Karnataka news paper

ಶ್ರೇಯಸ್‌ ಅಯ್ಯರ್‌ಗೆ 12.25 ಕೋಟಿ ರೂ.ಗಳ ಭಾರಿ ಬೆಲೆ ಕೊಟ್ಟ ಕೆಕೆಆರ್‌!


ಬೆಂಗಳೂರು: ಕ್ಯಾಪ್ಟನ್‌ ಹುಡುಕಾಟದಲ್ಲಿದ್ದ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಮಾಜಿ ಕಪ್ತಾನ ಶ್ರೇಯಸ್‌ ಅಯ್ಯರ್‌ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಇಂಡಿಯನ್ ಪ್ರೀಮಿಯರ್‌ ಲೀಗ್‌ ಇತಿಹಾಸದಲ್ಲಿ ಡೆಲ್ಲಿ ತಂಡವನ್ನು ಎರಡು ಬಾರಿ ನಾಕ್‌ಔಟ್‌ ಹಂತಕ್ಕೇರಿಸಿದ ಅನುಭವ ಹೊಂದಿರುವ ಶ್ರೇಯಸ್‌ ಅಯ್ಯರ್‌ ಸಲುವಾಗಿ ಬಿಡ್ಡಿಂಗ್‌ ವಾರ್‌ ನಡೆಸಿದ ಕೆಕೆಆರ್‌ ತಂಡ, ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ಗುಜರಾತ್‌ ಟೈಟಮ್ಸ್‌ ಮತ್ತು ಲಖನೌ ಸೂಪರ್‌ ಜಯಂಟ್ಸ್‌ ತಂಡಗಳನ್ನು ಹಿಂದಿಕ್ಕಿ ಬರೋಬ್ಬರಿ 12.25 ಕೋಟಿ ರೂ. ಬೆಲೆಗೆ ಅಯ್ಯರ್‌ ಸೇವೆಯನ್ನು ತನ್ನದಾಗಿಸಿಕೊಂಡಿತು.

ಮೊದಲ ದಿನದ ಬಿಡ್ಡಿಂಗ್‌ನ ಭೋಜನ ವಿರಾಮಕ್ಕೆ ಶ್ರೇಯಸ್‌ ಅಯ್ಯರ್‌ ಅತಿ ಹೆಚ್ಚು ಬೆಲೆ ಪಡೆದ ಆಟಗಾರ ಎನಿಸಿದ್ದಾರೆ. ಕಳೆದ ಬಾರಿ ಗಾಯದ ಸಮಸ್ಯೆ ಕಾರಣ ಮೊದಲ ಹಂತದ ಪಂದ್ಯಗಳಿಗೆ ಶ್ರೇಯಸ್‌ ಅಲಭ್ಯರಾದ ಕಾರಣ ನಾಯಕತ್ವ ಕಳೆದುಕೊಂಡಿದ್ದರು. ಅವರ ಅನುಪಸ್ಥಿತಿಯಲ್ಲಿ ರಿಷಭ್ ಪಂತ್‌ ಡೆಲ್ಲಿ ತಂಡದ ಕ್ಯಾಪ್ಟನ್‌ ಆದರು. ಈಗ ಕ್ಯಾಪ್ಟನ್ಸಿ ಸಲುವಾಗಿ ಹರಾಜಿನಲ್ಲಿ ಪಾಲ್ಗೊಂಡಿದ್ದ ಶ್ರೇಯಸ್‌ಗೆ ಕೆಕೆಆರ್‌ ತಂಡದ ನಾಯಕತ್ವ ಸಿಗುವುದು ಬಹುತೇಕ ಖಾತ್ರಿಯಾಗಿದೆ.

ಐಪಿಎಲ್‌ ಆಕ್ಷನ್‌ ಬಗ್ಗೆ ತಿಳಿದುಕೊಳ್ಳಬೇಕಾದ ಸಂಗತಿ

ಇನ್ನು ಡೆಲ್ಲಿ ತಂಡ ತನ್ನ ಮಾಜಿ ನಾಯಕನನ್ನು ಮರಳಿ ಖರೀದಿಸಲು ಶತ ಪ್ರಯತ್ನ ಮಾಡಿತು. ಮಧ್ಯಮ ಕ್ರಮಾಂಕದಲ್ಲಿ ಪರಿಣಾಮಕಾರಿ ಬ್ಯಾಟ್ಸ್‌ಮನ್‌ ಆಗಿರುವ ಶ್ರೇಯಸ್‌, ಇತ್ತೀಚೆಗೆ ವೆಸ್ಟ್‌ ಇಂಡೀಸ್‌ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯ 3ನೇ ಪಂದ್ಯದಲ್ಲಿ 80 ರನ್‌ ಸಿಡಿಸಿ ಪಂದ್ಯಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಿದ್ದರು. ಕ್ಯಾಪ್ಟನ್‌ ಜೊತೆಗೆ, ಉತ್ತಮ ಬ್ಯಾಟ್ಸ್‌ಮನ್‌ ಹಾಗೂ ಮಿಂಚಿನ ಫೀಲ್ಡರ್‌ ಕೂಡ ಆಗಿದ್ದಾರೆ.

ಡೆಲ್ಲಿ ತಂಡ ಶಿಖರ್‌ ಧವನ್ ಮತ್ತು ಆರ್‌ ಅಶ್ವಿನ್‌ ಅವರನ್ನೂ ಹರಾಜಿಗೆ ಬಿಟ್ಟುಕೊಟ್ಟಿತ್ತು. ದಿಲ್ಲಿ ಪರ ಅಬ್ಬರಿಸಿದ್ದ ಶಿಖರ್‌ ಧವನ್‌ (8.25 ಕೋಟಿ ರೂ.) ಸೇವೆಯನ್ನು ಪಂಜಾಬ್‌ ಕಿಂಗ್ಸ್‌ ತಂಡ ತನ್ನದಾಗಿಸಿಕೊಂಡರೆ, ರಾಜಸ್ಥಾನ್‌ ರಾಯಲ್ಸ್‌ ತಂಡ ಮಾಂತ್ರಿಕ ಸ್ಪಿನ್ನರ್‌ ಆರ್‌ ಅಶ್ವಿನ್‌ (5 ಕೋಟಿ ರೂ.) ಅವರನ್ನು ಖರೀದಿಸಿದೆ.

ದುಬಾರಿ ಬೆಲೆಯ ಬೌಲರ್ಸ್‌ ಹೆಸರಿಸಿದ ಚೋಪ್ರಾ

ಐಪಿಎಲ್‌ 2022 ಟೂರ್ನಿ ಮಾರ್ಚ್‌ 27ರಂದು ಆರಂಭವಾಗಿ ಮೇ ಎರಡನೇ ವಾರದಲ್ಲಿ ಅಂತ್ಯಗೊಳ್ಳುವ ಸಾಧ್ಯತೆ ಇದೆ. ಲೀಗ್‌ ಹಂತದ ಪಂದ್ಯಗಳನ್ನು ಮಹಾರಾಷ್ಟ್ರದಲ್ಲಿ ಮತ್ತು ನಾಕ್‌ಔಟ್‌ ಹಂತದ ಪಂದ್ಯಗಳನ್ನು ಅಹ್ಮದಾಬಾದ್‌ನಲ್ಲಿ ಆಯೋಜಿಸಲು ಬಿಸಿಸಿಐ ಯೋಜನೆ ರೂಪಿಸಿದೆ.

ಕೆಕೆಆರ್‌ಗೆ ಮರಳಿದ ಪ್ಯಾಟ್‌ ಕಮಿನ್ಸ್‌: ಆಸ್ಟ್ರೇಲಿಯಾ ತಂಡದ ವೇಗಿ ಪ್ಯಾಟ್‌ ಕಮಿನ್ಸ್‌ ಅವರು ಮತ್ತೆ ಕೋಲ್ಕತಾ ನೈಟ್‌ ರೈಡರ್ಸ್‌ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಕಳೆದ ಆವೃತ್ತಿಯಲ್ಲಿ ಕೆಕೆಆರ್‌ ಪರ ಆಡಿದ್ದ ಕಮಿನ್ಸ್‌ ಈ ಬಾರಿಯೂ ಅವರನ್ನು ಕೋಲ್ಕತಾ ಫ್ರಾಂಚೈಸಿ ಹರಾಜಿನಲ್ಲಿ 7.25 ಕೋಟಿ ರೂ.ಗಳಿಗೆ ಖರೀದಿಸಿದೆ.



Read more

[wpas_products keywords=”deal of the day gym”]