Karnataka news paper

ಫೋರ್‌ ವಾಲ್ಸ್‌ ಆ್ಯಂಡ್‌ ಟು ನೈಟೀಸ್‌: ಕಲರ್‌ಫುಲ್‌ ಅಚ್ಯುತಣ್ಣ


ಪೋಷಕ ಪಾತ್ರ, ಖಳ ನಟನಾಗಿ ಹಲವು ಭಿನ್ನ ಪಾತ್ರಗಳಲ್ಲಿ ಬಹಳ ಸರಳವಾಗಿ, ಸಹಜವಾಗಿ ಕಾಣಿಸಿಕೊಳ್ಳುತ್ತಿದ್ದ ನಟ ಅಚ್ಯುತ್‌ ಕುಮಾರ್‌ ಇದೀಗ ಬಣ್ಣಬಣ್ಣದ ಧಿರಿಸಿನಲ್ಲಿ ಮೊದಲ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಎಸ್‌.ಎಸ್‌. ಸಜ್ಜನ್‌ ನಿರ್ದೇಶನದ ‘ಫೋರ್‌ ವಾಲ್ಸ್‌ ಆ್ಯಂಡ್‌ ಟು ನೈಟೀಸ್‌’ ಚಿತ್ರದಲ್ಲಿ ಬೆಲ್‌ಬಾಟಂ ಪ್ಯಾಂಟು, ಕಲರ್‌ಕಲರ್‌ ಶರ್ಟ್‌ನಲ್ಲಿ ಮಿಂಚುವ ಚಿರಯುವಕನಾಗಿ, ಮಧ್ಯವಯಸ್ಕನಾಗಿ, ಕುಟುಂಬದ ಹೊಣೆ ಹೊತ್ತ ತಂದೆಯಾಗಿ ಮೂರು ಶೇಡ್‌ಗಳಲ್ಲಿ ಅಚ್ಯುತ್‌ ಕುಮಾರ್‌ ನಟಿಸಿದ್ದಾರೆ. ಈ ಚಿತ್ರಕ್ಕೆ ಇವರೇ ‘ಹೀರೊ’ ಎಂದಿದೆ ಚಿತ್ರತಂಡ.

ತಮ್ಮ ಪಾತ್ರದ ಕುರಿತು ‘ಸಿನಿಮಾ ಪುರವಣಿ’ ಜೊತೆ ಮಾತಿಗಿಳಿದ ಅಚ್ಯುತ್‌ ಕುಮಾರ್‌ ತಮ್ಮ ಯೌವನದ ಕಾಲವನ್ನು ನೆನಪಿಸಿಕೊಂಡರು. ‘ಈ ಕಥೆಯಲ್ಲಿ ಮೂರು ಕಾಲಘಟ್ಟದ ಪಾತ್ರ ಬರುತ್ತದೆ. ಯುವಕನಾಗಿ, ಪ್ರೀತಿಸಿ ಮದುವೆಯಾಗುವ ಮಧ್ಯವಯಸ್ಕನಾಗಿ ಹಾಗೂ 58–60 ವಯಸ್ಸಿನ ತಂದೆಯ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳುತ್ತೇನೆ. ಈ ಚಿತ್ರದಲ್ಲಿ ಸ್ವಲ್ಪ ಕಲರ್‌ಫುಲ್‌ ಆಗಿ ಮೊದಲ ಬಾರಿ ಕಾಣಿಸಿಕೊಳ್ಳುತ್ತಿದ್ದೇನೆ. 80ರ ದಶಕದಲ್ಲಿ ಬೆಲ್‌ಬಾಟಂ ಪ್ಯಾಂಟ್‌ ಹಾಕಿಕೊಳ್ಳುತ್ತಿದ್ದರು. ಈಗಿನ ಯುವಜನತೆಗೆ ಇದು ರೆಟ್ರೊ ಲುಕ್‌. ನಮಗದು ವಾಸ್ತವ. ನಾವು ಆಗಲೇ ಅಂಥ ಪ್ಯಾಂಟ್‌ ಹಾಕಿದ್ದೆವು. ಆದರೆ ಈ ರೀತಿ ಕಲರ್‌ಕಲರ್‌ ಶರ್ಟ್‌ ಹಾಕಿಕೊಂಡಿರಲಿಲ್ಲ. ಈ ರೀತಿ ಸ್ಟೈಲಿಶ್‌ ಆಗಿ ಡ್ರೆಸ್‌ ಮಾಡಿರುವವರನ್ನು ನೋಡಿದ್ದೆವು. ಈ ರೀತಿ ಶರ್ಟ್‌ ಬೇಕು ಎಂದರೆ ಮನೆಯಲ್ಲಿ ತಲೆ ಮೇಲೆ ಹೊಡೆಯುತ್ತಿದ್ದರು. ಆ ಕಾಲದಲ್ಲಿ, ವರ್ಷಕ್ಕೆ ಎರಡು ಜೊತೆ ಬಟ್ಟೆ ಕೊಡಿಸಿದರೆ ಮುಗಿಯಿತು. ಈಗ ಮತ್ತದೇ ಧಿರಿಸು ಧರಿಸಿದಾಗ ಹಳೆಯ ಕಾಲವನ್ನು ಜ್ಞಾ‍ಪಿಸಿಕೊಂಡಂತಾಯಿತು. ಈ ರೀತಿ ಬಟ್ಟೆ ಹಾಕಿಕೊಳ್ಳಬೇಕು ಎನ್ನುವ ಆ ಕಾಲದ ಆಸೆ ಈಗ ಈಡೇರಿದೆ’.

‘ಚಿತ್ರದಲ್ಲಿ, ಹೆಣ್ಣುಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುವ ತಂದೆಯ ಪಾತ್ರ ನನ್ನದು. ಬಹಳ ಜವಾಬ್ದಾರಿಯುತವಾಗಿ ಮಕ್ಕಳನ್ನು ಕಾಪಾಡಿಕೊಂಡು ಜೀವನ ನಿರ್ವಹಣೆ ಮಾಡುವ ತಂದೆ ಆತ. ‘ನನ್ನ ಹೆಣ್ಣುಮಕ್ಕಳಿಗೆ ನಾನೇ ಗಾಡು, ನಾನೇ ಗಾರ್ಡು’– ಈ ಡೈಲಾಗ್‌ ನನ್ನ ಪಾತ್ರದ ವಿವರಣೆಯನ್ನು ನೀಡುತ್ತದೆ. ಇದಕ್ಕೊಂದು ಕಾರಣವಿರುತ್ತದೆ. ಅದೇ ಚಿತ್ರದ ಕಥೆ. ಯಾವುದೇ ಮನೆಯಲ್ಲಾದರೂ ತಂದೆ ಇದೇ ರೀತಿ ಇರುತ್ತಾನೆ. ಹೆಣ್ಣುಮಕ್ಕಳಿದ್ದರೆ ಜವಾಬ್ದಾರಿ ಇನ್ನೂ ಹೆಚ್ಚು’.

‘ಕಥೆಯ ಶೀರ್ಷಿಕೆಯನ್ನು ಸಜ್ಜನ್‌ ಮೊದಲ ಬಾರಿ ಹೇಳಿದಾಗ, ‘ಯಾವುದೋ ಇದು ಪೋಲಿ ಸಿನಿಮಾ ಶೀರ್ಷಿಕೆ ಇದ್ದ ಹಾಗೆ ಇದೆ, ನಾನು ಮಾಡಲ್ಲ’ ಎಂದಿದ್ದೆ. ಸಜ್ಜನ್‌ ಅವರು ನನಗೆ ಮೊದಲು ಹೇಳಿದ್ದೇ ಶೀರ್ಷಿಕೆ, ಆಮೇಲೆ ಕಥೆ ಹೇಳಿದರು. ಶೀರ್ಷಿಕೆ ಸಜ್ಜನ್‌ ಅವರ ಫಸ್ಟ್‌ ಕಾರ್ಡ್‌. ಮೊದಲು ಶೀರ್ಷಿಕೆ ಹೇಳಿಯೇ ಹೆದರಿಸಿದ್ದರು. ಕಥೆ ಹೇಳಿದ ಮೇಲೆ ಕೊಂಚ ಬದಲಾವಣೆ ಮಾಡಿಕೊಂಡು ಪಾತ್ರ ಮಾಡಲು ಒಪ್ಪಿಕೊಂಡೆ. ಕಥೆ ಜೊತೆಗೆ ಪಯಣ ಬೆಳೆಸುತ್ತಾ ಶೀರ್ಷಿಕೆ ಸೂಕ್ತವೆಂಬಂತೆ ಅನಿಸಿತು’ ಎನ್ನುತ್ತಾರೆ ಅಚ್ಯುತ್‌ ಕುಮಾರ್‌. 

ಸದ್ಯ, ರಿಷಬ್‌ ಶೆಟ್ಟಿ ನಿರ್ದೇಶನದ ‘ಕಾಂತಾರ’, ದರ್ಶನ್‌ ನಟನೆಯ ‘ಕ್ರಾಂತಿ’, ಜಗ್ಗೇಶ್‌ ನಟನೆಯ ‘ರಾಘವೇಂದ್ರ ಸ್ಟೋರ್ಸ್‌’ ಹೀಗೆ ಸಾಲು ಸಾಲು ಸಿನಿಮಾಗಳ ಚಿತ್ರೀಕರಣದಲ್ಲಿ ಅಚ್ಯುತ್‌ ಕುಮಾರ್‌ ಅವರು ತೊಡಗಿಸಿಕೊಂಡಿದ್ದಾರೆ. ಫೆ.18ರಂದು ತೆರೆ ಕಾಣುತ್ತಿರುವ ‘ಬೈ ಟು ಲವ್‌’ ಚಿತ್ರದಲ್ಲೂ ತಂದೆಯ ಪಾತ್ರದಲ್ಲಿ ಅಚ್ಯುತ್‌ ಕುಮಾರ್‌ ಅವರು ಕಾಣಿಸಿಕೊಳ್ಳುತ್ತಿದ್ದು, ‘ಸಾಲು ಸಾಲು ತಂದೆ ಪಾತ್ರಗಳಾಯಿತು, ಸ್ವಲ್ಪ ದಿನ ಬಿಟ್ಟು ನೋಡಿ ಕೇಡಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದೇನೆ’ ಎಂದು ನಗುತ್ತಾ ಮಾತಿಗೆ ವಿರಾಮವಿಟ್ಟರು.

 



Read More…Source link

[wpas_products keywords=”deal of the day party wear for men wedding shirt”]