Karnataka news paper

‘ಮಾಫಿಯಾ’ಕ್ಕಾಗಿ ಪೊಲೀಸ್ ಪೋಷಾಕು ಧರಿಸಿದ ಅಪ್ಪ ‘ಡೈನಾಮಿಕ್’ ದೇವರಾಜ್, ಮಗ ಪ್ರಜ್ವಲ್ ದೇವರಾಜ್


ಹೈಲೈಟ್ಸ್‌:

  • ಪ್ರಜ್ವಲ್ ದೇವರಾಜ್, ಅದಿತಿ ಪ್ರಭುದೇವ ನಟನೆಯ ‘ಮಾಫಿಯಾ’ ಸಿನಿಮಾ
  • ಕಂಠೀರವ ಸ್ಟುಡಿಯೋದಲ್ಲಿ ಸೆಟ್ ಹಾಕಿ ಸಿನಿಮಾ ಚಿತ್ರೀಕರಣ ಮಾಡಲಾಗುತ್ತಿದೆ
  • ಪ್ರಜ್ವಲ್ ದೇವರಾಜ್ ಅವರು ಪೊಲೀಸ್ ಇನ್‌ಸ್ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ

ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸುತ್ತಿರುವ ‘ಮಾಫಿಯಾ‘ ಚಿತ್ರದ ಚಿತ್ರೀಕರಣ ಕಂಠೀರವ ಸ್ಟುಡಿಯೋದಲ್ಲಿ ನಿರ್ಮಿಸಲಾಗಿರುವ ಅದ್ದೂರಿ ಸೆಟ್‌ನಲ್ಲಿ ನಡೆಯುತ್ತಿದೆ. ಕಲಾ ನಿರ್ದೇಶಕ ಶ್ರೀನಿವಾಸ್ ಪೊಲೀಸ್ ಕಂಟ್ರೋಲ್‌ ರೂಂನ ಸೆಟ್ ನಿರ್ಮಾಣ ಮಾಡಿದ್ದಾರೆ. ಪ್ರಜ್ವಲ್ ದೇವರಾಜ್, ದೇವರಾಜ್ ಹಾಗೂ ಸಾಧುಕೋಕಿಲ ಮುಂತಾದ ಕಲಾವಿದರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.

“ನಾನು ನನ್ನ ಮಗ ಇಬ್ಬರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದೇವೆ. ಅದಕ್ಕೂ ಖುಷಿಯ ವಿಚಾರವೆಂದರೆ ನಾನು, ಪ್ರಜ್ವಲ್ ಇಬ್ಬರು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇವೆ.‌ ನಿರ್ದೇಶಕ ಲೋಹಿತ್ ಇನ್ನು ಚಿಕ್ಕ ಹುಡುಗ. ಕೆಲಸ ಮಾಡುವ ರೀತಿ ಅದ್ಭುತ. ಸಾಧುಕೋಕಿಲ ಅವರು ಸ್ಪೆಷಲ್ ಪೊಲೀಸ್ ಆಫಿಸರ್ ಆಗಿ ಅಭಿನಯಿಸುತ್ತಿದ್ದಾರೆ” ಎಂದರು ನಟ ದೇವರಾಜ್.

“ನಾನು ಮೊದಲ ದಿನದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೇನೆ. ಇಲ್ಲಿನ ತಂಡ ನೋಡಿದರೆ ಯಾರು ಹೊಸಬರು ಅನಿಸುವುದಿಲ್ಲ. ಎಲ್ಲರು ನುರಿತ ತಂತ್ರಜ್ಞರಂತೆ ಕಾಣುತ್ತಿದ್ದಾರೆ. ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ಜೊತೆಗೆ ಕೆಲಸ ಮಾಡುತ್ತಿರುವುದು ಖುಷಿಯ ವಿಚಾರ. ಪ್ರಜ್ವಲ್ ಜೊತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದೇನೆ. ಒಂದು ಚಿತ್ರ ನಿರ್ದೇಶನವನ್ನು ಮಾಡಿದ್ದೇನೆ” ಎಂದ ಸಾಧುಕೋಕಿಲ ಅವರು ನಿರ್ದೇಶಕ ಲೋಹಿತ್ ಕಾರ್ಯವೈಖರಿಯನ್ನು ಶ್ಲಾಘಿಸಿದರು.

Mafia: ಪ್ರಜ್ವಲ್‌ ದೇವರಾಜ್‌ ‘ಮಾಫಿಯಾ’ಗೆ ಸಾಥ್ ನೀಡಿದ ‘ದುನಿಯಾ’ ವಿಜಯ್!

“ನಾನು ಕಂಟ್ರೋಲ್ ರೂಂನ ಈ ಸೆಟ್ ಮೊಬೈಲ್‌ನಲ್ಲಿ ನೋಡಿದ್ದೆ. ಎದುರಿಗೆ ನೋಡಿ ಹೆಚ್ಚು ಖುಷಿಯಾಯಿತು. ಅದಕ್ಕಿಂತ ಖುಷಿ ಅಂದರೆ ನನ್ನ ಅಪ್ಪನ ಜೊತೆ ಕೆಲಸ ಮಾಡುತ್ತಿರುವುದು. ಈ ಹಿಂದೆ “ಅರ್ಜುನ” ಚಿತ್ರದಲ್ಲಿ ಇಬ್ಬರು ವಿರುದ್ಧ ಪಾತ್ರಗಳಲ್ಲಿ ನಟಿಸಿದ್ದೆವು. ಆದರೆ ಇದರಲ್ಲಿ ಇಬ್ಬರು ಪೊಲೀಸ್ ಪಾತ್ರದಲ್ಲಿ ಅಭಿನಯಿಸುತ್ತಿದ್ದೇವೆ. ಅವರು ಸೀನಿಯರ್ ಆಫೀಸರ್. ನಾನು ಜ್ಯೂನಿಯರ್. ಸಾಧುಕೋಕಿಲ ಸರ್ ಜೊತೆ ನಟಿಸುತ್ತಿರುವುದು ಸಂತಸ ತಂದಿದೆ. ಇದೇ ಸೆಟ್‌ನಲ್ಲಿ ಹನ್ನೊಂದು ದಿನಗಳ ಚಿತ್ರೀಕರಣ ನಡೆಯಲಿದೆ. ನಿರ್ದೇಶಕ ಲೋಹಿತ್ ಅವರ ಕಾರ್ಯವೈಖರಿ ಉತ್ತಮವಾಗಿದೆ” ಎಂದರು ಪ್ರಜ್ವಲ್ ದೇವರಾಜ್.

“ನನ್ನಂತಹ ಕಿರಿಯ ನಿರ್ದೇಶಕ ಹಿರಿಯ ನಟರಾದ ದೇವರಾಜ್, ಸಾಧುಕೋಕಿಲ ಹಾಗೂ ನಾಯಕ ಪ್ರಜ್ವಲ್ ದೇವರಾಜ್ ಅವರೊಡನೆ ಕೆಲಸ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆ. ಅದರಲ್ಲೂ ಪ್ರಜ್ವಲ್ ಅವರು ನೀಡುತ್ತಿರುವ ಸಹಕಾರಕ್ಕೆ ನಾನು ಆಭಾರಿ ಎನ್ನುತ್ತಾರೆ” ನಿರ್ದೇಶಕ ಲೋಹಿತ್. ಈ ಚಿತ್ರಕ್ಕೆ ಕುಮಾರ್ ಹಣ ಹೂಡಿದ್ದಾರೆ.

‘ಮಾಫಿಯಾ’ ಚಿತ್ರಕ್ಕಾಗಿ ಪ್ರಜ್ವಲ್ ಹೊಸ ಹೇರ್‌ಸ್ಟೈಲ್‌; ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ ಮಾಡಿದ ‘ಡೈನಾಮಿಕ್ ಪ್ರಿನ್ಸ್‌’

ಪ್ರಜ್ವಲ್ ದೇವರಾಜ್ ‘ಮಾಫಿಯಾ’ ಚಿತ್ರಕ್ಕೆ ಅದಿತಿ ಪ್ರಭುದೇವ ನಾಯಕಿ. ಈ ಸಿನಿಮಾದ ಮುಹೂರ್ತ ಸಮಾರಂಭಕ್ಕೆ ಬಂದು ದುನಿಯಾ ವಿಜಯ್, ಪ್ರಿಯಾಂಕಾ ಉಪೇಂದ್ರ ಸಾಥ್ ನೀಡಿದ್ದಾರೆ. ಈ ಹಿಂದೆ ಲೋಹಿತ್ ‘ಮಮ್ಮಿ’, ‘ದೇವಕಿ’ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಪ್ರಜ್ವಲ್ ಪೊಲೀಸ್ ಇನ್ಸ್‌ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕಾಗಿ ಎರಡು ವರ್ಷಗಳಿಂದ ಬೆಳೆಸಿದ ಕೂದಲನ್ನು ಕತ್ತರಿಸಿ, ಹೊಸ ಲುಕ್‌ನಲ್ಲಿ ಪ್ರಜ್ವಲ್ ರೆಡಿಯಾಗಿದ್ದಾರೆ. ಒರಟ ಪ್ರಶಾಂತ್ ಕೂಡ ಈ ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ನಟಿ ಅದಿತಿ ಪ್ರಭುದೇವ ಈ ಸಿನಿಮಾದಲ್ಲಿ ಪತ್ರಕರ್ತೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತನಿಖೆ ಪತ್ರಕರ್ತೆಯಾಗಿ ಕಾಣಿಸಿಕೊಳ್ಳುತ್ತಿರುವ ಅದಿತಿ ಪ್ರಭುದೇವ ಈ ಪಾತ್ರಕ್ಕಾಗಿ ಒಂದಷ್ಟು ತಯಾರಿ ಮಾಡಿಕೊಂಡಿದ್ದಾರೆ.

‘ಮೊದಲ ಬಾರಿ ತಂದೆ ಜೊತೆಗೆ ಪೊಲೀಸ್ ಪಾತ್ರ ಮಾಡ್ತಾ ಇದ್ದೇನೆ..’- ನಟ ಪ್ರಜ್ವಲ್ ದೇವರಾಜ್‌



Read more

Leave a Reply

Your email address will not be published. Required fields are marked *