್ರೀತಿಯ ಗಡಿ, ಆಸ್ತಿ-ಅಂತಸ್ತು, ಜಾತಿ-ಮತ, ಮೇಲು-ಕೀಳು, ಸೌಂದರ್ಯ ಎಲ್ಲವನ್ನೂ ಮೀರಿದ್ದು. ಅದಕ್ಕೇ ಪ್ರೀತಿ ಕುರುಡು ಅಂತಾರೇನೋ?
ಈ ಪ್ರೀತಿಯ ಹುಟ್ಟು ಇನ್ನೂ ರಸವತ್ತಾಗಿರುತ್ತದೆ. ಯಾರಾದರೊಬ್ಬರಿಗೆ ಮನದಲ್ಲಿ ಪ್ರೀತಿ ಎಂಬ ಮೊಳಕೆ ಹುಟ್ಟಿ, ಚಿಗುರೊಡೆದು, ತನ್ನ ಪ್ರೇಮಿಯ ಹೃದಯದ ಊರಿಗೆ ಬಂದು, ಮನದ ಬೀದಿಗಿಳಿದು, ಅವರನ್ನು ಪ್ರೇಮದ ಬಲೆಗೆ ಸಿಲುಕಿಸಿ, ತಮ್ಮ ಪ್ರೇಮ ನಿವೇದನೆಯನ್ನು ಮಾಡಿ, ಮನದ ಊರಿನಲ್ಲಿ ಒಂದು ಪರ್ಮನೆಂಟ್ ಸೈಟು ತೆಗೆದು ಅದನ್ನು ಖಾಯಂಗೊಳಿಸುವ ಪ್ರಕ್ರಿಯೆಯೇ ಪ್ರೀತಿ !
ಈ ಸಮಾಜದಲ್ಲಿ ಹಲವಾರು ಸುಳ್ಳು ಪೊಳ್ಳು ಪ್ರೇಮ ಕಥೆಗಳನ್ನು ನಡುವೆ ಕೆಲವು ಪರಿಶುದ್ಧ ಪ್ರೀತಿ ಗೆದ್ದು ಬೀಗುವುದುಂಟು.ಕೆಲವೊಂದು ಸಿಹಿಯಾಗಿ ಆರಂಭವಾಗಿ ದುರಂತ ಅಂತ್ಯ ಕಂಡರೆ, ಮತ್ತೆ ಕೆಲವು ಹೋರಾಟದಲ್ಲೇ ಮುಂದುವರೆದು ಸಿಹಿಯಾಗಿ ಕೊನೆಗೂಳ್ಳುತ್ತವೆ. ಇಂತಹ ಪ್ರೇಮಕತೆಗಳು ನಮಗೆಲ್ಲರಿಗೂ ಮಾದರಿಯಾಗುತ್ತವೆ.
ಪ್ರಜ್ಞಾ
ಅಂತಿಮ ಬಿಎ, ಪತ್ರಿಕೋದ್ಯಮ ವಿಭಾಗ
ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು
Read more
[wpas_products keywords=”deal of the day sale today offer all”]