Karnataka news paper

ಹಿಜಾಬ್‌ ಕೇಸರಿ ಸಂಘರ್ಷ: ಇಕ್ಕಟ್ಟಿನಲ್ಲಿ ಕಾಂಗ್ರೆಸ್‌, ಮುಖಂಡರಲ್ಲಿ ಭಿನ್ನ ನಿಲುವು!


ಬೆಂಗಳೂರು: ರಾಜ್ಯಾದ್ಯಂತ ಹಿಜಾಬ್‌ ಕೇಸರಿ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಬಿಜೆಪಿ ಶಾಲೆ ಕಾಲೇಜುಗಳಲ್ಲಿ ಹಿಜಾಬ್ ವಿರುದ್ಧ ನಿಲುವು ತೆಗೆದುಕೊಂಡಿದೆ. ಮತ್ತೊಂದು ಕಡೆಯಲ್ಲಿ ಎಸ್‌ಡಿಪಿಐ ಹಿಜಾಬ್‌ ಪರವಾಗಿ ನಿಂತಿದೆ. ಈ ನಡುವೆ ಕಾಂಗ್ರೆಸ್‌ ಎರಡು ಕಡೆಗಳಲ್ಲಿ ಬ್ಯಾಲೆನ್ಸ್ ಮಾಡಲು ಹೋಗಿ ಇಕ್ಕಟ್ಟಿಗೆ ನಿಲುಕಿಕೊಂಡಿದೆ.

ಹಿಜಾಬ್‌ ಕುರಿತಾಗಿ ಕಾಂಗ್ರೆಸ್‌ ಮುಖಂಡರಲ್ಲಿ ಭಿನ್ನ ನಿಲುವುಗಳಿವೆ. ಬಿಜೆಪಿಯ ವಾದವನ್ನು ಕಾಂಗ್ರೆಸ್ ಖಂಡಿಸುತ್ತಿದ್ದರೂ ಪೂರ್ಣವಾಗಿ ಹಿಜಾಬ್‌ ಪರವಾಗಿ ಕಾಂಗ್ರೆಸ್ ಸಮರ್ಥನೆಗೆ ನಿಲ್ಲಲು ಹಿಂದೇಟು ಹಾಕುತ್ತಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಿಜಾಬ್‌ ಪರವಾಗಿ ಗಟ್ಟಿಯಾಗಿ ಮಾತನಾಡುತ್ತಿದ್ದಾರೆ. ಆದರೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತ್ರ ಅಂತರ ಕಾಯ್ದುಕೊಂಡೇ ಬಿಜೆಪಿಯ ನಿಲುವನ್ನು ಟೀಕೆ ಮಾಡುತ್ತಿದ್ದಾರೆ.

“ಸದ್ಯದ ಪರಿಸ್ಥಿತಿ ಕಾಂಗ್ರೆಸ್‌ಗೆ ಇಟ್ಟಕ್ಕು ತಂದೊಡ್ಡಿದೆ ನಿಜ. ಹಿಜಾಬ್‌ ಕೇಸರಿ ಸಂಘರ್ಷ ಬಿಜೆಪಿ ಪಾಲಿಗೆ ರಾಜಕೀಯವಾಗಿ ಲಾಭದಾಯಕವಾಗಿದೆ. ಮುಂಬರುವ ಚುನಾವಣಾ ದೃಷ್ಟಿಯಿಂದ ಬಿಜೆಪಿ ನಾಯಕರು ಹಿಜಾಬ್‌ ವಿವಾದವನ್ನು ಜೀವಂತವಾಗಿ ಇಡಲು ಬಯಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಎಚ್ಚರಿಕೆಯ ಹೆಜ್ಜೆಯನ್ನು ಈ ವಿಚಾರದಲ್ಲಿ ಇಡಬೇಕಿದೆ” ಎನ್ನುತ್ತಾರೆ ಕಾಂಗ್ರೆಸ್‌ ಮುಖಂಡರೊಬ್ಬರು.

ಹಿಜಾಬ್‌ ವಿವಾದ: ಕಾಲೇಜುಗಳಿಗೆ ಫೆಬ್ರವರಿ 16ರವರೆಗೆ ರಜೆ ವಿಸ್ತರಣೆ

ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ, ವಿಧಾನಪರಿಷತ್‌ ಪ್ರತಿಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಹೊರತಾಗಿ ಇತರ ನಾಯಕರು ಹಿಜಾಬ್‌ ವಿಚಾರವಾಗಿ ತೀಕ್ಷ್ಣ ಪ್ರತಿಕ್ರಿಯೆ ನೀಡಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪರೋಕ್ಷವಾಗಿ ಹಾಗೂ ಅಳೆದು ತೂಗಿ ಈ ವಿಚಾರವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕರಾವಳಿ ಭಾಗದ ಕಾಂಗ್ರೆಸ್ ಮುಖಂಡರುಗಳೇ ಆರಂಭದಲ್ಲಿ ಡಿಕೆಶಿಗೆ ಈ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆಯನ್ನು ಇಡುವಂತೆ ಮನವಿ ಮಾಡಿದ್ದರು ಎಂಬುವುದು ತಿಳಿದುಬಂದಿರುವ ಮಾಹಿತಿ.

ಈ ನಡುವೆ ಹಿಜಾಬ್‌ ವಿಚಾರವಾಗಿ ಕಾಂಗ್ರೆಸ್ ಪಕ್ಷದ ಬಹುತೇಕ ಮುಖಂಡರ ನಿಲುವು ಮುಸ್ಲಿಂ ಸಮುದಾಯದಲ್ಲೂ ಚರ್ಚೆಗೆ ಗ್ರಾಸವಾಗುತ್ತಿದೆ. ಎಸ್‌ಡಿಪಿಐ ಕಾರ್ಯಕರ್ತರು ಈ ಕಾಂಗ್ರೆಸ್ ನಿಲುವನ್ನು ಮುಸ್ಲಿಂ ಸಮುದಾಯದೊಳಗಡೆ ಚರ್ಚೆಗೆ ಹರಿಯಬಿಟ್ಟಿದ್ದಾರೆ. ಕರಾವಳಿ ಭಾಗದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಎಸ್‌ಡಿಪಿಐ ಇತ್ತೀಚಿನ ದಿನಗಳಲ್ಲಿ ಸ್ಥಾನ ಪಡೆದುಕೊಳ್ಳುತ್ತಿದ್ದು, ಇದೀಗ ತಲೆದೋರಿರುವ ಹಿಜಾಬ್‌ ವಿವಾದವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನಿಲುವನ್ನು ಪ್ರಶ್ನೆ ಮಾಡಲಾಗುತ್ತಿದೆ. ಪರಿಣಾಮ ಕಾಂಗ್ರೆಸ್ ಸ್ಥಿತಿ ಅಡಕತ್ತರಿಯಲ್ಲಿ ಎಂಬಂತ್ತಾಗಿದೆ.

ಈ ನಡುವೆ ಹಿಜಾಬ್‌ ಪರವಾಗಿ ಯೂತ್ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಬಿವಿ ಶ್ರೀನಿವಾಸ್ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಬಿಜೆಪಿ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಲು ಶುರುಮಾಡಿಕೊಂಡಿದೆ. ಹಿಜಾಬ್‌ ಹಾಗೂ ಕೇಸರಿ ವಿವಾದದ ಹಿಂದೆ ಕಾಂಗ್ರೆಸ್ ಕೈವಾಡ ಇದೆ ಎಂಬ ಹೇಳಿಕೆಯನ್ನು ಬಿಜೆಪಿ ಮುಖಂಡರು ನೀಡಲು ಆರಂಭಿಸಿದ್ದಾರೆ.

ಸೋಮವಾರದಿಂದ ವಿಧಾನಮಂಡಲ ಅಧಿವೇಶನ ಕೂಡಾ ಆರಂಭಗೊಳ್ಳಲಿದ್ದು ಅಲ್ಲೂ ಹಿಜಾಬ್‌ ವಿಚಾರ ಚರ್ಚೆಗೆ ಬರುವ ಸಾಧ್ಯತೆ ಇದೆ. ಆದರೆ ಕಾಂಗ್ರೆಸ್ ಯಾವ ನಿಲುವನ್ನು ತೆಗೆದುಕೊಳ್ಳಬೇಕು ಹಾಗೂ ಯಾವ ವಿಚಾರವನ್ನು ಪ್ರಸ್ತಾಪ ಮಾಡಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಬೇಕು ಎಂಬ ನಿಟ್ಟಿನಲ್ಲಿ ಪಕ್ಷದಲ್ಲಿ ಚರ್ಚೆ ನಡೆಯುತ್ತಿದೆ. ಸೋಮವಾರ ಸಂಜೆ ನಗರದ ಖಾಸಗಿ ಹೋಟೆಲ್‌ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯೂ ನಡೆಯಲಿದೆ. ಈ ಸಭೆಯಲ್ಲಿ ಪಕ್ಷದ ನಿಲುವು ಏನಿರಬೇಕು ಎಂಬ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಇನ್ನೇನು ವಿಧಾನಸಭೆ ಚುನಾವಣೆಗೆ ಒಂದು ವರ್ಷ ನಾಲ್ಕು ತಿಂಗಳು ಬಾಕಿ ಉಳಿದಿದೆ. ಇದೇ ಸಂದರ್ಭದಲ್ಲಿ ರಾಜ್ಯಾದ್ಯಂತ ಹಿಜಾಬ್‌ ದೊಡ್ಡ ಮಟ್ಟದಲ್ಲಿ ಸದ್ದು ಗದ್ದಲಕ್ಕೆ ಕಾರಣವಾಗಿದೆ. ಈ ವಿವಾದವನ್ನು ಮುಂದಿಟ್ಟುಕೊಂಡು ರಾಜಕೀಯ ಪಕ್ಷಗಳು ಲಾಭ ನಷ್ಟದ ಲೆಕ್ಕಾಚಾರದಲ್ಲಿ ತೊಡಗಿಕೊಂಡಿರುವುದು ವಿಪರ್ಯಾಸ.



Read more

[wpas_products keywords=”deal of the day sale today offer all”]