Karnataka news paper

ಇಂದೇಕೆ ಅವಳ ನೆನಪು- ಭಾಗ 36; ಹುಲಿಯ ಬೆನ್ನೇರಿದ ಸುಮಾ..!


ಧಾರಾವಾಹಿ ಲೇಖಕಿ: ಸಹನಾ ಪ್ರಸಾದ್
ಕರೆ ಬಂದಿದ್ದು ಸಂಪತ್ ಅವರಿಂದ. ಅವರಿಗೆ ತಾನು ಋಣಿಯಾಗಿ ಇರಬೇಕು ಆದರೆ ತನ್ನತನ ಬಿಡಬಾರದು ಎಂದು ಅರಿವಿದ್ದರೂ ಸುಮಾ ಅದೇ ದಾರಿಯಲ್ಲಿ ಹೋದದ್ದು ವಿಪರ್ಯಾಸ. ಶ್ಯಾಮ್ ಪ್ರಕರಣದಿಂದ ಅವಳು ಏನೂ ಬುದ್ಧಿ ಕಲಿಯದೆ ತನ್ನ ಕೆಟ್ಟತನವನ್ನು ಮುಂದುವರೆಸಿಕೊಂಡು ಹೋದದ್ದು ಅವಳ ಹಾಗೂ ಶೇಖರನ ಬದುಕಿನ ದುರಂತ.

ಸಂಪತ್ ಅವರ ಸಂಗ, ಗೆಳೆತನ ಸುಮಾಳಿಗೆ ಬಹಳ ದುಬಾರಿಯಾಗಿ ಪರಿವರ್ತನೆಗೊಂಡಿತು. ಅದೇ ಸಮಯಕ್ಕೆ ಸಂಪತ್ ಹೊಸ ಬಿಸಿನೆಸ್ ಶುರು ಮಾಡಿದಾಗ ಅವರ ಸಹಾಯಕ್ಕೆ ಸುಮಾ ನಿಂತಳು. ಅದು ಬಹಳಷ್ಟು ಮಟ್ಟಿಗೆ ಕಾನೂನು ಬಾಹಿರವಾಗಿದೆ ಎಂದು ಅರಿವಾಗಲು ಜಾಸ್ತಿ ಸಮಯ ಬೇಕಾಗಿರಲಿಲ್ಲ. ಅದರೆ ಹುಲಿಯ ಬೆನ್ನೇರಿಯಾಗಿತ್ತು. ಜತೆಗೆ ಹಿಂದೆಂದೂ ಕಾಣದಂತಹ ದುಡ್ಡು ಕೈಲಿ ಓಡಾಡತೊಡಗಿತ್ತು. ಕಾಮ, ಮೋಹ ಅವಳನ್ನು ಕುರುಡು ಮಾಡಿದ್ದರ ಅರಿವಾಗದೆ ಶೇಖರ ತನ್ನಷ್ಟಕ್ಕೆ ತಾನು ಶೂಟಿಂಗ್ ಇತ್ಯಾದಿಯಲ್ಲಿ ಮಗ್ನನಾಗಿದ್ದ. ಇಷ್ಟಕ್ಕೇ ನಿಂತಿದ್ದರೆ ಚೆನ್ನಾಗಿ ಇರುತ್ತಿತ್ತೇನೋ. ಅದರೆ ನಿಧಾನವಾಗಿ ಸಂಪತ್ ಅವರ ಸುಳಿಯಲ್ಲಿ ಸಿಲುಕಿದ ಸುಮಾ ಅದರ ಆಳಕ್ಕೆ ಕುಸಿಯುತ್ತಾ ಹೋದಳು. ಅವರ ವಿದೇಶೀ ವ್ಯವಹಾರಗಳು, ಆದರ ಪ್ರಯುಕ್ತ ನಡೆಯುತ್ತಾ ಇದ್ದ ಕಾರ್ಯಾಚರಣೆಗಳಲ್ಲೂ ಒಳಗೊಳ್ಳತೊಡಗಿದಳು. ದಿನೇ ದಿನೇ ಅವರಿಗೆ ಆಪ್ತವಾಗಿ ಎಲ್ಲರ ಬಾಯಲ್ಲಿ ಸುಮಾ ಮೇಡಂ ಆಗಿ ಪರಿವರ್ತನೆಗೊಂಡಳು.
ಇಂದೇಕೆ ಅವಳ ನೆನಪು-ಭಾಗ 35; ‘ಸುಂದರ ಸ್ತ್ರೀಯರ ಸಹವಾಸದಲ್ಲಿದ್ದರೂ ಅವನು ನನಗೆ ನಿಷ್ಠನಾಗಿ ಇದ್ದಾನೆ’
ಇವೆಲ್ಲದರ ನಡುವೆ ಹೊಸದಾಗಿ ಬಿರುಗಾಳಿಯಂತೆ ನುಗ್ಗಿದಳು ‘ಅವಳು’. ಹೊಚ್ಚ ಹೊಸ ಹುಡುಗಿ, ಎಲ್ಲರ ಕಣ್ಣು ಕುಕ್ಕುವ ಬೆಡಗಿ ಸಂಪತ್ ಅವರ ಮನ ಸೆಳೆಯುವುದು ತಡವಾಗಲಿಲ್ಲ. ಬೇಕಾದಷ್ಟು ಹುಡುಗಿಯರ ಸಹವಾಸವಿದ್ದರೂ ಸಂಪತ್ ಕೆಲವು ವಿಷಯದಲ್ಲಿ ಬಹಳ ಕಟ್ಟುನಿಟ್ಟು. ತಮ್ಮ ಮನೆ, ಮಕ್ಕಳು ಅವರಿಗೆ ಯಾವಾಗಲೂ ಮೊದಲು. ಯಾವುದೇ ಕಾರಣಕ್ಕೂ ಅವರು ಮಕ್ಕಳ ತನಕ ತಮ್ಮ ದುಡ್ಡಿನ ದುರಾಸೆ, ಹೆಣ್ಣಿನ ಹುಚ್ಚು, ಕಾನೂನುಬಾಹಿರ ಚಟುವಟಿಕೆಗಳು ತಲುಪಬಾರದೆಂದು ಹರಸಾಹಸ ಮಾಡುತ್ತಿದ್ದರು. ಸುಮಾಳನ್ನು ಕಂಡರೆ ಅವರಿಗೆ ವಿಶೇಷ ಅಕ್ಕರೆ. ಅವರ ಜೀವನದಲ್ಲಿ ವಿಶೇಷ ಸ್ಥಾನ ಪಡೆದವರಲ್ಲಿ ಅವಳೂ ಒಬ್ಬಳು. ಬೆರಳೆಣಿಕೆಯಷ್ಟು ಜನರು ಮಾತ್ರ ಅವರ ಮನಸ್ಸಿಗೆ ಹತ್ತಿರವಾಗಿ, ನಂಬಿಕೆ ಗಳಿಸಿಕೊಂಡಿದ್ದರು. ಅಂತಹ ಹುಡುಗಿಯ ಬದುಕು ಹಾಳಾಗಲು ಸಂಪತ್ ಕಾರಣಕರ್ತರಾದರು ಎಂಬುದು ವಿಷಾದದ ಸಂಗತಿ.

ಹೊಸ ಬೆಡಗಿ ಕಂಡಾಗಲಿಂದ ಸುಮಾಳ ಆಸೆ ನಿಧಾನಕ್ಕೆ ಕಡಿಮೆಯಾಗತೊಡಗಿತು. ಸೆಟಲ್ಮೆಂಟ್ ಧಾರಾವಾಹಿಯ ಹೊಸ ಎಪಿಸೋಡ್ ಶುರುವಾಗಿದ್ದು, ಅದರಲ್ಲಿ ಅವಳಿಗೆ ಪ್ರಾಮುಖ್ಯ ಪಾತ್ರ ದೊರಕಿದ್ದು , ಶೇಖರನ ಎದುರು ನಟಿಸಲು ಶುರು ಮಾಡಿದ್ದು ಒಂದು ಹೊಸ ಅಧ್ಯಾಯ ಶುರುಮಾಡಿತು. ‘ಅವಳು’ ಸಂಪತ್ ಅವರಿಗೆ ಶೀಘ್ರವೇ ಹತ್ತಿರವಾದಳು. ಧಾರಾವಾಹಿಯ ಜನಪ್ರಿಯತೆ ಬೆಳೆದಂತೆ ಇವರಿಬ್ಬರ ನಂಟೂ ಬೆಳೆಯಿತು. ಇದರ ಮಧ್ಯೆ ಇವರ ವಿದೇಶೀ ವ್ಯವಹಾರಗಳಲ್ಲಿ ಏನೋ ಬಿಕ್ಕಟ್ಟು ಕಂಡು ಬಂದು ಸುಮಾಳ ಜಾಣತನ, ಚಾಕಚಕ್ಯತೆಯಿಂದ ಅದು ಬಗೆಹರಿದಾಗ ಮತ್ತೆ ಸುಮಾ ಹತ್ತಿರವಾದಳು. ಇವೆಲ್ಲದರ ಅರಿವಿಲ್ಲದೆ ಅಮಾಯಕ ಶೇಖರ ತನ್ನ ಪಾಡಿಗೆ ತಾನಿದ್ದ.
ಇಂದೇಕೆ ಅವಳ ನೆನಪು -ಭಾಗ 34; ಆತ್ಮಾವಲೋಕನದ ಬದಲು ದೂಷಣೆ; ಮತ್ತೆ ಎಡವಿದಳೇ ಆಕೆ?!
ಅವನಿಗೆ ಅನುಮಾನ ಶುರುವಾಗಿದ್ದು ವಿದೇಶ ಯಾತ್ರೆಯ ಬಗ್ಗೆ ತನಗಿಂತ ಮೊದಲು ಸುಮಾಳಿಗೆ ಅರಿವಾಗಿದ್ದು. ಯಾವುದೋ ವಸ್ತುಗಳ ಕಳ್ಳಸಾಗಾಣಿಕೆಗಾಗಿ ರಚಿಸಿದ ಪ್ರೋಗ್ರಾಮ್ ಅದು ಎಂದು ಕೆಲವರಿಗೆ ಮಾತ್ರ ಅರಿವಿತ್ತು. ಪ್ರಳಯಾಂತಕ ಬುದ್ಧಿ ಇರುವ ಸಂಪತ್ ಅವರಿಗೆ ಇದೊಂದು ಮಾಮೂಲಿ ಪ್ರಯಾಸವಾಗಿತ್ತು. ಆದರೆ ಶೇಖರ ಒಪ್ಪದೇ ಇದ್ದದ್ದು ಬಹಳ ತ್ರಾಸದಾಯಕವಾಗಿತ್ತು.

ಅವನನ್ನು ಬಗ್ಗಿಸಲು ಅವರಿಗೆ ಬೇಕಾದಷ್ಟು ದಾರಿಗಳಿದ್ದವು. ಸೆಟಲ್ಮೆಂಟ್ ಧಾರಾವಾಹಿ ಶೇಖರನ ಜೀವ ಎಂದು ಚೆನ್ನಾಗಿ ಬಲ್ಲ ಅವರು ಅದನ್ನೇ ದಾಳವಾಗಿ ಬಳಸಿಕೊಂಡರು. ಸುಮಾ ಕೂಡ ಬೆಂಬಲಕ್ಕೆ ನಿಂತಾಗ ಕೆಲಸ ಸುಲಭವಾಗಿತ್ತು.
(ಮುಂದುವರಿಯುವುದು)



Read more

[wpas_products keywords=”deal of the day sale today offer all”]