Karnataka news paper

ದಕ್ಷಿಣ ಆಫ್ರಿಕಕ್ಕೆ ಪ್ರಯಾಣ ಬೆಳೆಸಿದ ಕೊಹ್ಲಿ ಸಾರಥ್ಯದ ಭಾರತ ಟೆಸ್ಟ್‌ ತಂಡ!


ಹೈಲೈಟ್ಸ್‌:

  • ಗುರುವಾರ ಬೆಳಗ್ಗೆ ದಕ್ಷಿಣ ಆಫ್ರಿಕಕ್ಕೆ ಪ್ರಯಾಣ ಬೆಳೆಸಿದ ಟೀಮ್‌ ಇಂಡಿಯಾ.
  • ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟೆಸ್ಟ್‌ ಸರಣಿ ಆಡಲಿರುವ ಭಾರತ.
  • ಡಿಸೆಂಬರ್‌ 26 ರಂದು ಮೊದಲನೇ ಟೆಸ್ಟ್‌ನಲ್ಲಿ ಸೆಣಸಲಿರುವ ಭಾರತ-ಆಫ್ರಿಕಾ.

ಮುಂಬೈ: ವಿರಾಟ್‌ ಕೊಹ್ಲಿ ನಾಯಕತ್ವದ ಭಾರತ ಟೆಸ್ಟ್‌ ತಂಡ ಹರಿಣಗಳ ವಿರುದ್ಧ ಮೂರು ಪಂದ್ಯಗಳ ಟೆಸ್ಟ್‌ ಸರಣಿ ಆಡುವ ಸಲುವಾಗಿ ಗುರುವಾರ ಬೆಳಗ್ಗೆ ದಕ್ಷಿಣ ಆಫ್ರಿಕಕ್ಕೆ ಪ್ರಯಾಣ ಬೆಳೆಸಿದೆ. ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯು(ಬಿಸಿಸಿಐ) ತನ್ನ ಅಧಿಕೃತ ಟ್ವಿಟರ್‌ನಲ್ಲಿ ಟೀಮ್‌ ಇಂಡಿಯಾ ಆಟಗಾರರು ವಿಮಾನದಲ್ಲಿ ಕುಳಿತು ಪ್ರಯಾಣಿಸುತ್ತಿರುವ ಫೋಟೋಗಳನ್ನು ಹಂಚಿಕೊಂಡಿದೆ.

ಅಂದಹಾಗೆ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್‌ ಸರಣಿ ಡಿಸೆಂಬರ್‌ 26ರಂದು ಸೆಂಚೂರಿಯನ್‌ನಲ್ಲಿ ಆರಂಭವಾಗಲಿದೆ. ಇತ್ತೀಚೆಗಷ್ಟೇ ಟೆಸ್ಟ್‌ ತಂಡಕ್ಕೆ ಉಪ ನಾಯಕನನ್ನಾಗಿ ಆರಿಸಿದ್ದ ರೋಹಿತ್‌ ಶರ್ಮಾ ಸ್ನಾಯು ಸೆಳೆತದ ಸಮಸ್ಯೆಗೆ ಒಳಗಾಗಿರುವ ಹಿನ್ನೆಲೆಯಲ್ಲಿ ಅವರು ಟೆಸ್ಟ್‌ ಸರಣಿಯಿಂದ ಹೊರ ನಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಹ್ಲಿ ನಾಯಕತ್ವದ ಭಾರತ ತಂಡ ರೋಹಿತ್‌ ಶರ್ಮಾ ಸೇವೆಯನ್ನು ಕಳೆದುಕೊಳ್ಳಲಿದೆ.

“ರೋಹಿತ್‌ ಶರ್ಮಾ ಅವರ ಸಾಮರ್ಥ್ಯವನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಇಂಗ್ಲೆಂಡ್‌ ಪ್ರವಾಸದಲ್ಲಿ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು. ಟೆಸ್ಟ್‌ ಸರಣಿಗಾಗಿ ಅವರು ಈಗಾಗಲೇ ಅಭ್ಯಾಸ ನಡೆಸಿದ್ದರು. ಆದರೆ, ಅವರು ಅಲಭ್ಯತೆ ತಂಡಕ್ಕೆ ಕಾಡಲಿದೆ. ಅಂದಹಾಗೆ ತಂಡಕ್ಕೆ ಆರಂಭಿಕ ಜೊತೆಯಾಟ ತುಂಬಾ ಮುಖ್ಯವಾಗುತ್ತದೆ. ಅವರ ಅನುಭವ ಹಾಗೂ ಕೌಶಲವನ್ನು ನಾವು ಕಳೆದುಕೊಂಡಿದ್ದೇವೆ,” ಎಂದು ವಿರಾಟ್‌ ಕೊಹ್ಲಿ ಬುಧವಾರ ಪ್ರವಾಸ ಪೂರ್ವ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದ್ದರು.

ಬಿಸಿಸಿಐ ಬಾಸ್‌ ಗಂಗೂಲಿಗೆ ಟಾಂಗ್‌ ಕೊಟ್ಟ ವಿರಾಟ್‌ ಕೊಹ್ಲಿ!

“ರೋಹಿತ್ ಶರ್ಮಾ ಅಲಭ್ಯತೆಯಿಂದಾಗಿ ಮಯಾಂಕ್‌ ಅಗರ್ವಾಲ್‌ ಹಾಗೂ ಕೆ.ಎಲ್‌ ರಾಹುಲ್ ಜೋಡಿಗೆ ಇನಿಂಗ್ಸ್‌ ಆರಂಭಿಸಲು ಅವಕಾಶ ಲಭಿಸಲಿದೆ. ಈ ಟೆಸ್ಟ್‌ ಸರಣಿಯಲ್ಲಿ ನಮಗೆ ಉತ್ತಮ ಆರಂಭ ಪಡೆಯಬೇಕೆಂದರೆ ಇಲ್ಲಿನ ಪರಿಸ್ಥಿತಿಗಳಿಗೆ ಹೊಂದಿಕೊಂಡು ಉತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಬೇಕು. ಈ ನಿಟ್ಟಿನಲ್ಲಿ ನಾವು ಸಾಕಷ್ಟು ಪರಿಶ್ರಮ ಪಡಬೇಕಾದ ಅಗತ್ಯವಿದೆ,” ಎಂದು ವಿರಾಟ್‌ ಕೊಹ್ಲಿ ತಿಳಿಸಿದ್ದರು.

ರೋಹಿತ್‌ ಶರ್ಮಾ ಅಲಭ್ಯತೆಯಿಂದಾಗಿ ಗುಜರಾತ್‌ ತಂಡದ ಪ್ರಿಯಾಂಕ್‌ ಪಾಂಚಲ್‌ಗೆ ಟೆಸ್ಟ್‌ ತಂಡದಲ್ಲಿ ಚೊಚ್ಚಲ ಅವಕಾಶ ನೀಡಲಾಗಿದೆ. ಅಂದಹಾಗೆ ಕಳೆದ ವಾರ ರೋಹಿತ್‌ ಶರ್ಮಾ ಅವರಿಗೆ ಸೀಮಿತ ಓವರ್‌ಗಳ ತಂಡದ ನಾಯಕತ್ವವನ್ನು ಬಿಸಿಸಿಐ ವಹಿಸಿತ್ತು. ರೋಹಿತ್‌ ಶರ್ಮಾ ಸಂಪೂರ್ಣ ಫಿಟ್‌ ಆದ ಬಳಿಕ ಓಡಿಐ ಸರಣಿ ಆಡಲು ತಂಡಕ್ಕೆ ಮರಳಲಿದ್ದಾರೆ.

‘ಒಮ್ಮೆಯೂ ಮಾತನಾಡಲಿಲ್ಲ’ ಓಡಿಐ ನಾಯಕತ್ವ ಕಿತ್ತುಕೊಂಡ ಬಿಸಿಸಿಐ ವಿರುದ್ಧಕೊಹ್ಲಿ ಗರಂ!

ದಕ್ಷಿಣ ಆಫ್ರಿಕಾ ಟೆಸ್ಟ್‌ ಸರಣಿಗೆ ಭಾರತ ತಂಡ: ವಿರಾಟ್‌ ಕೊಹ್ಲಿ(ನಾಯಕ), ಪ್ರಿಯಾಂಕ್‌ ಪಾಂಚಲ್‌, ಕೆ.ಎಲ್‌ ರಾಹುಲ್, ಮಯಾಂಕ್‌ ಅಗರ್ವಾಲ್‌, ಚೇತೇಶ್ವರ್‌ ಪೂಜಾರ, ಅಜಿಂಕ್ಯ ರಹಾನೆ, ರಿಷಭ್‌ ಪಂತ್‌(ವಿ.ಕೀ), ಶ್ರೇಯಸ್‌ ಅಯ್ಯರ್‌, ಹನುಮ ವಿಹಾರಿ, ವೃದ್ದಿಮಾನ್‌ ಸಹಾ(ವಿ.ಕೀ), ಆರ್‌ ಅಶ್ವಿನ್‌, ಜಯಂತ್‌ ಯಾದವ್‌, ಇಶಾಂತ್‌ ಶರ್ಮಾ, ಮೊಹಮ್ಮದ್‌ ಶಮಿ, ಉಮೇಶ್ ಯಾದವ್‌, ಜಸ್‌ಪ್ರಿತ್‌ ಬುಮ್ರಾ, ಶಾರ್ದುಲ್‌ ಠಾಕೂರ್, ಮೊಹಮ್ಮದ್‌ ಸಿರಾಜ್‌.

ದಕ್ಷಿಣ ಆಫ್ರಿಕಾ ವಿರುದ್ಧ ಓಡಿಐ ಸರಣಿ ಆಡುತ್ತೇನೆಂದ ವಿರಾಟ್‌ ಕೊಹ್ಲಿ!

ದಕ್ಷಿಣ ಆಫ್ರಿಕಾ ತಂಡ ಹೀಗಿದೆ
ಡೀನ್‌ ಎಲ್ಗರ್‌ (ನಾಯಕ), ತೆಂಬಾ ಬವೂಮ, ಕ್ವಿಂಟನ್‌ ಡಿ’ಕಾಕ್‌ (ವಿಕೆಟ್‌ಕೀಪರ್‌), ಕಗಿಸೊ ರಬಾಡ, ಸರೆಲ್‌ ಎರ್ವಿ, ಬ್ಯೂರಾನ್‌ ಹೆಂಡ್ರಿಕ್ಸ್‌, ಜಾರ್ಜ್‌ ಲಿಂಡೆ, ಕೇಶವ್‌ ಮಹಾರಾಜ್, ಲುಂಗಿ ಎನ್ಗಿಡಿ, ಏಡೆನ್‌ ಮಾರ್ಕ್ರಮ್, ವಿಯಾನ್‌ ಮುಲ್ಡರ್‌, ಎನ್ರಿಕ್‌ ನೊರ್ಕಿಯ, ಕೀಗನ್‌ ಪೀಟರ್ಸನ್‌, ರಾಸಿ ವ್ಯಾನ್‌ ಡೆರ್‌ ಡುಸೆನ್, ಕೈಲ್‌ ವೆರ್ರೆಯೆನ್, ಮಾರ್ಕೊ ಯೆನ್ಸೆನ್‌, ಗ್ಲೆನ್ಟನ್‌ ಸ್ಟುರ್ಮನ್, ಪ್ರೆನೆಲಾನ್‌ ಸುಬ್ರಾಯೆನ್‌, ಸಿಸಾಂಡ ಮಗಾಲ, ರಯಾನ್‌ ರಿಕೆಲ್ಟನ್‌, ಡುವಾನ್‌ ಓಲಿವರ್‌.

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್‌ ಸರಣಿ ವೇಳಾಪಟ್ಟಿ

ಪ್ರಥಮ ಟೆಸ್ಟ್‌: ಡಿಸೆಂಬರ್‌ 26-30, ಸೆಂಚೂರಿಯನ್‌
ದ್ವಿತೀಯ ಟೆಸ್ಟ್‌: ಜನವರಿ 03-07, ಜೊಹಾನ್ಸ್‌ಬರ್ಗ್‌
ತೃತೀಯ ಟೆಸ್ಟ್‌: ಜನವರಿ 11-15, ಕೇಪ್‌ ಟೌನ್‌



Read more