Karnataka news paper

ಭೂಮಾಪನ ಶುಲ್ಕ ಏರಿಸಿದ ಸರ್ಕಾರ: ಫೆಬ್ರುವರಿ 1ರಿಂದಲೇ ಪರಿಷ್ಕೃತ ದರ ಜಾರಿ


ಬೆಂಗಳೂರು: ಆಡಳಿತಾತ್ಮಕ ವೆಚ್ಚ, ನಿರ್ವಹಣಾ ವೆಚ್ಚ ಮತ್ತು ಖಾಸಗಿ ಭೂಮಾಪಕರ ಸೇವಾ ಶುಲ್ಕದ ಹೆಚ್ಚಳದ ಹೊರೆಯನ್ನು ಜಮೀನುಗಳ ಮಾಲೀ ಕರಿಗೆ ವರ್ಗಾಯಿಸಿರುವ ಕಂದಾಯ ಇಲಾಖೆ, ಭೂಮಾಪನ ಶುಲ್ಕದಲ್ಲಿ ಭಾರಿ ಏರಿಕೆ ಮಾಡಿದೆ. ಫೆಬ್ರುವರಿ 1ರಿಂದಲೇ ಪರಿಷ್ಕೃತ ದರ ಜಾರಿಯಾಗಿದ್ದು, ಶುಲ್ಕದಲ್ಲಿ ಹತ್ತು ಪಟ್ಟಿನಿಂದ ನೂರು ಪಟ್ಟಿನಷ್ಟು ಏರಿಕೆ ಮಾಡಲಾಗಿದೆ.

11–ಇ ನಕ್ಷೆ, ಭೂ ಪರಿವರ್ತನೆ ಪೂರ್ವ ನಕ್ಷೆ ಮತ್ತು ತತ್ಕಾಲ್‌ ಪೋಡಿ ಅರ್ಜಿಗಳ ಶುಲ್ಕದಲ್ಲಿ ಹೆಚ್ಚಳ ಮಾಡಿ 2021ರ ಡಿಸೆಂಬರ್‌ 23ರಂದು ಆದೇಶ ಹೊರಡಿಸಲಾಗಿತ್ತು. ಹದ್ದುಬಸ್ತು ಪ್ರಕ್ರಿಯೆಯ ಭೂಮಾಪನ ಶುಲ್ಕದಲ್ಲೂ ಹೆಚ್ಚಳ ಮಾಡಿ 2022ರ ಜನವರಿ 19ರಂದು ಆದೇಶ ಹೊರಡಿಸಲಾಗಿದೆ.

11– ಇ ನಕ್ಷೆ, ಭೂ ಪರಿವರ್ತನೆ ಪೂರ್ವ ನಕ್ಷೆ ಮತ್ತು ತತ್ಕಾಲ್‌ ಪೋಡಿ ಭೂಮಾಪನ ಶುಲ್ಕವನ್ನು 2014ರಲ್ಲಿ ಪರಿಷ್ಕರಿಸಲಾಗಿತ್ತು. ಗ್ರಾಮೀಣ ಪ್ರದೇಶದಲ್ಲಿ ಎರಡು ಎಕರೆಗೆ ₹ 1,200 ಮತ್ತು ನಂತರದ ಪ್ರತಿ ಎಕರೆಗೆ ತಲಾ ₹ 100ರಂತೆ ಗರಿಷ್ಠ ₹ 2,500 ನಿಗದಿಪಡಿಸಲಾಗಿತ್ತು. ನಗರ ಪ್ರದೇಶದಲ್ಲಿ ಒಂದು ಸರ್ವೆ ನಂಬರ್‌ಗೆ ₹ 1,200 ನಂತರದ ಪ್ರತಿ ಹೆಚ್ಚುವರಿ ಸರ್ವೆ ನಂಬರ್‌ಗೆ ತಲಾ ₹ 200 ಶುಲ್ಕ ನಿಗದಿಪಡಿಸಲಾಗಿತ್ತು. ಈ ಶುಲ್ಕವನ್ನು ಪರಿಷ್ಕರಣೆ ಮಾಡಿರುವ ಕಂದಾಯ ಇಲಾಖೆ, ಎರಡು ಎಕರೆಗೆ ₹ 2,000 ಹಾಗೂ ನಂತರದ ಪ್ರತಿ ಎಕರೆಗೆ ₹ 400ರಂತೆ ಗರಿಷ್ಠ 4,000ದವರೆಗೂ ಶುಲ್ಕ ವಿಧಿಸಲು ಅವಕಾಶ ಕಲ್ಪಿಸಿದೆ. ನಗರ ಪ್ರದೇಶದಲ್ಲಿ ಎರಡು ಎಕರೆ ವರೆಗೂ ₹ 2,500 ಮತ್ತು ನಂತರದ ಪ್ರತಿ ಎಕರೆಗೆ ₹ 1,000ದಂತೆ ಗರಿಷ್ಠ ₹ 5,000ದವರೆಗೂ ಶುಲ್ಕ ವಿಧಿಸಲು ಅನುಮತಿ ನೀಡಲಾಗಿದೆ.

ಶುಲ್ಕ ಏರಿಕೆ ಹಿಂಪಡೆಯಲು ಆಗ್ರಹ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕಂದಾಯ ಸಚಿವ ಆರ್‌. ಅಶೋಕ ಅವರಿಗೆ ಪತ್ರ ಬರೆದಿರುವ ವಿಧಾನ ಪರಿಷತ್‌ ಕಾಂಗ್ರೆಸ್‌ ಸದಸ್ಯ ದಿನೇಶ್‌ ಗೂಳಿಗೌಡ, ಭೂಮಾಪನ ಶುಲ್ಕದ ದರ ಏರಿಕೆ ಹಿಂಪಡೆಯುವಂತೆ ಆಗ್ರಹಿಸಿದ್ದಾರೆ. ‘ಕೋವಿಡ್‌ನಿಂದ ರೈತರು ಸಂಕಷ್ಟದಲ್ಲಿದ್ದಾರೆ. ಈ ಸ್ಥಿತಿಯಲ್ಲಿ ಭೂಮಾಪನ ಶುಲ್ಕವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿರುವುದು ಸರಿಯಲ್ಲ. ರೈತರು ಮತ್ತು ಸಾಮಾನ್ಯ ಜನರನ್ನು ಸಂಕಷ್ಟಕ್ಕೆ ಸಿಲುಕಿಸುವ ಈ ಆದೇಶವನ್ನು ತಕ್ಷಣ ರದ್ದು ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.

ಹದ್ದುಬಸ್ತು ಭೂಮಾಪನದ ಪರಿಷ್ಕೃತ ಅರ್ಜಿ ಶುಲ್ಕ

ಗ್ರಾಮೀಣ ಪ್ರದೇಶ

2 ಎಕರೆವರೆಗೆ– ₹ 1,500‌

2 ಎಕರೆಗಿಂತ ಹೆಚ್ಚು– ಪ್ರತಿ ಎಕರೆಗೆ ₹ 300ರಂತೆ ಗರಿಷ್ಠ ₹3,000

ನಗರ ಪ್ರದೇಶ

2 ಎಕರೆವರೆಗೆ– ₹ 2,000

2 ಎಕರೆಗಿಂತ ಹೆಚ್ಚು– ಪ್ರತಿ ಎಕರೆಗೆ ₹ 400ರಂತೆ ಗರಿಷ್ಠ ₹ 4,000

 



Read more from source

[wpas_products keywords=”deal of the day sale today kitchen”]