Karnataka news paper

ಬಸ್‌ ಪ್ರಯಾಣ ದರ ಏರಿಕೆ ಇಲ್ಲ: ಸಾರಿಗೆ ಸಚಿವ ಬಿ.ಶ್ರೀರಾಮುಲು


ಬೆಂಗಳೂರು: ರಾಜ್ಯ ಸಾರಿಗೆ ಸಂಸ್ಥೆಗಳ ಬಸ್‌ ಪ್ರಯಾಣ ದರ ಹೆಚ್ಚಳ ಮಾಡುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ತಿಳಿಸಿದರು.

ಈಗಾಗಲೇ ವೊಲ್ವೊ ಬಸ್‌ ಪ್ರಯಾಣದ ದರವನ್ನು ಇಳಿಕೆ ಮಾಡಲಾಗಿದೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕೋವಿಡ್‌, ಲಾಕ್‌ಡೌನ್‌ ಮತ್ತು ಆರ್ಥಿಕ ಹಿಂಜರಿತದಿಂದಾಗಿ ಬಸ್‌ ಪ್ರಯಾಣದ ದರ ಏರಿಕೆ ಮಾಡುವ ಚಿಂತನೆ ನಡೆದಿತ್ತು.

ಸಾರಿಗೆ ಸಂಸ್ಥೆಗಳ ಮುಷ್ಕರದಲ್ಲಿ ಭಾಗಿಯಾಗಿದ್ದ ನೌಕರರನ್ನು ವಜಾ ಮಾಡಲಾಗಿತ್ತು. ಅವರನ್ನು ಪುನಃ ನೇಮಕ ಮಾಡಿಕೊಳ್ಳಲು ತೀರ್ಮಾನ ಮಾಡಲಾಗಿದೆ. ಇಂದು 100 ನೌಕರರು ಮತ್ತು ನಾಳೆ 200 ನೌಕರರನ್ನು ಮರು ನೇಮಕಾತಿ ಮಾಡಿಕೊಳ್ಳಲಾಗುವುದು. ಈ ತಿಂಗಳೊಳಗೆ ಒಟ್ಟು 700 ನೌಕರರನ್ನು ಮರು ನೇಮಕಾತಿ ಮಾಡಲಿದ್ದೇವೆ ಎಂದು ಹೇಳಿದರು.

ಮುಷ್ಕರದಲ್ಲಿ 1,610 ನೌಕರರು ಭಾಗವಹಿಸಿದ್ದರು. ವಜಾಗೊಂಡಿದ್ದವರನ್ನು ಮರು ನೇಮಕ ಮಾಡಿಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲದಿದ್ದರೂ ನೌಕರರ ಕುಟುಂಬಗಳ ಸಂಕಷ್ಟವನ್ನು ನೋಡಿ ಮರು ನೇಮಕ ಮಾಡಿಕೊಳ್ಳುತ್ತಿದ್ದೇವೆ ಎಂದರು.

‘ನಿಮ್ಮ ಜತೆ ಮುಷ್ಕರ ಮಾಡಿದವರು ಓಡಿ ಹೋಗಿದ್ದಾರೆ. ಇಂದು ಸರ್ಕಾರ ನಿಮ್ಮ ಸಹಾಯಕ್ಕೆ ನಿಂತಿದೆ. ಯಾವುದೇ ಸಮಸ್ಯೆಗಳು ಇದ್ದರೆ ಸರ್ಕಾರದ ಜತೆ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ. ಮುಖ್ಯಮಂತ್ರಿಯ ಸಲಹೆಯ ಮೇರೆಗೆ ಮರು ನೇಮಕ ಮಾಡಿಕೊಳ್ಳುತ್ತಿದ್ದೇವೆ. ಮುಂದೆ ಇಂತಹ ತಪ್ಪುಗಳನ್ನು ಮಾಡಲು ಹೋಗಬೇಡಿ. ಒಂದು ವೇಳೆ ಆ ರೀತಿ ಮಾಡಿದರೆ ನಿಮ್ಮ ನೆರವಿಗೆ ಬರುವುದಿಲ್ಲ. ಮುಂದಿನ ತಿಂಗಳಿಂದ ಸಮರ್ಪಕವಾಗಿ ವೇತನ ಪಾವತಿ ಮಾಡುತ್ತೇವೆ’ ಎಂದು ಶ್ರೀರಾಮುಲು ತಿಳಿಸಿದರು.

ಮುಂದಿನ ದಿನಗಳಲ್ಲಿ ಸಾರಿಗೆ ನೌಕರರು ಮುಷ್ಕರ ಅಥವಾ ಪ್ರತಿಭಟನೆಯಲ್ಲಿ ಪಾಲ್ಗೊಂಡರೆ ಶಾಶ್ವತವಾಗಿ ನೌಕರಿ ಕಳೆದುಕೊಳ್ಳಬೇಕಾಗುತ್ತದೆ ಎಂದೂ ಎಚ್ಚರಿಕೆ ನೀಡಿದರು.



Read more from source

[wpas_products keywords=”deal of the day sale today kitchen”]