Karnataka news paper

ಬಿಜೆಪಿ ರಾಜ್ಯಾಧ್ಯಕ್ಷರ ತವರಲ್ಲಿ ಶಾಲೆಯಲ್ಲೇ ನಮಾಜ್ ಮಾಡಿದ ಮುಸ್ಲಿಂ ವಿದ್ಯಾರ್ಥಿಗಳು..!


ದಕ್ಷಿಣ ಕನ್ನಡ: ದೇಶದಲ್ಲಿ ಹಿಜಾಬ್ ವಿವಾದ ಹೊತ್ತಿ ಉರಿಯುತ್ತಿರುವ ಬೆನ್ನಲ್ಲೇ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಊರಾದ ಪಾಲ್ತಾಡಿ ಗ್ರಾಮದ ಶಾಲೆಯೊಂದರಲ್ಲಿ ಪ್ರಾಥಮಿಕ ಶಾಲಾ ಮುಸ್ಲಿಂ ವಿದ್ಯಾರ್ಥಿಗಳು ನಮಾಝ್ ಮಾಡಿರುವ ವಿಡಿಯೋ ಒಂದು ಈಗ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. ಈ ಮೂಲಕ ಕಡಬ ತಾಲೂಕಿನಲ್ಲಿ ಪ್ರಥಮ ಬಾರಿಗೆ ಶಾಲೆಯಲ್ಲಿ ನಮಾಝ್ ವಿವಾದದ ಕಿಡಿ ಹತ್ತಿಕೊಂಡಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಅವರ ಹುಟ್ಟೂರು ಪಾಲ್ತಾಡಿ ಗ್ರಾಮದ ಅಂಕತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಶಾಲಾ ಕೊಠಡಿಯ ಹಾಲ್‌ನಲ್ಲಿ ನಮಾಝ್ ಮಾಡಿದ್ದಾರೆ ಎನ್ನುವ ವಿಡಿಯೋ ವಿವಾದಕ್ಕೆ ಮೂಲವಾಗಿದೆ.

ಈ ಶಾಲೆಯಲ್ಲಿನ ಮಕ್ಕಳ ಸಂಖ್ಯೆ ಕೇವಲ ನಲವತ್ತರ ಆಸುಪಾಸು. ಇದರಲ್ಲಿ ಅರ್ಧದಷ್ಟು ಮುಸ್ಲಿಂ ವಿದ್ಯಾರ್ಥಿಗಳು. ಇವರೆಲ್ಲರಿಗೆ ಸರಕಾರ ಕೊಡ ಮಾಡಿದ ಶಿಕ್ಷಕರು ಒಬ್ಬರೇ. ಜೊತೆಗೆ ಇಬ್ಬರು ಗೌರವ ಶಿಕ್ಷಕರು ಇದ್ದಾರೆ. ಅಪ್ಪಟ ಗ್ರಾಮೀಣ ಪ್ರದೇಶದ ಯಾವುದೇ ಜಾತಿ, ಮತ, ಪಂಥದ ಗೊಡವೆ ಇಲ್ಲದೆ ವಿದ್ಯರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಮಸೀದಿಯೊಳಗೆ ಮುಸ್ಲಿಂ ಮಹಿಳೆಯರಿಗೆ ಪ್ರವೇಶ ಕೊಡಲಿ: ಸುನಿಲ್ ಕುಮಾರ್
ಇತ್ತೀಚೆಗೆ ಇದೇ ಶಾಲೆಯಲ್ಲಿ ನೂತನ ಎಸ್‌ಡಿಎಂಸಿ ರಚನೆಯಾಗಿತ್ತು. ಬಳಿಕ ನಡೆದ ಸಭೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ಪ್ರತಿ ಶುಕ್ರವಾರ ನಮಾಝ್ ಮಾಡಲು ಮಸೀದಿಗೆ ಕಳುಹಿಸಿ ಕೊಡಬೇಕು ಎನ್ನುವ ಪ್ರಸ್ತಾಪ ಬಂದಿತ್ತು. ಇದಕ್ಕೆ ಒಪ್ಪದ ಶಾಲಾ ಶಿಕ್ಷಕರು ನಮಗೆ ಶಾಲೆಯಲ್ಲಿ ಕೆಲವು ನಿಯಮಗಳಿವೆ. ವಿದ್ಯಾರ್ಥಿಗಳು ಶಾಲೆಯಿಂದ ಹೊರಗೆ ಹೋಗಬೇಕಾದರೆ ಪೋಷಕರು ಶಾಲೆಗೆ ಬಂದು ಸರಿಯಾದ ಕಾರಣ ಹೇಳಿ ಪತ್ರಕ್ಕೆ ಸಹಿ ಹಾಕಿ ಮಕ್ಕಳನ್ನು ಕರೆದುಕೊಂಡು ಹೋಗಿ ಮತ್ತೆ ಬರಬೇಕು. ಆದ್ದರಿಂದ ಅವರಷ್ಟಕ್ಕೆ ಕಳುಹಿಸಿ ಕೊಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ನುಡಿದಿದ್ದರು.

ಬಳಿಕ ನಡೆದ ಬೆಳವಣಿಗೆಯಲ್ಲಿ ಕಳೆದ ಒಂದು ತಿಂಗಳಿಂದ ಪ್ರತಿ ಶುಕ್ರವಾರ ಕೆಲವು ಮುಸ್ಲಿಂ ವಿದ್ಯಾರ್ಥಿಗಳು ಶಾಲಾ ಕೊಠಡಿಯ ಒಳಗೆ ಕದ್ದು ಮುಚ್ಚಿ ನಮಾಝ್ ಮಾಡುತ್ತಿದ್ದರು ಎನ್ನಲಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಕೆಲವರು ಆ ಸಮಯಕ್ಕೆ ಶಾಲೆಗೆ ಹೋಗಿದ್ದರು. ಆಗ ವಿದ್ಯಾರ್ಥಿಗಳಿ ಚದುರಿ ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ. ಶುಕ್ರವಾರ ಕೆಲವರು ನಮಾಝ್ ವಿಚಾರವನ್ನು ಪತ್ತೆ ಹಚ್ಚಲು ಹೋಗಿ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ, ಸಂಬಂಧಪಟ್ಟ ಇಲಾಖೆಯವರು ಶಾಲೆಗೆ ತೆರಳಿದ್ದಾರೆ. ಶನಿವಾರ ಪೋಷಕರ ಹಾಗೂ ಅಧಿಕಾರಿಗಳ ತುರ್ತು ಸಭೆಯನ್ನು ಆಯೋಜಿಸಿದ್ದಾರೆ ಎನ್ನಲಾಗಿದೆ.

ಭಾರತವನ್ನು ತಾಲಿಬಾನ್‌, ಅಫ್ಘಾನಿಸ್ತಾನ ಮಾಡಲು ಸಾಧ್ಯವಿಲ್ಲ, ಹಿಜಾಬ್‌ ಟೂಲ್‌ಕಿಟ್‌ನ ಭಾಗ: ಸುನಿಲ್‌ ಕುಮಾರ್
ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ದಕ್ಷಿಣ ಕನ್ನಡ ಜಿಲ್ಲೆ ಸವಣೂರು ಗ್ರಾ. ಪಂ. ವಾರ್ಡ್ ಸದಸ್ಯ ಸತೀಶ್ ಮೂಲೆ ಅಂಗಡಿಮೂಲೆ ಅವರು, ‘ಶಾಲೆಯಲ್ಲಿ ನಮಾಝ್‌ನಂತಹ ಕಾರ್ಯಗಳಿಗೆ ಅವಕಾಶವಿಲ್ಲ. ಆದರೂ ವಿದ್ಯಾರ್ಥಿಗಳು ಬಾಹ್ಯ ಶಕ್ತಿಗಳ ಪ್ರೇರಣೆಯಿಂದ ಈ ರೀತಿ ಮಾಡಿದ್ದಾರೆ. ಆ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಠಿಸಲು ಷಡ್ಯಂತ್ರ ನಡೆಸಲಾಗುತ್ತಿದೆ. ವಿದ್ಯಾ ದೇಗುಲದಲ್ಲಿ ಎಲ್ಲರೂ ಸಮಾನರು. ಒಬ್ಬರಿಗೆ ಒಂದು ನಿಯಮ, ಇನ್ನೊಬ್ಬರಿಗೆ ಇನ್ನೊಂದು ನಿಯಮ ಇಲ್ಲ. ಆದರೂ ಈ ರೀತಿಯ ಕಾರ್ಯಗಳಿಗೆ ಮುಗ್ದ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿ ವಿಷ ಬೀಜ ಬಿತ್ತಲಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟವರು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ತಾಲೂಕಿನ ಯಾವುದೇ ಶಾಲೆಯಲ್ಲಿ ಇಂತಹ ಘಟನೆಗಳು ನಡೆಯಬಾರದು’ ಎಂದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಅವರು ‘ಈ ಪ್ರಕರಣದ ಕುರಿತು ನನಗೆ ದೂರು ಬಂದಿದೆ. ಸ್ಥಳೀಯ ಸಿಆರ್‌ಪಿಯವರಿಗೆ ವರದಿ ನೀಡುವಂತೆ ಸೂಚಿಸಿದ್ದೇನೆ. ವರದಿ ಬಂದ ಬಳಿಕ ಪರಿಶೀಲಿಸಿ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಾಗುವುದು’ ಎಂದಿದ್ದಾರೆ.

ಲಕ್ಷದ್ವೀಪದ ಶಾಲೆಗಳಲ್ಲಿ ಇನ್ಮುಂದೆ ಶುಕ್ರವಾರ ರಜೆ ಇಲ್ಲ; ಭಾನುವಾರವೇ ರಜೆ: ಸರ್ಕಾರದ ಹೊಸ ನಿಯಮ



Read more

[wpas_products keywords=”deal of the day sale today offer all”]