Source : Online Desk
ಬೆಳಗಾವಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೇವಲ 50 ಮತ ಗಳಿಸಿರುವ ವಿಚಾರ ಸಚಿವರಾದ ಡಾ.ಕೆ. ಸುಧಾಕರ್ ಮತ್ತು ಕೆ.ಸಿ. ನಾರಾಯಣ ಗೌಡ ನಡುವೆ ಜಟಾಪಟಿಗೆ ಕಾರಣವಾಯಿತು.
ಸುವರ್ಣ ವಿಧಾನಸೌಧದ ಮೊಗಸಾಲೆಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಆರೋಗ್ಯ ಸಚಿವ ಸುಧಾಕರ್, ‘ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿಗೆ ಕಡಿಮೆ ಮತ ಬಂದಿದೆ. ಇದು ನಿಜಕ್ಕೂ ದುರದೃಷ್ಟಕರ. ಈ ಕುರಿತು ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ನಡೆಸುತ್ತೇವೆ’ ಎಂದರು.
ಆರೋಗ್ಯ ಸಚಿವರ ಹೇಳಿಕೆಗೆ ತಕ್ಷಣವೇ ಪ್ರತಿಕ್ರಿಯೆ ನೀಡಿದ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ, ‘ಸುಧಾಕರ್ ಏನು ನಮ್ಮ ನಾಯಕರಾ? ಅವರು ಅವರ ಕ್ಷೇತ್ರದ ಬಗ್ಗೆ ಮಾತನಾಡಲಿ. ನಾವು ನಮ್ಮ ಕ್ಷೇತ್ರದ ಬಗ್ಗೆ ಹೇಳುತ್ತೇವೆ. ಮಂಡ್ಯದ ಬಗ್ಗೆ ಅವರಿಗೆ ಏನು ಗೊತ್ತು? ನನಗೆ ಗೊತ್ತಿದೆ, ನಾನು ಮಾತನಾಡುತ್ತೇನೆ’ ಎಂದು ಹೇಳಿದರು.