Karnataka news paper

ಭಾರತದಿಂದ ಅಮೆರಿಕಕ್ಕೆ ಬಂದ ಹಿರಿಜೀವಗಳಿಗೆ ಎಷ್ಟೊಂದು ಬೆರಗು..! ಶ್ರೀನಾಥ್ ಭಲ್ಲೆ ಅನುಭವ ಕಥನ – ಭಾಗ 45


ಫ್ಲೈಟ್ ಅಮೆರಿಕಾದ ರನ್ ವೇ ಮೇಲೆ ಲ್ಯಾಂಡ್ ಆಯ್ತು. ಕೆಲವೊಮ್ಮೆ ಫ್ಲೈಟ್ ಬಂದಿಳಿದರೂ ಪಾರ್ಕಿಂಗ್ ಸಿಗದೇ ಅಲ್ಲೇ ಎಲ್ಲೋ ನಿಂತಿರುತ್ತದೆ. ಒಂದರ್ಧ ಘಂಟೆಯಾದ ಮೇಲೆ ಒಂದು ಸ್ಥಳ ನಿಗದಿಯಾದ ಮೇಲೆ ಪಾರ್ಕ್ ಮಾಡಲಾಗುತ್ತದೆ. ಇದು ಪ್ರತಿ ಬಾರಿ ಅಲ್ಲದಿದ್ದರೂ, ನಮ್ಮ ಹಣೆಬರಹದಂತೆ ನಾವಿರುವಾಗ ಮಾತ್ರ ಆಗುತ್ತದೆ ಅಂತ ಕೆಲವರ ಅಂಬೋಣ. ಅಕಸ್ಮಾತ್ ನಿಮ್ಮ ಸೀಟು ಫ್ಲೈಟ್‌ನ ಕೊನೆಯಲ್ಲಿದೆ ಅಂದ್ರೆ, ಫ್ಲೈಟ್ ಮುಂದಿನ ಸೀಟಿನಿಂದ ಹಿಡಿದು, ನಿಮ್ಮ ಮುಂದಿನ ಸೀಟಿನಲ್ಲಿರುವವರು ಇಳಿಯುವ ತನಕ ಕಾಯಲೇ ಬೇಕು ಬಿಡಿ. ಫ್ಲೈಟ್ ನಿಂತ ಕೂಡಲೇ ನೀವೂ ಎದ್ದು ನಿಂತರೆ, ನಿಮಗೇನೂ priority ಕೊಟ್ಟು ಬೇಗ ಇಳಿಸುವುದಿಲ್ಲ. ಜೊತೆಗೆ ಹತ್ತುವಾಗ ಹೇಗೆ ಒಂದೇ ಬಾಗಿಲಿತ್ತೋ ಹಾಗೆಯೇ ಇಳಿಯುವಾಗಲೂ. ಹೇಗಿದ್ರೂ ಕೊನೇ ಸ್ಟಾಪು, ಆರಾಮವಾಗಿ ಕೂತಿರಿ.

bhelle

ಹೊರಗೆ ಬಂದಿದ್ದೂ ಆಯ್ತು. ನಿಮ್ಮನ್ನು ದೇಶದ ಒಳಗೆ ಬಿಡಬೇಕೋ ಇಲ್ಲವೋ ಎಂಬುದೆಲ್ಲಾ ಪರಿಶೀಲನೆ ಆಗಬೇಕು. ನಿಮ್ಮ ವೀಸಾ, passport ಮತ್ತಿತರ ದಾಖಲೆಗಳನ್ನು ನೋಡಿ, ನಿಮಗೆ ಸ್ವಾಗತ ಕೋರುವವರೆಗೂ, ದೇಶದ ಒಳಗೆ ಅಡಿಯಿಡುತ್ತೀರಿ ಅಂತೇನೂ ಖಾತ್ರಿ ಇಲ್ಲ. ಕೆಲವೊಮ್ಮೆ ಎರಡು ಮೂರು ವಿದೇಶೀ ಫ್ಲೈಟ್‌ಗಳು ಒಂದೇ ಸಮಯಕ್ಕೆ ಬಂದು ಬಿಡುತ್ತದೆ. ಆಗಂತೂ immigration ಲೈನಿನಲ್ಲಿ ಒಂದು ಘಂಟೆಯ ಕಾಲವೇ ನಿಂತಿರಬೇಕಾಗಬಹುದು. ನಮಗೆ ಒಂದೊಮ್ಮೆ ಹೀಗೆಯೇ ಆಗಿತ್ತು.

ಅಮೆರಿಕದ ಮಹಾ ಚಳಿಯಲ್ಲಿ ಸ್ನೋ ಸಂಭ್ರಮ..! ಶ್ರೀನಾಥ್ ಭಲ್ಲೆ ಅನುಭವ ಕಥನ – ಭಾಗ 40
ಅಕಸ್ಮಾತ್ ನಮ್ಮನ್ನು ಕರೆದುಕೊಂಡು ಹೋಗುವವರು ಬೇಗನೆ ಬಂದಿದ್ದರು ಅಂದ್ರೆ, ಒಳಗೇನು ನಡೆಯುತ್ತಿದೆ ಎಂದು ಅರಿವಾಗದೇ, ನೀವು flight ನಲ್ಲಿ ಬಂದೇ ಇಲ್ಲ ಎನ್ನಿಸಿ ಆತಂಕವೂ ಆಗಬಹುದು. ಬಹಳ ವರ್ಷಗಳ ಹಿಂದೆ, ನನ್ನ ಅತ್ತೆ – ಮಾವ ಹೀಗೆಯೇ ವಿಸಿಟ್‌ಗೆಂದು ಬಂದಾಗ, ಅವರುಗಳು ಹೊರಗೆ ಬರುವುದು ತಡವಾಗುತ್ತದೆ ಅಂತ ನಾವು ಆರಾಮವಾಗಿ ಹೋದೆವು. ಪಾಪ, ಅವರೇ ನಮಗಾಗಿ ಅರ್ಧ ಘಂಟೆ ಕಾಯುವಂತೆ ಆಗಿತ್ತು. ಒಟ್ಟಾರೆ ಹೇಳೋದಾದ್ರೆ, ಪಿಕ್ ಮಾಡುವವರು ಬೇಗ ಹೋದರೆ ಅವರೇ ಕಾಯಬೇಕು, ತಡವಾಗಿ ಹೋದರೆ ಬರುವವರು ಬೇಗ ಬಂದಿರುತ್ತಾರೆ. ಪರಿಹಾರ ಏನಾದರೂ ಇದೆಯೇ? ಹೌದು ಇದೆ, ಸುಮ್ನೆ ಎಲ್ಲದಕ್ಕೂ ಟೆನ್ಷನ್ ಮಾಡಿಕೊಳ್ಳದೇ ಆರಾಮವಾಗಿರಿ ಅಷ್ಟೇ.

ಈಗ ನಮ್ಮದೇ ಅನುಭವಕ್ಕೆ ಬಂದರೆ, ಅತ್ತೆ – ಮಾವ ದೂರದಿಂದ ಬಂದಿದ್ದಾರೆ ಅಂತ ಮೊದಲು ಕಾಫಿ ಸೇವೆ ಆಗಲಿ ಅಂತ starbucks ಕಾಫಿ ಕೊಂಡೆ. ದೊಡ್ಡ ಲೋಟದಲ್ಲಿ ಕಂಠ ಪೂರ್ತಿ ಕರೀ ಕಾಫಿ ಕೊಟ್ಟ. ಒಂದು ಚೂರು ಕೈ ಅಲುಗಾಡಿದರೂ ಮೈಮೇಲೆ ಬಿಸಿ ಡಿಕಾಕ್ಷನ್ ಚೆಲ್ಲುವಂತೆ ಕೊಟ್ಟಿದ್ದ. ಮತ್ತೊಂದು ಖಾಲೀ ಲೋಟ ಪಡೆದು, ಒಂದಷ್ಟು ಅದಕ್ಕೆ ಸುರಿದು, ಆ ಕರೀ ಕಾಫಿಗೆ ಆ ಪುಟಾಣಿ ಪ್ಯಾಕೆಟ್ ಹಾಲು ಸುರಿದು, ಸಕ್ಕರೆ ಹಾಕಿ, ಕಲಕಿ ಕೊಟ್ಟಾಗ, ಕಾಫಿ ತಂಪಾಗಿತ್ತು. ಕಾಫಿ ಪ್ರಿಯರಿಗೆ ಅದೆಂಥಾ ಸಿಟ್ಟು ಬರುತ್ತದೆ ನೀವೇ ಊಹಿಸಿಕೊಳ್ಳಿ. ಅಲ್ಲೇ ಮೈಕ್ರೋವೇವ್‌ನಲ್ಲಿ ಬಿಸಿ ಮಾಡಿಕೊಡುವಾ ಎಂದರೆ ಯಾರಿಗೂ ವ್ಯವಧಾನ ಇರಲಿಲ್ಲ. ‘ನಿಮಗೆಲ್ಲಾ ಈ ಕಾಫಿ ಅಡ್ಜಸ್ಟ್ ಆಗಿದೆ ಅನ್ನಿಸುತ್ತೆ. ನಾವು ಒಂದು ಕೆಜಿ ‘ಕಾಫಿ ಡೇ’ ಕಾಫಿಪುಡಿ ತಂದಿದ್ದೇವೆ’ ಅಂತ ಸಮಾಧಾನ ಮಾಡಿಕೊಂಡರು. ಅವರು ತಂದಿದ್ದ ಒಂದು ಕೆಜಿ ಕಾಫಿ ಪುಡಿ, ಒಂದೇ ವಾರದಲ್ಲಿ ಖಾಲಿಯಾಗಿದ್ದು ಬೇರೆ ವಿಷಯ.

ಪ್ರೇತಾತ್ಮಗಳಿಗಾಗಿ ಒಂದು ಹಬ್ಬ..! ಶ್ರೀನಾಥ್ ಭಲ್ಲೆ ಅಮೆರಿಕ ಅನುಭವ ಕಥನ – ಭಾಗ 41
ಎರಡು ಘಂಟೆಗಳ ಕಾರಿನ ಪಯಣದಲ್ಲಿ, ಫ್ಲೈಟ್ ಅನುಭವಗಳನ್ನು ಹೇಳುತ್ತಾ ಬಂದಿದ್ದರು. ಜೊತೆಗೆ ಕಿಟಯಾಚೆ ನೋಡುತ್ತಾ ನಾಡಿನ ಸೌಂದರ್ಯವನ್ನೂ ಸವಿಯುತ್ತಾ, ಜೊತೆಗೆ ರಸ್ತೆಯ ಶಿಸ್ತಿನ ಬಗ್ಗೆಯೂ ಶ್ಲಾಘನೆ ನಡೆದಿತ್ತು. ಅಡ್ಡಾದಿಡ್ಡಿ ಸಾಗದೆ ಒಂದೇ ಲೇನ್‌ನಲ್ಲಿ ಸಾಗುವ ಪರಿ ಬಲು ಬೇಗ ಎದ್ದು ಕಾಣುತ್ತದೆ. ಹಿಂದಿನಿಂದ ವೇಗವಾಗಿ ಬಂದು, ನಿಮ್ಮನ್ನು ಹಿಂದೆ ಹಾಕಿ ಮುಂದೆ ಸಾಗೋದು, ಟ್ರಾಫಿಕ್ ಜ್ಯಾಮ್ ಆಗೋದು ಎಲ್ಲವೂ ಮಾಮೂಲಿ. ಆದರೆ ಸಾಮಾನ್ಯವಾಗಿ ಕಾಣದ ಅರ್ಥಾತ್ ಕೇಳದ ವಿಷಯ ಎಂದರೆ horn ಬಾರಿಸುವುದೇ ಕೇಳದಿರೋದು. Honking ನಿಷೇಧ ಅಂತಲ್ಲಾ ಬದಲಿಗೆ ಬಲು ಕಡಿಮೆ ಬಳಕೆ. ಯಾವುದಾದರೂ ವಾಹನದಿಂದ ಹಾರ್ನ್ ಕೇಳಿದೆ ಅಂದ್ರೆ ಮತ್ಯಾರೋ ಏನೂ ತಪ್ಪು ಮಾಡಿದ್ದಾರೆ ಅಂತ ಅರ್ಥ. ಉದಾಹರಣೆಗೆ, ಧಡಾರನೆ ನಮ್ಮ ಮುಂದೆಯೇ ಲೇನ್ ಬದಲಿಸಿ ಅಡ್ಡ ಬರೋದು. ಸಾಮಾನ್ಯವಾಗಿ ಹೀಗೆ ಲೇನ್ ಬದಲಿಸುವುದು ಇದ್ದರೂ ಇಂಡಿಕೇಟರ್‌ಗಳನ್ನು ಬಳಸಿಯೇ ಮಾಡುವುದರಿಂದ ಅಪಾಯ ಕಡಿಮೆ. ಎಲ್ಲವೂ ಇದ್ದೂ ನಮ್ಮ ಗಮನ ಬೀದಿಯ ಮೇಲೆ ಇಲ್ಲಾ ಎಂದರೆ ಯಾರೇನೂ ಮಾಡಲಾಗದು.

ಮನೆಗೂ ಬಂದಿದ್ದಾಯ್ತು, ಮನೆ ನೋಡಿದ್ದಾಯ್ತು, ಸ್ನಾನಾದಿಗಳೂ ಆಯ್ತು, ಊಟವೂ ಆದ ಮೇಲೆ, ಲಗೇಜ್ unpack ಮಾಡೋದು, ಇತ್ಯಾದಿ ಸಂಭ್ರಮ ನಡೆಯುತ್ತದೆ ಅನ್ನಿ. ರೆಫ್ರಿಜಿರೇಟರ್ ಸೇರುವ ಪದಾರ್ಥಗಳು ತನ್ನ ಸ್ಥಾನ ಆಕ್ರಮಿಸಿಕೊಳ್ಳುತ್ತದೆ. ಕೋಡುಬಳೆ, ಚಕ್ಲಿಗಳು ಬಂದಿದ್ರೆ ರುಚಿ ನೋಡುವ ಕೆಲಸವೂ ನಡೆಯುತ್ತದೆ. ಆ ಹೊತ್ತಿನಲ್ಲಿ ಭಾರತದ ಸಮಯ ಎಷ್ಟು ಎಂಬುದರ ಮೇಲೆ ಊರಿಗೆ ಕರೆ ಮಾಡಿ ಕುಶಲ, ಕ್ಷೇಮ ಎಲ್ಲವೂ ನಡೆಯುತ್ತದೆ ಎಂಬಲ್ಲಿಗೆ ಪರದೇಶದಲ್ಲಿ ಬಂದಿದ್ದಾಯ್ತು ಅಂತ ಮುಗಿಸುವಾ. ಮುಂದ? ಓಡಾಟ ಅಷ್ಟೇ !

ಕ್ರಿಸ್ಮಸ್‌ನಿಂದ ನ್ಯೂ ಇಯರ್‌ವರೆಗೆ.. ಶ್ರೀನಾಥ್ ಭಲ್ಲೆ ಅಮೆರಿಕ ಅನುಭವ ಕಥನ – ಭಾಗ 42
ಊರಿಗೆ ಬಂದವರು ನೀರಿಗೆ ಬರದೇ ಇರುವರೇ ಎಂಬಂತೆ, ಇಲ್ಲಿಗೆ ಬಂದ ಮೇಲೆ Walmart ಮತ್ತು ಇಂಡಿಯನ್ ಸ್ಟೋರ್ಸ್‌ಗೆ ಬಾರದೇ ಹೋಗುವರೇ? ನಮ್ಮಲ್ಲಿ ಒಬ್ಬರ ಮನೆಗೆ ಬಂದವರನ್ನು ಹೀಗೇ ವಾಲ್ಮಾರ್ಟ್ ದರ್ಶನ ಮಾಡಿಸಿದ್ದರು. ಅವರ ಅನುಭವ ನನ್ನ ಮಾತಲ್ಲಿ. ನಮ್ಮೂರಿನ Walmartಗೆ ಎರಡು ಮಹಾದ್ವಾರಗಳು. ಒಂದು ಕಡೆಯಿಂದ ಹೋದರೆ ಎಡ ಭಾಗದಲ್ಲಿ ಬೇಕರಿ ಮತ್ತು ತರಕಾರಿ – ಹಣ್ಣು ಇತ್ಯಾದಿ. ಬೇಕಿರುವುದನ್ನು ಕೊಂಡು ನೋಡಿದರೆ, ಬಂದವರು ಅದೇ ದಿಕ್ಕಿನಲ್ಲಿ ಮುಂದೆ ಸಾಗಿದ್ದರು. ಆ ಬದಿಯಲ್ಲಿರುವುದೆಲ್ಲಾ ಬರೀ ಪ್ಯಾಕ್ ಮಾಡಿರುವ, ನಾನಾ ಪ್ರಾಣಿಗಳ ಮಾಂಸದ ತುಂಡುಗಳು. ವಾಸನೆಯೇ ಬಾರದಿದ್ದರೂ, ಅಷ್ಟೂ ದೂರ ಮೂಗಿಗೆ ಸೆರಗನ್ನು ಒತ್ತಿದವರು ಉಸಿರನ್ನೇ ತೆಗೆದುಕೊಂಡಿರಲಿಲ್ಲ. ಇನ್ನು ಮುಂದೆ Walmartಗೆ ಬಂದರೆ ಈ ಕಡೆ ಬರೋದಿಲ್ಲ ಅಂತ ಶಪಥ ಬೇರೆ.

ಇದಾದ ಮೇಲೆ ಚೆಕ್ – ಔಟ್ ಲೈನಿನಲ್ಲಿ ನಿಂತಾಗ, ಮತ್ತದೇ ತೊಂದರೆ. ಎದುರಿಗೆ ಇದ್ದವರು ತಾವು ಉಣ್ಣುವ ಮಾಂಸಾಹಾರದ ಪ್ಯಾಕೆಟ್‌ಗಳನ್ನು ರೋಲರ್ ಮೇಲೆ ಇರಿಸಿದರೆ ಇವರಿಗೆ ಇರುಸು ಮುರುಸು. ಆತನ ಚೆಕ್ ಔಟ್ ಪೂರ್ಣ ಆಗುವವರೆಗೂ ತಮ್ಮ ಗಾಡಿಯ ಸಾಮಾನುಗಳನ್ನು ಅಲ್ಲಿಡಲು ಬಿಡಲಿಲ್ಲ. ಭಾರತದಲ್ಲಿ ಹೇಗೆ ಬೆಳೆದು ಬಂದಿರುತ್ತೇವೆಯೋ ಅದರಂತೆಯೇ ಗುಣ ಪ್ರದರ್ಶನ ಮಾಡುವುದು ಸಹಜವೇ. ಇಲ್ಲಿಗೆ ಬಂದ ಒಂದೆರಡು ದಿನದಲ್ಲೇ ನಮ್ಮೆಲ್ಲಾ ಅಭ್ಯಾಸಗಳನ್ನು ಮರೆತುಬಿಡಬೇಕು ಅಂದರಾಗದು.

ಭಾರತದಿಂದ ಮಾತಾಪಿತೃಗಳು ಬರುವ ಶುಭ ವೇಳೆ: ಶ್ರೀನಾಥ್ ಭಲ್ಲೆ ಅಮೆರಿಕ ಅನುಭವ ಕಥನ – ಭಾಗ 43
ಇನ್ನು ಇಂಡಿಯನ್ ಸ್ಟೋರ್ಸ್‌ಗಳಲ್ಲಿನ ಅನುಭವವೇ ಮತ್ತೊಂದು ಬಗೆಯದ್ದು. ‘ಈ ನಾಲ್ಕು ಎಸಳು ಕರಿಬೇವಿಗೆ ಒಂದು ಡಾಲರ್ ಬೆಲೆಯಾ? ಒಂದು ಡಾಲರ್ ಅಂದ್ರೆ ಅರವತ್ತು ರೂಪಾಯಿ. ಹೇಳಿದ್ರೆ ನಾನೇ ಒಂದಿಷ್ಟು ತರುತ್ತಿದ್ದೆ, ಹಿತ್ತಲಲ್ಲಿ ರಾಶಿ ಬೆಳೆದಿತ್ತು’ ಅಂತ ಒಮ್ಮೆ. ‘ಇಲ್ಲಿ ದಂಟಿನ ಸೊಪ್ಪು ಇದೆಯಾ ನೋಡೋಣ’ ಅಂದಿದ್ರು. ಅದಕ್ಕೆ ನಾನು ‘ನಮ್ಮೂರಿನಲ್ಲಿ ದಂಟಿನ ಸೊಪ್ಪು ಸಿಗುವುದಿಲ್ಲ’ ಅಂದಿದ್ದೆ. ‘ನಾನು ಊರಿಂದ ಹೊರಡುವಾಗ ಕೇಳಿದ್ದೆ ತಾನೇ? ಬೇರೇನಾದರೂ ಬೇಕಾ ಅಂತ? ನಮ್ ತರಕಾರಿ ತಾಯಮ್ಮನಿಗೆ ಹೇಳಿದ್ರೆ ಮಾರ್ಕೆಟ್‌ನಿಂದ ಫ್ರೆಶ್ ಆಗಿರೋ ದಂಟು ತಂದುಕೊಡ್ತಿದ್ಲು. ಅದೇನು ಮಹಾ ಭಾರ ಆಗಿರುತ್ತಿತ್ತು ಸದ್ಯ!’ ಆಗ ನಾನು ಬಾಯಿಬಿಡಲೇಬೇಕಿತ್ತು ‘ನಿಮ್ಮ ಸೂಟ್ಕೇಸ್‌ನಲ್ಲಿ ತರಕಾರಿಗಳು, ಸಾಂಬಾರು ಪದಾರ್ಥಗಳು ಅಂತೆಲ್ಲಾ ತಂದಿದ್ರೆ, ನಿಮ್ಮನ್ನ ಅಲ್ಲಿಂದ್ಲೇ ವಾಪಸ್ ಕಳಿಸಿಬಿಡ್ತಿದ್ರು. ಅವೆಲ್ಲಾ ಈ ದೇಶದ ಒಳಗೆ ತರುವಂತಿಲ್ಲ’. ಯಾಕೋ ನನ್ನ ಮಾತು ಸರಿ ಬರಲಿಲ್ಲ ಅವರಿಗೆ, ಬಂದಿತ್ತು ಮಾತು ‘ಅದೇನೋ ನಿಮ್ಮ ದೇಶದ ವಿಷಯ ಗೊತ್ತಿಲ್ಲ. ನಿಮ್ಮ ದೇಶ ನಿಮಗೆ ಸರಿ, ನಮ್ಮ ದೇಶ ನಮಗೆ ಸರಿ’

ಎಂಥಾ ಸೋಜಿಗ..!!! ಇಷ್ಟಕ್ಕೂ ನಾವು ಯಾರು? ಇಲ್ಲಿನವರಿಗೆ ನಾವು ಅಲ್ಲಿಯವರು. ಅಲ್ಲಿನವರಿಗೆ ನಾವು ಇಲ್ಲಿಯವರು. ಇಂದಿಗೂ ಅರ್ಥವಾಗದ, ವಿಷಯ ಇದೊಂದೇ..! ಇಲ್ಲಾ ಬಿಡಿ, ಹಲವಾರು ಉತ್ತರ ಗೊತ್ತಿಲ್ಲದ ಪ್ರಶ್ನೆಗಳಲ್ಲಿ ಇದೂ ಒಂದು.

ಭಾರತ To ಅಮೆರಿಕಾ ಮಹಾಪಯಣದ ಸಿದ್ದತೆಯೇ ಸವಾಲು..! ಶ್ರೀನಾಥ್ ಭಲ್ಲೆ ಅನುಭವ ಕಥನ – ಭಾಗ 44



Read more

[wpas_products keywords=”deal of the day sale today offer all”]