ಪಕ್ಷದಲ್ಲಿ ದೀದಿ ನಂತರದ ಸ್ಥಾನವನ್ನು ಸದ್ಯ ಅಭಿಷೇಕ್ ಬ್ಯಾನರ್ಜಿ ಮುನ್ನಡೆಸುತ್ತಿದ್ದಾರೆ. ಶನಿವಾರದ ಸಭೆಯು ಮಮತಾ ಬ್ಯಾನರ್ಜಿ ಮತ್ತು ಅವರ ಮಹತ್ವಾಕಾಂಕ್ಷಿ ಸೋದರಳಿಯನ ನಡುವಿನ ಹೆಚ್ಚುತ್ತಿರುವ ಘರ್ಷಣೆಯನ್ನು ಪ್ರತಿಬಿಂಬಿಸುತ್ತಿದೆ ಎಂದು ಹಲವರು ಹೇಳಿದ್ದಾರೆ.
ಆದರೆ ಇದರಿಂದ ನಿಜವಾಗಿಯೂ ಸಮಸ್ಯೆಗೆ ಸಿಲುಕಿರುವುದು ಪ್ರಶಾಂತ್ ಕಿಶೋರ್ ಅವರ ಐ-ಪ್ಯಾಕ್. ಸಂಸ್ಥೆಯು ಪಶ್ಚಿಮ ಬಂಗಾಳ ಚುನಾವಣೆಯ ಬಳಿಕ ತೃಣಮೂಲ ಕಾಂಗ್ರೆಸ್ ಜತೆ ಕೆಲಸ ಮಾಡುತ್ತಿದ್ದು, ಅಭಿಷೇಕ್ ಬ್ಯಾನರ್ಜಿ ಪಕ್ಷ ಮತ್ತು ಈ ರಾಜಕೀಯ ಚತುರರ ನಡುವಿನ ಪ್ರಮುಖ ಸಂಪರ್ಕ ಸೇತುವಾಗಿದ್ದಾರೆ.
ಶುಕ್ರವಾರ ಟಿಎಂಸಿ ನಾಯಕಿ ಚಂದ್ರಿಮಾ ಭಟ್ಟಾಚಾರ್ಯ ಸಾರ್ವಜನಿಕವಾಗಿ ಐ-ಪ್ಯಾಕ್ ವಿರುದ್ಧ ಕಿಡಿಕಾರಿದ್ದರು. ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪ್ರಶಾಂತ್ ಕಿಶೋರ್ ಅವರ ತಂಡವು ದುರುಪಯೋಗಪಡಿಸಿಕೊಂಡಿದೆ ಎಂದು ಅವರು ಆರೋಪಿಸಿದ್ದರು.
“ಚುನಾವಣೆಗೂ ಮೊದಲು ಐ-ಪ್ಯಾಕ್ ನನ್ನ ಹೆಸರಿನಲ್ಲಿ ಟ್ವಿಟರ್ ಖಾತೆಯನ್ನು ತೆರೆದಿತ್ತು. ಇಂದು ಅದು ‘ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ’ ಬಗ್ಗೆ ನನಗೆ ಗೊತ್ತಿಲ್ಲದೇ ಪೋಸ್ಟ್ ಮಾಡಿದೆ. ನಾನು ಇದರ ವಿರುದ್ಧ ತೀವ್ರವಾಗಿ ಪ್ರತಿಭಟಿಸುತ್ತೇನೆ,” ಎಂದು ಅವರು ಹೇಳಿದ್ದರು.
ಇದಕ್ಕೆ ತಕ್ಷಣ ತಿರುಗೇಟು ನೀಡಿದ್ದ ಐ-ಪ್ಯಾಕ್, “ಐ-ಪ್ಯಾಕ್ ಟಿಎಂಸಿಯ ಅಧಿಕೃತ ಖಾತೆ ಹಾಗೂ ಅದರ ಯಾವುದೇ ನಾಯಕರ ಡಿಜಿಟಲ್ ಖಾತೆಗಳನ್ನು ನಿರ್ವಹಿಸುವುದಿಲ್ಲ. ಆ ರೀತಿ ಹೇಳುವ ಯಾವುದೇ ನಾಯಕರಿಗೆ ಈ ಬಗ್ಗೆ ಮಾಹಿತಿ ಇಲ್ಲ ಅಥವಾ ಅವರು ಸುಳ್ಳು ಹೇಳುತ್ತಿದ್ದಾರೆ ಎಂದರ್ಥ. ತೃಣಮೂಲ ಕಾಂಗ್ರೆಸ್ ತಮ್ಮ ಡಿಜಿಟಲ್ ಖಾತೆಗಳನ್ನು ಮತ್ತು ಅವರ ನಾಯಕರ ಖಾತೆಗಳನ್ನು ಹೇಗೆ ನಿರ್ವಹಿಸಲಾಗುತ್ತಿದೆ, ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬುದನ್ನು ನೋಡಬೇಕು,” ಎಂದು ಹೇಳಿದೆ.
ಸೋಮವಾರ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಪ್ರಚಾರಕ್ಕೆ ಸಹಾಯ ಮಾಡಲು ಉತ್ತರ ಪ್ರದೇಶಕ್ಕೆ ತೆರಳುತ್ತಿದ್ದಾಗ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ್ದ ಮಮತಾ ಬ್ಯಾನರ್ಜಿ ಈತಮ್ಮ ಹಾಗೂ ಸೋದರಳಿಯನ ನಡುವಿನ ತಿಕ್ಕಾಟದ ಬಗ್ಗೆ ಸಣ್ಣ ಸುಳಿವು ಬಿಟ್ಟುಕೊಟ್ಟಿದ್ದರು.
ನೀವು ಗೋವಾಕ್ಕೆ ಪ್ರಚಾರಕ್ಕೆ ಹೋಗುತ್ತೀರಾ ಎಂದು ಕೇಳಿದಾಗ, “ಯಾರೋ ಪ್ರಚಾರ ಮಾಡುತ್ತಿದ್ದಾರೆ, ಹಾಗಾಗಿ ನಾನು ಹೋಗುತ್ತಿಲ್ಲ. ನಾನು ಇತರ ಸ್ಥಳಗಳಿಗೆ ಹೋಗುತ್ತಿದ್ದೇನೆ … ಹೆಚ್ಚಿನ ಆಸಕ್ತಿಯಿಂದ,” ಎಂದು ಹೇಳುವ ಮೂಲಕ ಅಭಿಷೇಕ್ ಬ್ಯಾನರ್ಜಿಯನ್ನು ಯಾರೋ ಎಂದು ಸಂಬೋಧಿಸಿದ್ದರು.
ಆದಾಗ್ಯೂ, ಐ-ಪ್ಯಾಕ್‌ಗೆ ಹತ್ತಿರವಿರುವ ಮೂಲಗಳು ಮುಖ್ಯಮಂತ್ರಿಯೊಂದಿಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಹೇಳಿವೆ.
Read more
[wpas_products keywords=”deal of the day sale today offer all”]