Karnataka news paper

ಬ್ಯಾಟಿಂಗ್‌ ವೈಫಲ್ಯಕ್ಕೆ ದುಬಾರಿ ಬೆಲೆ ತೆತ್ತ ಇಂಗ್ಲೆಂಡ್‌, ಆಸ್ಟ್ರೇಲಿಯಾ ಶುಭಾರಂಭ!



ಬ್ರಿಸ್ಬೇನ್‌: ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಎರಡರಲ್ಲೂ ಸಂಘಟಿತ ಪ್ರದರ್ಶನ ತೋರಿದ ಆಸ್ಟ್ರೇಲಿಯಾ ತಂಡ ಆಶಷ್‌ ಟೆಸ್ಟ್‌ ಸರಣಿಯ ಆರಂಭಿಕ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್‌ ವಿರುದ್ಧ ಇನ್ನೂ ಒಂದು ದಿನ ಬಾಕಿ ಇರುವಾಗಲೇ 9 ವಿಕೆಟ್‌ ಭರ್ಜರಿ ಗೆಲುವು ಪಡೆಯಿತು.

ಇಲ್ಲಿನ ದಿ ಗಬ್ಬಾ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ತಂಡದ ಗೆಲುವಿನಲ್ಲಿ ನೇಥನ್‌ ಲಯಾನ್‌, ನಾಯಕ ಪ್ಯಾಟ್‌ ಕಮಿನ್ಸ್‌, ಡೇವಿಡ್‌ ವಾರ್ನರ್‌ ಹಾಗೂ ಟ್ರಾವಿಸ್‌ ಹೆಡ್‌ ಮಹತ್ತರ ಪಾತ್ರವಹಿಸಿದರು. ಈ ಪಂದ್ಯದ ಗೆಲುವಿನೊಂದಿಗೆ ಆತಿಥೇಯ ಆಸ್ಟ್ರೇಲಿಯಾ ತಂಡ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು.

ಸೋಮವಾರ ಇಂಗ್ಲೆಂಡ್‌ ನೀಡಿದ್ದ 20 ರನ್‌ ಗುರಿ ಹಿಂಬಾಲಿಸಿದ್ದ ಆಸ್ಟ್ರೇಲಿಯಾ ತಂಡ 5.1 ಓವರ್‌ಗಳಿಗೆ ಒಂದು ವಿಕೆಟ್‌ ನಷ್ಟಕ್ಕೆ ಗೆಲುವಿನ ದಡ ಸೇರಿತು. ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ನಾಯಕ ಪ್ಯಾಟ್‌ ಕಮಿನ್ಸ್‌ 5 ವಿಕೆಟ್‌ ಸಾಧನೆ ಮಾಡಿದ್ದರೆ, ದ್ವಿತೀಯ ಇನಿಂಗ್ಸ್‌ನಲ್ಲಿ ಹಿರಿಯ ಆಫ್‌ ಸ್ಪಿನ್ನರ್‌ ನೇಥನ್‌ ಲಯಾನ್‌ 4 ವಿಕೆಟ್‌ ಕಬಳಿಸಿದರು. ಇನ್ನು ಬ್ಯಾಟಿಂಗ್‌ ವಿಭಾಗದಲ್ಲಿ ಪ್ರಥಮ ಇನಿಂಗ್ಸ್‌ನಲ್ಲಿ ಟ್ರಾವಿಸ್‌ ಹೆಡ್‌ ಶತಕ ಹಾಗೂ ಆರಂಭಿಕ ಡೇವಿಡ್‌ ವಾರ್ನರ್‌ 94 ರನ್‌ ಗಳಿಸಿ ತಂಡಕ್ಕೆ ಉಪಯುಕ್ತ ಕೊಡುಗೆ ನೀಡಿದ್ದರು.

ಶನಿವಾರ ಬೆಳಗ್ಗೆ ಎರಡು ವಿಕೆಟ್‌ ನಷ್ಟಕ್ಕೆ 220 ರನ್‌ ಗಳೊಂದಿಗೆ ನಾಲ್ಕನೇ ದಿನ ಆರಂಭಿಸಿದ ಇಂಗ್ಲೆಂಡ್‌ ತಂಡದ ಪರ ನಾಯಕ ಜೋ ರೂಟ್‌(82) ಹಾಗೂ ಡಾವಿಡ್‌ ಮಲಾನ್‌ ಕ್ರೀಸ್‌ಗಿಳಿಸಿದರು. ಮೂರನೇ ದಿನ ಅತ್ಯಂತ ತಾಳ್ಮೆಯ ಬ್ಯಾಟಿಂಗ್‌ ಪ್ರದರ್ಶನ ತೋರಿದ ಡಾವಿಡ್‌ ಮಲಾನ್‌ ನಾಲ್ಕನೇ ದಿನ ಬೆಳಗ್ಗೆ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ನೇಥನ್‌ ಲಯಾನ್‌ ಎಸೆತದಲ್ಲಿ ಮಲಾನ್‌, ಮಾರ್ನಸ್‌ ಲಾಬುಶೇನ್‌ಗೆ ಕ್ಯಾಚಿತ್ತರು. ಆ ಮೂಲಕ ರೂಟ್‌ ಹಾಗೂ ಮಲಾನ್‌ ಜೋಡಿಯ 162 ರನ್‌ ಜೊತೆಯಾಟಕ್ಕೆ ಬ್ರೇಕ್‌ ಬಿದ್ದಿತು.

ಡಾವಿಡ್‌ ಮಲಾನ್‌ ಜೊತೆ ಮತ್ತೊಂದು ತುದಿಯಲ್ಲಿ ದೀರ್ಘಾವಧಿ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದ ಜೋ ರೂಟ್‌ 89 ರನ್‌ ಗಳಿಸಿ ಶತಕದಂಚಿನಲ್ಲಿದ್ದರು. ಆದರೆ, ಅವರನ್ನು ಕ್ಯಾಮೆರಾನ್‌ ಗ್ರೀನ್‌ ಔಟ್‌ ಮಾಡಿದರು. ಈ ಇಬ್ಬರ ವಿಕೆಟ್‌ ಉರುಳುತ್ತಿದ್ದಂತೆ ಮಧ್ಯಮ ಕ್ರಮಾಂಕದಲ್ಲಿ ಯಾವೊಬ್ಬ ಬ್ಯಾಟ್ಸ್‌ಮನ್‌ ಆಸೀಸ್‌ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ಸಾಧ್ಯವಾಗಲಿಲ್ಲ.

ಪ್ರಥಮ ಇನಿಂಗ್ಸ್‌ನಂತೆ ದ್ವಿತೀಯ ಇನಿಂಗ್ಸ್‌ನಲ್ಲಿಯೂ ಬೆನ್‌ ಸ್ಟೋಕ್ಸ್‌ (14) ವೈಫಲ್ಯ ಅನುಭವಿಸಿದರು. ಓಲ್ಲೀ ಪೋಪ್‌(4), ಜೋಸ್‌ ಬಟ್ಲರ್‌(23), ಕ್ರಿಸ್‌ ವೋಕ್ಸ್‌(16) ಕೂಡ ಕ್ರೀಸ್‌ನಲ್ಲಿ ಹೆಚ್ಚಿನ ಸಮಯ ಕಳೆಯುವಲ್ಲಿ ವಿಫಲರಾದರು. ಅಂತಿಮವಾಗಿ ಇಂಗ್ಲೆಂಡ್‌ ದ್ವಿತೀಯ ಇನಿಂಗ್ಸ್‌ನಲ್ಲಿ 103 ಓವರ್‌ಗಳಿಗೆ 297 ವಿಕೆಟ್‌ಗಳಿಗೆ ಆಲೌಟ್‌ ಆಯಿತು.

ಆಸ್ಟ್ರೇಲಿಯಾ ಪರ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿದ ನೇಥನ್‌ ಲಯಾನ್‌ 4 ವಿಕೆಟ್‌ ಪಡೆದುಕೊಂಡರೆ, ಪ್ಯಾಟ್‌ ಕಮಿನ್ಸ್‌ ಹಾಗೂ ಕ್ಯಾಮೆರಾನ್‌ ಗ್ರೀನ್‌ ತಲಾ ಎರಡೆರಡು ವಿಕೆಟ್‌ಗಳನ್ನು ತನ್ನದಾಗಿಸಿಕೊಂಡರು. ಜಾಶ್‌ ಹೇಝಲ್‌ವುಡ್‌ ಮತ್ತು ಮಿಚೆಲ್‌ ಸ್ಟಾರ್ಕ್‌ ತಲಾ ಒಂದೊಂದು ವಿಕೆಟ್‌ ಪಡೆದರು.

ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಇಂಗ್ಲೆಂಡ್‌ ತಂಡ 50.1 ಓವರ್‌ಗಳಿಗೆ 147 ರನ್‌ಗಳಿಗೆ ಆಲೌಟ್‌ ಆಗಿತ್ತು. ನಂತರ ಪ್ರಥಮ ಇನಿಂಗ್ಸ್‌ ಆರಂಭಿಸಿದ್ದ ಆಸ್ಟ್ರೇಲಿಯಾ 104.3 ಓವರ್‌ಗಳಿಗೆ 425 ರನ್‌ ಗಳಿಸಿತ್ತು. ಆ ಮೂಲಕ 278 ರನ್‌ ಬೃಹತ್‌ ಮುನ್ನಡೆ ಪಡೆದಿತ್ತು.

ಸಂಕ್ಷಿಪ್ತ ಸ್ಕೋರ್‌

ಇಂಗ್ಲೆಂಡ್‌: ಪ್ರಥಮ ಇನಿಂಗ್ಸ್‌ 50.1 ಓವರ್‌ಗಳಿಗೆ 147/10 (ಜೋಸ್‌ ಬಟ್ಲರ್‌ 39, ಓಲ್ಲೀ ಪೋಪ್‌ 35; ಪ್ಯಾಟ್‌ ಕಮಿನ್ಸ್‌ 38ಕ್ಕೆ 5, ಮಿಚೆಲ್‌ ಸ್ಟಾರ್ಕ್‌ 35ಕ್ಕೆ 2, ಜಾಶ್‌ ಹೇಝಲ್‌ವುಡ್ 42ಕ್ಕೆ 2)

ಆಸ್ಟ್ರೇಲಿಯಾ: ಪ್ರಥಮ ಇನಿಂಗ್ಸ್‌ 104.3 ಓವರ್‌ಗಳಿಗೆ 425/10 (ಟ್ರಾವಿಸ್‌ ಹೆಡ್‌ 152, ಡೇವಿಡ್‌ ವಾರ್ನರ್ 94, ಮಾರ್ನಸ್‌ ಲಾಬುಶೇನ್‌ 74; ಓಲ್ಲೀ ರಾಬಿನ್ಸನ್‌ 58ಕ್ಕೆ 3, ಮಾರ್ಕ್‌ವುಡ್‌ 85ಕ್ಕೆ 3, ಕ್ರಿಸ್‌ ವೋಕ್ಸ್‌ 76ಕ್ಕೆ 2)

ಇಂಗ್ಲೆಂಡ್‌: ದ್ವಿತೀಯ ಇನಿಂಗ್ಸ್‌ 103 ಓವರ್‌ಗಳಿಗೆ 297/10 (ಜೋ ರೂಟ್‌ 89, ಡಾವಿಡ್‌ ಮಲಾನ್‌ 82; ನೇಥನ್ ಲಯಾನ್‌ 91ಕ್ಕೆ 4, ಪ್ಯಾಟ್‌ ಕಮಿನ್ಸ್‌ 51ಕ್ಕೆ 2, ಕ್ಯಾಮೆರಾನ್‌ ಗ್ರೀನ್‌ 23ಕ್ಕೆ 2, ಮಿಚೆಲ್‌ ಸ್ಟಾರ್ಕ್ 77 ಕ್ಕೆ 1)

ಆಸ್ಟ್ರೇಲಿಯಾ: ದ್ವಿತೀಯ ಇನಿಂಗ್ಸ್‌ 5.1 ಓವರ್‌ಗಳಿಗೆ 20 ( ಅಲೆಕ್ಸ್‌ ಕೇರಿ 9, ಮಾರ್ಕಸ್‌ ಹ್ಯಾರಿಸ್‌ 9*; ಓಲ್ಲೀ ರಾಬಿನ್ಸನ್‌ 13ಕ್ಕೆ 1)



Read more

Leave a Reply

Your email address will not be published. Required fields are marked *