ಇದರಿಂದ ಸಹಜವಾಗಿಯೇ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ನಿರಾಸೆಯಾಗಿದೆ. ಆದರೆ, ಮಂತ್ರಿ ಸ್ಥಾನ ಕಳೆದುಕೊಳ್ಳುವ ಆತಂಕದಲ್ಲಿದ್ದವರಿಗೆ ಸದ್ಯಕ್ಕೆ ನಿರಾಳವಾಗುವಂತಾಗಿದೆ. ಸೋಮವಾರವೇ ದಿಲ್ಲಿಗೆ ಹೋಗಿದ್ದ ಸಿಎಂ ಬೊಮ್ಮಾಯಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು. ಮಂಗಳವಾರವೂ ರಾಜನಾಥ್ ಸಿಂಗ್ ಸೇರಿದಂತೆ ಕೇಂದ್ರದ ನಾನಾ ಸಚಿವರನ್ನು ಭೇಟಿಯಾದರು. ಇದರ ನಡುವೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಅವರೊಂದಿಗೆ ಫೋನ್ ಮೂಲಕ ಮಾತನಾಡಿದರು.
‘ಪಂಚರಾಜ್ಯಗಳ ಚುನಾವಣೆ ಇರುವುದರಿಂದ ಕರ್ನಾಟಕದಲ್ಲಿ ಸದ್ಯಕ್ಕೆ ಸಂಪುಟ ವಿಸ್ತರಣೆ ಬೇಡ. ಉತ್ತರ ಪ್ರದೇಶ ಚುನಾವಣೆಗೆ ತೆರೆ ಬೀಳುತ್ತಿದ್ದಂತೆಯೇ ಈ ಕುರಿತು ಮಾತುಕತೆ ನಡೆಸಬಹುದು’ ಎಂದು ವರಿಷ್ಠರು ಸೂಚಿಸಿದರು ಎನ್ನಲಾಗಿದೆ. ಹಾಗಾಗಿ ಸಿಎಂ ಬೊಮ್ಮಾಯಿ ಕೂಡ ಮಂಗಳವಾರ ರಾತ್ರಿ ಬೆಂಗಳೂರಿಗೆ ವಾಪಸಾಗಿದ್ದಾರೆ. ಸಿಎಂ ಅಧ್ಯಕ್ಷತೆಯಲ್ಲಿ ಬುಧವಾರ ಸಂಪುಟ ಸಭೆಯೂ ನಡೆಯಲಿದೆ.
ಹಿಜಾಬ್ ಚರ್ಚೆ
ರಾಜ್ಯದಲ್ಲಿ ಹಿಜಾಬ್ ವಿವಾದ ವ್ಯಾಪಕ ಸ್ವರೂಪ ಪಡೆದುಕೊಂಡಿರುವುದರಿಂದ ಈ ಬಗ್ಗೆಯೂ ವರಿಷ್ಠರು ಮಾಹಿತಿ ಪಡೆದುಕೊಂಡರು. ಈ ಸಮಸ್ಯೆಯನ್ನು ಸೌಹಾರ್ದವಾಗಿ ಇತ್ಯರ್ಥಪಡಿಸಲು ಸೂಚಿಸಿದರು. ಈ ಸಂಬಂಧ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವುದನ್ನು ಗಮನಕ್ಕೆ ತಂದ ಸಿಎಂ ಬೊಮ್ಮಾಯಿ, ಕಾನೂನು ಸುವ್ಯವಸ್ಥೆ ಕಾಪಾಡಲು ಸರಕಾರ ಕೈಗೊಂಡ ಕ್ರಮದ ಬಗ್ಗೆಯೂ ವಿವರ ಒದಗಿಸಿದರು ಎಂದು ತಿಳಿದು ಬಂದಿದೆ.
ಸಂಪುಟ ವಿಚಾರದಲ್ಲಿ ನಡ್ಡಾ ಅವರೊಂದಿಗೆ ಮಾತನಾಡಲು ಅಮಿತ್ ಶಾ ಸೂಚಿಸಿದ್ದರು. ನಡ್ಡಾ ಭೇಟಿ ಸಾಧ್ಯವಾಗದಿದ್ದರೂ ಫೋನ್‌ನಲ್ಲಿ ಅವರೊಂದಿಗೆ ಮಾತನಾಡಿದ್ದೇನೆ. 2 ದಿನ ಬಿಟ್ಟು ಮಾತನಾಡುವುದಾಗಿ ಅವರು ತಿಳಿಸಿದ್ದಾರೆ.
ಬಸವರಾಜ ಬೊಮ್ಮಾಯಿ, ಸಿಎಂ
ಒಳ್ಳೆಯ ಬಜೆಟ್ ಕೊಡಿ
ಮುಂದಿನ ವರ್ಷ ಚುನಾವಣೆ ಇರುವುದರಿಂದ ಜನಪರ ಹಾಗೂ ಅಭಿವೃದ್ಧಿ ಪರವಾದ ಬಜೆಟ್ ಮಂಡಿಸಬೇಕು. ಅದು ಪಕ್ಷ ಮತ್ತು ಸರಕಾರದ ವರ್ಚಸ್ಸು ಹೆಚ್ಚಿಸುವಂತಿರಬೇಕು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನೀಡಿದ ಪ್ರಣಾಳಿಕೆ ಭರವಸೆಯನ್ನು ಪೂರ್ಣ ಮಾಡುವ ನಿಟ್ಟಿನಲ್ಲಿ ಆಯವ್ಯಯ ರೂಪಿಸಬೇಕು ಎಂದು ವರಿಷ್ಠರು ಸಿಎಂ ಅವರಿಗೆ ಸಲಹೆ ನೀಡಿದ್ದಾರೆ.
ಇದಕ್ಕೆ ಪುಷ್ಟಿ ನೀಡುವಂತೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಬೊಮ್ಮಾಯಿ ‘ಬಜೆಟ್ ಸೇರಿದಂತೆ ರಾಜ್ಯ ಸರಕಾರದ ಕಾರ್ಯಕ್ರಮಗಳೆಲ್ಲವೂ ಸಕಾಲದಲ್ಲಿ ಜನರಿಗೆ ತಲುಪಬೇಕು ಎಂದು ಅಮಿತ್ ಶಾ ಅವರ ಭೇಟಿ ಸಂದರ್ಭದಲ್ಲಿ ಹೇಳಿದ್ದಾರೆ’ ಎಂದಿದ್ದಾರೆ.
ಈ ನಡುವೆ ಬಿಬಿಎಂಪಿ, ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಗೆ ತಯಾರಿ ಮಾಡಿಕೊಳ್ಳುವುದಕ್ಕೂ ಕೇಂದ್ರ ನಾಯಕರು ಒಪ್ಪಿಗೆ ನೀಡಿದ್ದಾರೆ.
ಹೈಕಮಾಂಡ್ ಮುಂದೂಡಿದ್ದೇಕೆ?
ಚುನಾವಣೆ ದೃಷ್ಟಿ ಇಟ್ಟುಕೊಂಡು ರಾಜ್ಯ ಸಂಪುಟಕ್ಕೆ ಮೇಜರ್ ಸರ್ಜರಿ ಮಾಡುವುದು ಹೈಕಮಾಂಡ್ ಆಲೋಚನೆ. ಪಂಚ ರಾಜ್ಯಗಳ ಚುನಾವಣೆ ಸಂದರ್ಭದಲ್ಲಿ ಈ ಪ್ರಕ್ರಿಯೆ ಸಂಬಂಧ ವಿಸ್ತೃತ ಸಮಾಲೋಚನೆಗೆ ಸಮಯವಿಲ್ಲ. ಒಂದು ವೇಳೆ ಸಂಪುಟದಲ್ಲಿ ಖಾಲಿಯಿರುವ ಸ್ಥಾನ ಭರ್ತಿ ಮಾಡಲು ಒಪ್ಪಿಗೆ ಕೊಟ್ಟರೂ ಅದರಿಂದ ಉಂಟಾಗುವ ಅಸಮಾಧಾನ ತಣಿಸುವುದು ಸವಾಲಾಗುತ್ತದೆ. ಬೇರೆ ರಾಜ್ಯಗಳಲ್ಲಿ ಚುನಾವಣೆ ಇರುವಾಗ ಇಂಥ ಉಸಾಬರಿ ಬೇಡ ಎನ್ನುವುದು ಹೈಕಮಾಂಡ್ ನಿಲುವಾಗಿದೆ.
Read more
[wpas_products keywords=”deal of the day sale today offer all”]