Karnataka news paper

ಶಾಲೆ ಸುತ್ತಮುತ್ತ ಕಟ್ಟೆಚ್ಚರ: ಸಿ.ಎಂ ಬಸವರಾಜ ಬೊಮ್ಮಾಯಿ


ಬೆಂಗಳೂರು: ಸೋಮವಾರ ಪ್ರೌಢಶಾಲೆಯ (9 ಮತ್ತು 10) ತರಗತಿಗಳು ಆರಂಭವಾಗುವುದರಿಂದ, ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.

ಸೋಮವಾರದಿಂದ ಪ್ರೌಢಶಾಲೆ ಆರಂಭವಾಗಲಿರುವ ಬೆನ್ನಲ್ಲೇ, ಗೃಹ ಸಚಿವ ಆರಗ ಜ್ಞಾನೇಂದ್ರ, ಉನ್ನತ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥನಾರಾಯಣ, ಪ‍್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹಾಗೂ ಅಧಿಕಾರಿಗಳ ಜತೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಶುಕ್ರವಾರ ಸಂಜೆ ಸಭೆ ನಡೆಸಿದರು. 

ಸಭೆಯ ಬಳಿಕ ಮಾತನಾಡಿದ ಸಚಿವ ಜ್ಞಾನೇಂದ್ರ, ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ವಿವರಿಸಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ತೊಂದರೆ ಆಗದಂತೆ ಮತ್ತು ಹೈಕೋರ್ಟ್‌ ಮಧ್ಯಂತರ ಆದೇಶಕ್ಕೆ ಅನುಗುಣವಾಗಿಯೇ ತರಗತಿಗಳನ್ನು ನಡೆಸಲಾಗುವುದು ಎಂದರು.

ಸಿ.ಎಂ. ಸೂಚನೆಗಳು:

l ಸೂಕ್ಷ್ಮ ಜಿಲ್ಲೆಗಳಲ್ಲಿ ಪ್ರಮುಖ ಶಾಲೆಗಳಿಗೆ ಜಿಲ್ಲಾಧಿಕಾರಿಗಳು ಮತ್ತು ಎಸ್ಪಿಗಳು ಭೇಟಿ ನೀಡಬೇಕು ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಅಹಿತಕರ ಘಟನೆಗಳನ್ನು ನಡೆಯದಂತೆ ಎಚ್ಚರವಹಿಸಬೇಕು.

l ಶಾಲಾ ಪ್ರಾಂಶುಪಾಲರು, ಶಿಕ್ಷಕರು, ಪೋಷಕರು, ಆಡಳಿತ ಮಂಡಳಿಯೊಂದಿಗೆ ಜಿಲ್ಲಾಧಿಕಾರಿಗಳು, ಎಸ್ಪಿ ಮತ್ತು ಡಿಡಿಪಿಐಗಳು ನಿರಂತರ ಸಂಪರ್ಕದಲ್ಲಿರಬೇಕು. ಜಿಲ್ಲೆಯ ಹಿರಿಯರು, ಪ್ರಮುಖರು, ಜನಪ್ರತಿನಿಧಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು.

l ಸೂಕ್ಷ್ಮ ಪ್ರದೇಶಗಳಲ್ಲಿ  ಶಾಂತಿ ಸಭೆಗಳನ್ನು ನಡೆಸಬೇಕು. ಎಲ್ಲ ರಾಜಕೀಯ ಪಕ್ಷಗಳ ಮತ್ತು ಧಾರ್ಮಿಕ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು.

l ಅಧಿಕಾರಿಗಳು ಯಾವುದೇ ಒತ್ತಡಗಳಿಗೆ ಮಣಿಯಬಾರದು. ಸಣ್ಣ ಘಟನೆಯನ್ನೂ ಅತ್ಯಂತ
ಗಂಭೀರವಾಗಿ ಪರಿಗಣಿಸಬೇಕು. ಹೊರಗಿನ ಪ್ರಚೋದನೆಗೆ ಒಳಗಾಗದಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಪ್ರದೇಶಗಳನ್ನು ಹಂಚಿಕೆ ಮಾಡಿಕೊಂಡು ನಿಗಾ ವಹಿಸಬೇಕು. ಸಾಮಾಜಿಕ ಮಾಧ್ಯಮಗಳ ಮೂಲಕ ವದಂತಿ ಮತ್ತು ಪ್ರಚೋದನಕಾರಿ ಸಂದೇಶಗಳು ಹರಡದಂತೆ ನಿಗಾವಹಿಸಬೇಕು.

l ಪ್ರತಿಯೊಬ್ಬರೂ ಉಚ್ಛ ನ್ಯಾಯಾಲಯದ ಆದೇಶವನ್ನು ಪಾಲಿಸಬೇಕು. ಯಾವುದೇ ಕಾರಣಕ್ಕೂ ಒಂದು ಅಹಿತಕರ ಘಟನೆ
ಜರುಗದಂತೆ ಎಚ್ಚರಿಕೆ ವಹಿಸಬೇಕು. ಸಮಾಜಘಾತುಕ ಶಕ್ತಿಗಳನ್ನು ಗುರುತಿಸಿ ಅವರ ಮೇಲೆ ನಿಗಾವಹಿಸಬೇಕು. ಮೇಲಿನವರ ಆದೇಶಕ್ಕೆ ಕಾಯದೇ ಸಂದರ್ಭಕ್ಕೆ ತಕ್ಕಂತೆ ಕ್ರಮ ತೆಗೆದುಕೊಳ್ಳಬೇಕು.

 

‘ಪಿಎಫ್‌ಐ ಕಾರ್ಯಕರ್ತರ ಮಕ್ಕಳು’

ಮಂಡ್ಯದ ವಿದ್ಯಾರ್ಥಿನಿಯೂ ಸೇರಿದಂತೆ ಹಿಜಾಬ್‌ ವಿವಾದದಲ್ಲಿ ಭಾಗಿಯಾದ ಹಲವು ವಿದ್ಯಾರ್ಥಿನಿಯರ ತಂದೆಯವರು ಪಿಎಫ್‌ಐ ಸಂಘಟನೆಯ ಕಾರ್ಯಕರ್ತರು ಎಂಬ ಮಾಹಿತಿ ಇದೆ ಎಂದು ಸಚಿವ ಆರಗ ಜ್ಞಾನೇಂದ್ರ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಮಂಡ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸುತ್ತಿದ್ದೇವೆ. ಇವೆಲ್ಲ ವಿಚಾರಗಳ ಬಗ್ಗೆ ತನಿಖೆ ನಡೆಯುತ್ತಾ ಇದೆ. ಯಾರೆಲ್ಲ ಪ್ರಚೋದನೆ ನೀಡಿದ್ದಾರೆ ಎಂಬುದರ ಮಾಹಿತಿಯನ್ನೂ ಕಲೆ ಹಾಕಲಾಗುತ್ತದೆ ಎಂದರು.

 



Read more from source

[wpas_products keywords=”deal of the day sale today kitchen”]