Karnataka news paper

ಉದ್ಯೋಗ ಸೃಷ್ಟಿಸುವತ್ತ ಚಿತ್ತ ಹರಿಸಿ: ಎಂ.ಟಿ. ರಂಗಾರೆಡ್ಡಿ


ಬೆಂಗಳೂರು: ‘ಪದವಿ ಪೂರ್ಣಗೊಳಿಸಿದ ಬಳಿಕ ಉದ್ಯೋಗಕ್ಕಾಗಿ ಅಲೆಯದೆ ಸ್ವಂತ ಉದ್ದಿಮೆ ಸ್ಥಾಪಿಸಿ ಇತರರಿಗೆ ಉದ್ಯೋಗ ಕಲ್ಪಿಸುವತ್ತ ಚಿತ್ತ ಹರಿಸಿ’ ಎಂದು ಎಂಜಿನಿಯರ್‌ಗಳ ಸಂಸ್ಥೆಯ ಕರ್ನಾಟಕ ಕೇಂದ್ರದ ಕಾರ್ಯದರ್ಶಿ ಎಂಟಿ ರಂಗಾರೆಡ್ಡಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.  

ಎಂಜಿನಿಯರ್‌ಗಳ ಸಂಸ್ಥೆಯು ಬಿಎನ್‌ಎಂ ತಾಂತ್ರಿಕ ವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಇಂಧನ ಸಂರಕ್ಷಣೆ ಜಾಗೃತಿ’ ಕುರಿತ ವಿಚಾರ ಸಂಕಿರಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಂಗಳವಾರ ಮಾತನಾಡಿದರು. 

‘ಈಗ ಪ್ರತಿ ವರ್ಷ 10 ಲಕ್ಷದಿಂದ 12 ಲಕ್ಷ ಮಂದಿ ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸುತ್ತಿದ್ದಾರೆ. ಇವರಲ್ಲಿ ಬಹುತೇಕರು ನಿರುದ್ಯೋಗಿಗಳಾಗುತ್ತಿದ್ದಾರೆ. ಎಂಜಿನಿಯರಿಂಗ್‌ ಪದವಿ ಪಡೆದವರನ್ನು ಜನ ಕೀಳಾಗಿ ಕಾಣುತ್ತಿರುವುದನ್ನು ನೋಡಿದಾಗ ತುಂಬಾ ಬೇಸರವಾಗುತ್ತದೆ’ ಎಂದರು.

‘ಅತಿ ಹೆಚ್ಚು ನವೋದ್ಯಮಗಳನ್ನು ಹೊಂದಿರುವ ನಗರಗಳಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ. ಈ ಕ್ಷೇತ್ರದಲ್ಲಿ ಯುವ ಪೀಳಿಗೆಗೆ ಹೇರಳ ಅವಕಾಶಗಳಿವೆ. ನವೋದ್ಯಮಿಗಳಿಗೆ ಪ್ರೋತ್ಸಾಹವೂ ಸಿಗುತ್ತಿದೆ. ಅದನ್ನು ಸದುಪಯೋಗಪಡಿಸಿಕೊಂಡು ವಿಭಿನ್ನವಾದುದ್ದನ್ನು ಸಾಧಿಸಬೇಕು’ ಎಂದು ಸಲಹೆ ನೀಡಿದರು. 

ಬಿಎನ್‌ಎಂ ಶಿಕ್ಷಣ ಸಮೂಹಗಳ ಕಾರ್ಯದರ್ಶಿ ನಾರಾಯಣ ರಾವ್‌ ಆರ್‌.ಮಾನೆ, ‘ಅಭಿವೃದ್ಧಿಯ ನೆಪದಲ್ಲಿ ಪರಿಸರಕ್ಕೆ ಧಕ್ಕೆ ಉಂಟು ಮಾಡಲಾಗುತ್ತಿದೆ. ಪರಿಸರಕ್ಕೆ ಮಾರಕವಾಗುವಂತಹ ಯೋಜನೆಗಳನ್ನು ಕೈಗೊಳ್ಳಬಾರದು’ ಎಂದರು.



Read more from source