Karnataka news paper

ಹಿಜಾಬ್- ಕೇಸರಿ ಸಮರ ತಾರಕಕ್ಕೆ: ಹರಿಹರದಲ್ಲಿ ಪೊಲೀಸರಿಂದ ಲಾಠಿ ಚಾರ್ಜ್, ಗಾಳಿಯಲ್ಲಿ ಗುಂಡು!


ದಾವಣಗೆರೆ: ಬೆಣ್ಣೆನಗರಿಯಲ್ಲಿಯೂ ಹಿಜಾಬ್ ಹಾಗೂ ಕೇಸರಿ ಜಟಾಪಟಿ ಜೋರಾಗುತ್ತಿದೆ. ಕಳೆದ ಎರಡು ದಿನಗಳ ಹಿಂದೆಯಷ್ಟೇ ದಾವಣಗೆರೆಗೂ ಕಾಲಿಟ್ಟಿದ್ದ ಈ ಸಮರ ಈಗ ತಾಲೂಕು ಮಟ್ಟದಲ್ಲಿಯೂ ಸದ್ದು ಮಾಡುತ್ತಿದೆ. ಹರಿಹರದ ಸರ್ಕಾರಿ ಪದವಿ ಕಾಲೇಜು ಅಕ್ಷರಕ್ಷಃ ಉದ್ವಿಗ್ನಗೊಂಡಿತ್ತು. ಎರಡು ಗುಂಪುಗಳ ನಡುವೆ ನಡೆದ ಜಟಾಪಟಿ ವಿಕೋಪಕ್ಕೆ ತಿರುಗಿತು. ಇದರಿಂದಾಗಿ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಾಠಿ ಚಾರ್ಜ್, ಗಾಳಿಯಲ್ಲಿ ಗುಂಡು, ಅಶ್ರುವಾಯು ಪ್ರಯೋಗ ಮಾಡುವಂತಾಯಿತು.

ಹರಿಹರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಬೆಳಿಗ್ಗೆ ಹಿಜಾಬು ಧರಿಸಿ ವಿದ್ಯಾರ್ಥಿನಿಯರು ಆಗಮಿಸಿದ್ದರು. ತರಗತಿಯೊಳಗೆ ಹೋದರು. ಈ ವೇಳೆ ವಿದ್ಯಾರ್ಥಿಗಳ ಗುಂಪೊಂದು ಕೇಸರಿ ಶಾಲು ಧರಿಸಿ ಬಂತು. ತರಗತಿಗೆ ಹೋಗಲು ಮುಂದಾದಾಗ ಮಾತಿನ ಚಕಮಕಿ ನಡೆಯಿತು. ಬುರ್ಖಾ ಹಾಗೂ ಹಿಜಾಬು ಧರಿಸಿ ಬಂದಿದ್ದ ವಿದ್ಯಾರ್ಥಿನಿಯರ ಪೋಷಕರು, ಸಹೋದರರೂ ಸಹ ಕಾಲೇಜಿಗೆ ಆಗಮಿಸಿದ್ದರು. ಈ ವೇಳೆ ಕೇಸರಿ ಶಾಲು ಧರಿಸಿದ್ದ ವಿದ್ಯಾರ್ಥಿಗಳ ಜೊತೆ ವಾಗ್ವಾದ ನಡೆಯಿತು.

ಮೊದಲಿನಿಂದಲೂ ಹಿಜಾಬು ಧರಿಸಿ ಬರುತ್ತಿದ್ದರೆ ಯಾವುದೇ ಆಕ್ಷೇಪ ಇರಲಿಲ್ಲ. ಈಗ ಯಾಕೆ ಎಂದು ಪ್ರಶ್ನಿಸಲಾಯಿತು. ಇದಕ್ಕೆ ಪ್ರತಿಯಾಗಿ ಹಿಜಾಬು ತೆಗೆದು ತರಗತಿಗೆ ಬಂದರೆ ನಾವು ಕೇಸರಿ ಶಾಲು ಬಿಟ್ಟು ಬರುತ್ತೇವೆ. ಇಲ್ಲದಿದ್ದರೆ ನಾವು ಕೇಸರಿ ಶಾಲು ಧರಿಸಿ ತರಗತಿಯಲ್ಲಿ ಕೂರುತ್ತೇವೆ ಎಂದು ಪಟ್ಟು ಹಿಡಿದ ಪರಿಣಾಮ ಪರಿಸ್ಥಿತಿ ಉದ್ವಿಗ್ನಗೊಂಡಿತು. ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಸಾಕಷ್ಟ ಕಷ್ಟಪಟ್ಟರು. ಎರಡೂ ಗುಂಪಿನವರನ್ನು ಸಮಾಧಾನಪಡಿಸಲು ಯತ್ನಿಸಿದರು. ಪರಿಸ್ಥಿತಿ ಕೈ ಮೀರಿ ಹೋಗುತ್ತಿರುವುದನ್ನು ಅರಿತ ಹರಿಹರ ಪೊಲೀಸರು ವಿದ್ಯಾರ್ಥಿಗಳಿಗೆ ಎಷ್ಟೇ ಮನವಿ ಮಾಡಿದರೂ ಕ್ಯಾರೇ ಎನ್ನಲಿಲ್ಲ.

ಉಡುಪಿ MGM ಕಾಲೇಜಿನಲ್ಲಿ ಹಿಜಾಬ್-ಕೇಸರಿ ಸಮರ : ಮುಂದಿನ ಆದೇಶದವರೆಗೆ ರಜೆ ಘೋಷಣೆ
ಈ ವೇಳೆ ಪೊಲೀಸರು ವಿದ್ಯಾರ್ಥಿಗಳಿಗೆ ಲಾಠಿ ರುಚಿ ತೋರಿಸಿದರು. ಆ ಮೇಲೆ ವಿದ್ಯಾರ್ಥಿಗಳು ಸಹ ಸ್ಥಳದಿಂದ ಓಡಿ ಹೋದರು. ಈ ವೇಳೆ ಪೊಲೀಸರ ಮೇಲೆಯೇ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದರು. ಆಗ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು. ನೆಲಕ್ಕೆ ಗುಂಡು ಹೊಡೆದು ವಿದ್ಯಾರ್ಥಿಗಳು ಅಲ್ಲಿಂದ ಹೋಗುವಂತೆ ಮಾಡಲು ಎಚ್ಚರಿಕೆ ನೀಡಿದರು. ಇದಕ್ಕೂ ಬಗ್ಗದಿದ್ದಾಗ ಅಶ್ರುವಾಯು ಸಿಡಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತರಬೇಕಾಯಿತು.

ಘಟನೆಯಲ್ಲಿ ಬೈಕ್, ಕಾರು ಸೇರಿದಂತೆ ಹಲವು ವಾಹನಗಳು ಜಖಂಗೊಂಡಿವೆ. ಮಾತ್ರವಲ್ಲ, ಪೊಲೀಸರು ಅಶ್ರುವಾಯು ಸಿಡಿಸಿದ್ದು, ಪರಿಸ್ಥಿತಿ ತಹಬದಿಗೆ ತರಲು ಹರಸಾಹಸಪಟ್ಟ ಘಟನೆ ನಡೆದಿದೆ. ಬೈಕ್ ಗಳು ಕೆಳಗೆ ಬಿದ್ದು ಹಾನಿಗೀಡಾದರೆ, ಕಾರಿನ ಗಾಜು ಪೀಸ್ ಪೀಸ್ ಆಗಿತ್ತು. ರಸ್ತೆಗಳಲ್ಲಿ ನಿಂತುಕೊಂಡು ಕಲ್ಲು ತೂರುತ್ತಿದ್ದರಿಂದಾಗಿ ಸ್ಥಳದಲ್ಲಿ ಮತ್ತಷ್ಟು ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಆಗಿತ್ತು. ಇದಕ್ಕೂ ಮುನ್ನ ಸ್ಥಳಕ್ಕೆ ಹರಿಹರ ಶಾಸಕ ಎಸ್. ರಾಮಪ್ಪ ಭೇಟಿ ನೀಡಿ ಪರಿಸ್ಥಿತಿ ಪರಿಶೀಲನೆ ನಡೆಸಿದರು.

ಎರಡು ಗುಂಪುಗಳ ಜೊತೆ ಮಾತುಕತೆ ನಡೆಸಿದರೂ ಮಾತು ಕೇಳಲೇ ಇಲ್ಲ. ಸಮವಸ್ತ್ರ ಧರಿಸಿ ತರಗತಿಗಳಿಗೆ ಹಾಜರಾಗಿ. ನಿಮ್ಮ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ. ಕೇಸರಿ ಶಾಲು ಧರಿಸಿ ಬರುವುದು, ಹಿಜಾಬ್ ಧರಿಸುವುದಕ್ಕೆ ವಿರೋಧ ವ್ಯಕ್ತಪಡಿಸುವುದು ಸೇರಿದಂತೆ ರಾಜ್ಯ ಸರ್ಕಾರಹಾಗೂ ಕೋರ್ಟ್ ನಿರ್ಧಾರ ಮಾಡುತ್ತದೆ. ಓದಿನ ಬಗ್ಗೆ ಗಮನ ಕೊಡಿ. ಪ್ರತಿಭಟನೆ ಕೈಬಿಟ್ಟು ತರಗತಿಗಳಿಗೆ ಹಾಜರಾಗಿ ಎಂದು ಸಲಹೆ ನೀಡಿದರೂ ವಿದ್ಯಾರ್ಥಿಗಳು ಮಾತ್ರ ಕ್ಯಾರೇ ಎನ್ನಲಿಲ್ಲ.

ವಿಜಯಪುರದಲ್ಲಿ ಮುಂದುವರೆದ ಹಿಜಾಬ್, ಕೇಸರಿ ಶಾಲ್ ಸಮರ : ನೀಲಿ ಶಾಲ್ ಹಾಕಿ ವಿದ್ಯಾರ್ಥಿಗಳ ಎಂಟ್ರಿ
ಸ್ಥಳದಲ್ಲಿ ಈಗಲೂ ಬೂದಿ ಮುಚ್ಚಿದ ಕೆಂಡದಂತಿದ್ದು, ಪೊಲೀಸರು ಸರ್ಪಗಾವಲು ಹಾಕಿದ್ದಾರೆ. ಯಾವುದೇ ಅನಾಹುತ ಸಂಭವಿಸಿದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ತೋಟಿಗೆ ಬಂದಿಲ್ಲ.‌ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಪರಿಸ್ಥಿತಿ‌ ನಿಯಂತ್ರಿಸಲು ಹರಸಾಹಸಪಡುತ್ತಿದ್ದಾರೆ.

ಇನ್ನು ಉದ್ವಿಗ್ನ ಪರಿಸ್ಥಿತಿ ಇರುವುದು ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಎಸ್ಪಿ ರಿಷ್ಯಂತ್ ಅವರು ಭೇಟಿ ನೀಡಿ ಪರಿಸ್ಥಿತಿ ತಹಬದಿಗೆ ತರುವಲ್ಲಿ ಯಶಸ್ವಿಯಾದರು. ಆದರೂ ಹರಿಹರ ಬೂದಿ ಮುಚ್ಚಿದ ಕೆಂಡಂದಂತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಎರಡು ದಿನಗಳ ಕಾಲ 144 ಸೆಕ್ಷನ್ ಜಾರಿಗೊಳಿಸಿ ಎಸ್ಪಿ ಆದೇಶಿಸಿದ್ದಾರೆ.



Read more

[wpas_products keywords=”deal of the day sale today offer all”]