Karnataka news paper

ಕರ್ನಾಟಕದಲ್ಲಿ ಹಿಜಾಬ್ v/s ಕೇಸರಿ ಸಮರ : ಯಾವ ಜಿಲ್ಲೆಯಲ್ಲಿ ಹೇಗಿದೆ ಪರಿಸ್ಥಿತಿ?


ಬೆಂಗಳೂರು : ಉಡುಪಿ ಪದವಿ ಪೂರ್ವ ಕಾಲೇಜಿನಲ್ಲಿ ಆರಂಭವಾದ ಹಿಜಾಬ್‌-ಕೇಸರಿ ಸಮರದ ಕಿಡಿ ಇದೀಗ ಇಡೀ ರಾಜ್ಯಕ್ಕೆ ಹಬ್ಬಿದ್ದು ಬೆಂಕಿ ಜ್ವಾಲೆಯಂತೆ ಹೊತ್ತಿ ಉರಿಯುತ್ತಿದೆ. ಹೌದು, ಕಳೆದ ಎರಡು ದಿನಗಳಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹಿಜಾಭ್ ಹಾಗೂ ಕೇಸರಿ ಸಮರ ನಡೆಯುತ್ತಿದೆ. ಕೆಲವೊಂದು ಜಿಲ್ಲೆಗಳಲ್ಲಿ ಇದು ಭಾರೀ ತೀವ್ರವಾಗಿದೆ. ಈ ವಿವಾದ ಶಿವಮೊಗ್ಗ, ಚಿಕ್ಕಮಗಳೂರು, ಬೀದರ್, ತುಮಕೂರು, ಮೈಸೂರು, ದಾವಣಗೆರೆ, ಬೀದರ್, ಗದಗ. ವಿಜಯಪುರ, ಬಾಗಲಕೋಟೆ ಹೀಗೆ ಮಲೆನಾಡು, ಉತ್ತರ ಕರ್ನಾಟಕ ಭಾಗವನ್ನು ಕೂಡ ಆವರಿಸಿದೆ. ಹಾಗಾದರೆ ಯಾವ ಜಿಲ್ಲೆಯಲ್ಲಿ ಹೇಗಿದೆ ಪರಿಸ್ಥಿತಿ? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ಶಿವಮೊಗ್ಗದಲ್ಲಿ ನಿಷೇದಾಜ್ಞೆ ಜಾರಿ!
ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಶಿವಮೊಗ್ಗದ ಕಾಲೇಜುಗಳಲ್ಲಿ ತಾರಕಕ್ಕೇರಿದ್ದು, ನಗರದ ಎರಡು ಕಡೆ ಕಲ್ಲು ತೂರಾಟವಾಗಿದೆ. ಈ ಮಧ್ಯೆ ವಿದ್ಯಾರ್ಥಿಗಳ ಎರಡು ಗುಂಪುಗಳು ಮೆರವಣಿಗೆ ಆರಂಭಿಸಿದ್ದು, ಶಿವಮೊಗ್ಗ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಶಿವಮೊಗ್ಗದಲ್ಲಿ ಹಿಜಾಬ್, ಕೇಸರಿ ಶಾಲು ಸಂಘರ್ಷ ಎರಡನೆ ದಿನಕ್ಕೆ ಕಾಲಿಟ್ಟಿದೆ. ಸೋಮವಾರ ಪ್ರತಿಭಟನೆಗಳಿಗೆ ಸೀಮಿತವಾಗಿದ್ದ ಹೋರಾಟ ಮಂಗಳವಾರ ಬೆಳಗ್ಗೆಯಿಂದಲೇ ಮತ್ತೊಂದು ಸ್ವರೂಪ ಪಡೆದುಕೊಂಡಿದೆ. ಇದರಿಂದ ಶಿವಮೊಗ್ಗ ನಗರದಲ್ಲಿ ವಾತಾವರಣ ಬೂದಿ ಮುಚ್ಚಿದ ಕೆಂಡದಂತಾಗಿದೆ. ಇನ್ನು ಶಿವಮೊಗ್ಗ ನಗರದಾದ್ಯಂತ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ 08-02-2022 ಮತ್ತು ದಿಃ-09-02-2022 ರಂದು 2 ದಿನಗಳ ಕಾಲ ಶಿವಮೊಗ್ಗ ನಗರದಲ್ಲಿ ಕಲಂ 144 CrPC ನಿಷೇದಾಜ್ಞೆಯನ್ನು ಜಾರಿಗೊಳಿಸಲಾಗಿದೆ.

ಹಿಜಾಬ್ ಅಲ್ಲ, ಕೇಸರಿ-ಹಸಿರು ಶಾಲು ಧರಿಸಿ ಬಂದರೂ ತರಗತಿಗೆ ಪ್ರವೇಶವಿಲ್ಲ; ಬಿ.ಸಿ ನಾಗೇಶ್

ಬಾಗಲಕೋಟೆಯಲ್ಲಿ ಕಲ್ಲು ತೂರಾಟ, ಲಾಠಿ ಪ್ರಹಾರ
ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಪಟ್ಟಣದಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ವಿಚಾರದ ವಿವಾದ ತಾರಕಕ್ಕೇರಿದೆ. ಕಲ್ಲು ತೂರಾಟ ನಡೆದಿದ್ದು, ಈ ವೇಳೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಿಗೆ ಗಾಯವಾಗಿದೆ. ಪರಿಸ್ಥಿತಿ ತಹಬದಿಗೆ ತರಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.

ಬನಹಟ್ಟಿಯ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಮಂಗಳವಾರ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಬಂದರೆ, ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದರು. ಈ ವೇಳೆ ಕಾಲೇಜಿನ ಆಡಳಿತ ಮಂಡಳಿ ಇಬ್ಬರನ್ನೂ ಗೇಟ್‌ನಲ್ಲಿ ತಡೆದು ಸಮವಸ್ತ್ರ ಮಾತ್ರ ಧರಿಸಿ ಬರುವಂತೆ ಸೂಚಿಸಲಾಯಿತು. ಆಗ ಕೇಸರಿ ಶಾಲು ಧರಿಸಿದ್ದ ವಿದ್ಯಾರ್ಥಿಗಳು ಕಾಲೇಜಿನ ಆವರಣದ ಒಳಗೆ ನುಗ್ಗಿ ಪ್ರತಿಭಟನೆ ಮಾಡಿದ್ದಾರೆ.

ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರು ಜಮಖಂಡಿ–ಕುಡಚಿ ರಸ್ತೆ ತಡೆದು ಪ್ರತಿಭಟನೆ ಮಾಡಿದ್ದಾರೆ. ಅವರೊಂದಿಗೆ ಪೋಷಕರು ಸೇರಿದ್ದಾರೆ.ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು, ಎರಡೂ ಕೋಮಿನ ವಿದ್ಯಾರ್ಥಿಗಳು ಪರಸ್ಪರರ ವಿರುದ್ಧ ಘೋಷಣೆ ಕೂಗಿದ್ದಾರೆ. ಈ ಸಂದರ್ಭದಲ್ಲಿ ಕಿಡಿಗೇಡಿಗಳು ಕೆಲವರು ಕಲ್ಲು ತೂರಾಟ ನಡೆಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.

ಶಿಕ್ಷಣ ಮುಖ್ಯವೇ ಹೊರತು ಹಿಜಾಬ್‌ ಅಲ್ಲ : ಕಾಂಗ್ರೆಸ್‌ ರಾಷ್ಟ್ರೀಯ ವಕ್ತಾರೆ ಸುರಯ್ಯಾ ಅಂಜುಮ್‌

ಬೆಳಗಾವಿಯಲ್ಲೂ ತಿಕ್ಕಾಟ!
ಹಿಜಾಬ್ ಬೆಂಬಲಿಸಿ ಬೆಳಗಾವಿಯಲ್ಲಿ AIMIM ಕಾರ್ಯಕರ್ತರು ಸೋಮವಾರ ಪ್ರತಿಭಟಿಸಿದ್ದರು. ಬುರ್ಖಾ ಧರಿಸಿ ಪ್ರತಿಭಟನೆಗೆ ಇಳಿದ ಮಹಿಳೆಯರು. ದ್ವೇಷ ಬಿಡಿ, ದೇಶ ಉಳಿಸಿ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಮುಸ್ಲಿಂ ವಿದ್ಯಾರ್ಥಿನಿಯರು ಏನೇ ಆದರೂ ನಾವು ಹಿಜಾಬ್‌ ಧರಿಸಿಯೇ ಸಿದ್ಧ ಎಂದು ಪಟ್ಟುಹಿಡಿದಿದ್ದರೆ. ಇನ್ನು ಇತ್ತ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿ ಕಾಲೇಜು ಆವರಣಕ್ಕೆ ಎಂಟ್ರಿ ಕೊಟ್ಟಿದ್ದರು.

ಚಿಕ್ಕಮಗಳೂರಿನಲ್ಲಿ ನೀಲಿ ಶಾಲು!
ಹಿಜಾಬ್‌ ಧರಿಸಿ ಕಾಲೇಜಿಗೆ ಬರುವುದಕ್ಕೆ ವಿರೋಧ ವ್ಯಕ್ತಪಡಿಸಿ ಕೇಸರಿ ಶಾಲು ಧರಿಸಿ ಬರುತ್ತಿರುವ ವಿದ್ಯಾರ್ಥಿಗಳ ವಿರುದ್ಧ ನೀಲಿ ಶಾಲು ಧರಿಸಿ ಕಾಲೇಜ್‌ಗೆ ಬರುವ ಮೂಲಕ ಬಹುಜನ ವಿದ್ಯಾರ್ಥಿ ಸಂಘ ಹಾಗೂ ಎನ್‌ಎಸ್‌ಯುಐ ವಿದ್ಯಾರ್ಥಿಗಳು ತಿರುಗೇಟು ನೀಡಿರುವ ಘಟನೆ ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜಿನಲ್ಲಿ ಸೋಮವಾರ ನಡೆದಿದೆ. ಮುಸ್ಲಿಂ ವಿದ್ಯಾರ್ಥಿನಿಯರು ಎಂದಿನಂತೆ ಹಿಜಾಬ್‌ ಧರಿಸಿ ಕಾಲೇಜು ಪ್ರವೇಶಿಸಿದಾಗ ಕೇಸರಿ ಶಾಲು ತೊಟ್ಟು ಕಾಲೇಜು ಪ್ರವೇಶಿಸಲು ಯತ್ನಿಸಿದರು. ಈ ವೇಳೆ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ತಡೆದು ಸಮವಸ್ತ್ರ ಇದ್ದವರಿಗೆ ಮಾತ್ರ ತರಗತಿಗೆ ತೆರಳಲು ಅನುಮತಿ ನೀಡಿದರು.

ರಾಯಚೂರಿನಲ್ಲಿ ತ್ರಿವರ್ಣ ಬಣ್ಣ್ದ ಹಿಜಾಬ್!
ರಾಯಚೂರು ಜಿಲ್ಲೆಯಲ್ಲಿ ಹಿಜಾಬ್ ಪರ ವಿದ್ಯಾರ್ಥಿನಿಯರು ಕೇಸರಿ, ಬಿಳಿ, ಹಸಿರು ಬಣ್ಣದ ಹಿಜಾಬ್ ಧರಿಸಿ ಪ್ರತಿಭಟನೆ ನಡೆಸಿದ್ದಾರೆ. ನಮಗೆ ಹಿಜಾಬ್ ಬೇಕೆ ಬೇಕು. ಇದು ನಮ್ಮ ಮೂಲಭೂತ ಹಕ್ಕು. ಸರ್ಕಾರ ಏನೇ ಹೇಳಲಿ, ನಾವೂ ಹಿಜಾಬ್ ಧರಿಸಿಯೇ ತೀರುತ್ತೇವೆ. ನಮ್ಮ ಸೇಫ್ಟಿಗೆ ಹಿಜಾಬ್ ಹಾಕಿದರೇ ತಪ್ಪೇನು? ನಿಮ್ಮ ಕೇಸರಿ ಶಾಲ್ ನಮ್ಮ ವಿರೋಧವಿಲ್ಲ ಎಂದು ವಿದ್ಯಾರ್ಥಿನಿಯರು ಧರಣಿ ನಡೆಸಿದ್ದಾರೆ.

ಲಬುರಗಿ ಜಿಲ್ಲೆಗೂ ಕಾಲಿಟ್ಟ ಹಿಜಾಬ್ ವಿವಾದ!
ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಹಿಜಾಬ್ ವಿರೋಧಿಸಿ ಕಾಲೇಜಿಗೆ ಕೇಸರಿ ಶಾಲು ಹಾಕಿಕೊಂಡು ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಕಾಲೇಜಿಗೆ ಕೇಸರಿ ಶಾಲು ಹಾಕಿಕೊಂಡು ಶ್ರೀರಾಮ ಸೇನೆ ಬೆಂಬಲಿತ ವಿದ್ಯಾರ್ಥಿಗಳು ಆಗಮಿಸಿದ್ದಾರೆ. ವಿದ್ಯಾರ್ಥಿಗಳನ್ನು ಕಾಲೇಜು ಉಪನ್ಯಾಸಕರು ಬಡಿಗೆ ಹಿಡಿದು ನಿಂತು ತಡೆದಿದ್ದಾರೆ. ಈ ವೇಳೆ ಉಪನ್ಯಾಸಕ ಕರಿಗೂಳೇಸ್ವರ್ ಮತ್ತು ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆದಿದೆ.

ಕೋಲಾರದಲ್ಲಿ ಮುಂದುವರಿದ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ
ಕೋಲಾರ ಜಿಲ್ಲೆಯ ಬಂಗಾರಪೇಟೆ ಕೆ.ಸಿ.ರೆಡ್ಡಿ ಪ್ರಥಮ ದರ್ಜೆ ಕಾಲೇಜಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಮುಂದುವರೆದಿದೆ. ಕೇಸರಿ ಶಾಲು ಹಾಕಿಕೊಂಡು ವಿದ್ಯಾರ್ಥಿಗಳು ತರಗತಿಗಳಿಗೆ ಬಂದಿದ್ದಾರೆ. ಹಿಜಾಬ್ ಪರವಾಗಿ ಒಂದಷ್ಟು ವಿದ್ಯಾರ್ಥಿಗಳು ಕಾಲೇಜಿನಲ್ಲಿ ಜಮಾವಣೆ ಮಾಡಿದರೆ, ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಹಾಜರಾದ ಹಿನ್ನೆಲೆ, ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳು ಬಂದಿದ್ದಾರೆ.



Read more

[wpas_products keywords=”deal of the day sale today offer all”]