The New Indian Express
ಲಖನೌ: ಪಶ್ಚಿಮ ಉತ್ತರ ಪ್ರದೇಶದ 11 ಜಿಲ್ಲೆಗಳ 58 ವಿಧಾನಸಭಾ ಕ್ಷೇತ್ರಗಳಿಗೆ ಗುರುವಾರ ಮೊದಲ ಹಂತದ ಚುನಾವಣೆ ನಡೆಯಲಿದೆ. ಮತದಾನಕ್ಕೂ ಒಂದು ದಿನ ಮುಂಚಿತವಾಗಿ ಕಾಂಗ್ರೆಸ್ ಬುಧವಾರ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಕೃಷಿ ಸಾಲ ಮನ್ನಾ ಸೇರಿದಂತೆ ಹಲವು ಭರವಸೆಗಳನ್ನು ನೀಡಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ತಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆ ಉನ್ನತಿ ವಿಧಾನವನ್ನು ಬಿಡುಗಡೆ ಮಾಡಿದರು. ಅದರಲ್ಲಿ ರೈತರಿಗೆ, ಕೋವಿಡ್ ವಾರಿಯರ್ ಗೆ ಮತ್ತು ಸಣ್ಣ ಉದ್ಯಮಗಳಿಗೆ ಹಲವು ಭರವಸೆಗಳನ್ನು ನೀಡಿದೆ.
ಪ್ರಣಾಳಿಕೆ ಬಿಡುಗಡೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕಾ ಗಾಂಧಿ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪತ್ರಕರ್ತರ ಮೇಲಿನ ಸುಳ್ಳು ಪ್ರಕರಣಗಳನ್ನು ಸಹ ಹಿಂಪಡೆಯಲಾಗುವುದು ಎಂದರು.
ಛತ್ತೀಸ್‌ಗಢದಲ್ಲಿ ತಮ್ಮ ಪಕ್ಷದ ಗೆಲುವಿಗೆ ಕಾರಣವಾದ ಅನೇಕ ವಿಷಯಗಳನ್ನು ಈ ಪ್ರಣಾಳಿಕೆಯಲ್ಲಿ ಸೇರಿಸಲಾಗಿದ್ದು, ಛತ್ತೀಸ್‌ಗಢದಂತೆ ನಮ್ಮ ಸರ್ಕಾರ ರಚನೆಯಾದ ತಕ್ಷಣ ರೈತರ ಸಾಲ ಮನ್ನಾ ಮಾಡಲಾಗುವುದು, ಭತ್ತ ಮತ್ತು ಗೋಧಿಯನ್ನು ಕ್ವಿಂಟಲ್‌ಗೆ 2,500 ರೂ. ಮತ್ತು ಕಬ್ಬನ್ನು 400 ರೂ. ದರದಲ್ಲಿ ಖರೀದಿಸಲಾಗುವುದು. ವಿದ್ಯುತ್ ಬಿಲ್ ಅರ್ಧದಷ್ಟು ಮತ್ತು ಸಾಂಕ್ರಾಮಿಕ ಅವಧಿಯ ಬಾಕಿ ಬಿಲ್ ಮನ್ನಾ ಮಾಡಲಾಗುವುದು. ಇದಲ್ಲದೆ ಬೆಳೆ ಕಳೆದುಕೊಂಡ ರೈತರಿಗೆ 3,000 ರೂಪಾಯಿ ಪರಿಹಾರ ನೀಡಲಾಗುವುದು ಎಂದು ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ಪ್ರಣಾಳಿಕೆಯ ಅಂಶಗಳನ್ನು ವಿವರಿಸಿದರು.
ಉದ್ಯೋಗದಲ್ಲಿ ಮಹಿಳೆಯರಿಗೆ ಶೇ. 40 ರಷ್ಟು ಮೀಸಲಾತಿ ಮತ್ತು ಕಾಲೇಜುಗಳಿಗೆ ಹೋಗುವ ಹುಡುಗಿಯರಿಗೆ ಸ್ಕೂಟಿ ನೀಡುವ ಭರವಸೆ ನೀಡಿದೆ. ಮತ್ತೊಂದೆಡೆ ಯುವ ಪ್ರಣಾಳಿಕೆಯಲ್ಲಿ 20 ಲಕ್ಷ ಸರ್ಕಾರಿ ಉದ್ಯೋಗಗಳನ್ನು ನೀಡುವ ಭರವಸೆ ನೀಡಲಾಗಿದೆ.
Read more
[wpas_products keywords=”deal of the day”]