Karnataka news paper

ಲಖಿಂಪುರ ಖೇರಿ ಘಟನೆ: ಚುನಾವಣೆ ಸಂದರ್ಭದಲ್ಲಿಯೇ ಕೇಂದ್ರ ಸಚಿವ ಅಜಯ್ ಮಿಶ್ರಾ ಮಗನಿಗೆ ಜಾಮೀನು


ಅಲಹಾಬಾದ್‌: ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಕಳೆದ ವರ್ಷ ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆ ವೇಳೆ ರೈತರ ಮೇಲೆ ಕಾರು ಹರಿಸಿ ಕೊಂದ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವ ಅಜಯ್ ಮಿಶ್ರಾ ತೇನಿ ಅವರ ಮಗ ಆಶೀಶ್ ಮಿಶ್ರಾ ಅವರಿಗೆ ಜಾಮೀನು ದೊರಕಿದೆ.

ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠವು ಮುಖ್ಯ ಆರೋಪಿ ಆಶೀಶ್ ಮಿಶ್ರಾ ಅವರಿಗೆ ಜಾಮೀನು ಮಂಜೂರು ಮಾಡಿದೆ ಎಂದು ಅವರ ಪರ ವಕೀಲರು ತಿಳಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗಳು ಆರಂಭವಾಗಿರುವ ಸಂದರ್ಭದಲ್ಲಿಯೇ ಆಶೀಶ್ ಮಿಶ್ರಾಗೆ ಜಾಮೀನು ದೊರಕಿದೆ.

ಕಳೆದ ವರ್ಷದ ಅಕ್ಟೋಬರ್ 3ರಂದು ಲಖಿಂಪುರ ಖೇರಿಯಲ್ಲಿ ಮೂರು ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಎಸ್‌ಯುವಿ ವಾಹನವೊಂದು ಹರಿದು ನಾಲ್ವರು ರೈತರು ಮತ್ತು ಒಬ್ಬ ಪತ್ರಕರ್ತನ ಸಾವಿಗೆ ಕಾರಣವಾಗಿತ್ತು. ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಮಗ ಆಶೀಶ್ ಮಿಶ್ರಾ ಈ ಕಾರು ಚಲಾಯಿಸುತ್ತಿದ್ದರು ಎಂದು ಆರೋಪಿಸಲಾಗಿತ್ತು. ಅವರನ್ನು ಬಳಿಕ ಬಂಧಿಸಲಾಗಿತ್ತು.

ವೇಗವಾಗಿ ಬಂದ ವಾಹನವು ಕೊಂಚವೂ ವೇಗ ತಗ್ಗಿಸದೆ ರೈತರ ಮೇಲೆ ಹರಿದಿತ್ತು. ಆ ಘಟನೆ ನಂತರ ಲಖಿಂಪುರ ಖೇರಿಯಲ್ಲಿ ವ್ಯಾಪಕ ಹಿಂಸಾಚಾರ ನಡೆದಿತ್ತು. ಒಟ್ಟು ಎಂಟು ಮಂದಿ ಅಂದು ಮೃತಪಟ್ಟಿದ್ದರು. ಹಿಂಸಾಚಾರದಲ್ಲಿ ಬಿಜೆಪಿಯ ಇಬ್ಬರು ಕಾರ್ಯಕರ್ತರು ಸೇರಿ ಮೂವರು ಬಲಿಯಾಗಿದ್ದರು. ವ್ಯಾಪಕ ಆಕ್ರೋಶದ ಬಳಿಕ ಆಶೀಶ್ ಅವರನ್ನು ಬಂಧಿಸಲಾಗಿತ್ತು. ಅಜಯ್ ಮಿಶ್ರಾ ಅವರನ್ನು ಸಚಿವ ಸ್ಥಾನದಿಂದ ಕೈಬಿಡಬೇಕು ಎಂಬ ಆಗ್ರಹಗಳು ಕೇಳಿಬಂದಿದ್ದರೂ ನರೇಂದ್ರ ಮೋದಿ ಸಂಪುಟದಲ್ಲಿ ಅವರು ಮುಂದುವರಿದಿದ್ದಾರೆ.

ಲಖಿಂಪುರ ಖೇರಿ ಹಿಂಸಾಚಾರ ಬಿಜೆಪಿಗೆ ಮುಜುಗರ ಉಂಟುಮಾಡಿತ್ತು. ಆದರೆ ಸಂಸದ ವರುಣ್ ಗಾಂಧಿ ಹೊರತುಪಡಿಸಿ ಬಿಜೆಪಿಯ ಯಾವುದೇ ಸದಸ್ಯರು ಈ ಬಗ್ಗೆ ಮಾತನಾಡಿರಲಿಲ್ಲ. ಈ ಘಟನೆ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಉಂಟುಮಾಡಲಿದೆ ಎಂದು ವಿಶ್ಲೇಷಿಸಲಾಗಿದೆ.

ಖಾಸಗಿ ಪತ್ರಿಕೆಯ ಸಂದರ್ಶನದಲ್ಲಿ ಲಖಿಂಪುರ ಖೇರಿ ಹಿಂಸಾಚಾರದ ಬಗ್ಗೆ ಮೌನ ಮುರಿದಿದ್ದ ಪ್ರಧಾನಿ ನರೇಂದ್ರ ಮೋದಿ, ಈ ಪ್ರಕರಣದ ವಿಚಾರಣೆಯಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಪಾರದರ್ಶಕವಾಗಿ ಕೆಲಸ ಮಾಡುತ್ತಿದೆ ಎಂದು ಸಮರ್ಥಿಸಿಕೊಂಡಿದ್ದರು.



Read more

[wpas_products keywords=”deal of the day sale today offer all”]