ಬೆಂಗಳೂರು: ‘ರಾಜ್ಯದಾದ್ಯಂತ ಶಾಲೆ–ಕಾಲೇಜುಗಳಲ್ಲಿ ಹಿಜಾಬ್–ಕೇಸರಿ ಶಾಲು ಸಂಘರ್ಷ ತಾರಕಕ್ಕೇರಿದೆ. ಹೀಗಾಗಿ, ಒಂದು ವಾರದ ಮಟ್ಟಿಗಾದರೂ ಕಾಲೇಜುಗಳನ್ನು ಬಂದ್ ಮಾಡಬೇಕು. ಇಲ್ಲದಿದ್ದರೆ ಅರಾಜಕತೆ ಸೃಷ್ಟಿಯಾಗಲಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದರು.
ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಕಾಲೇಜುಗಳಲ್ಲಿ ಕಲ್ಲು ತೂರಾಟ ನಡೆಯುತ್ತಿದೆ. ಇದಕ್ಕೆಲ್ಲ ಅವಕಾಶ ಕೊಡಬೇಡಿ. ಕೂಡಲೇ ಪರಿಸ್ಥಿತಿ ನಿಯಂತ್ರಿಸಿ’ ಎಂದು ಮುಖ್ಯಮಂತ್ರಿಯನ್ನು ಅವರು ಒತ್ತಾಯಿಸಿದರು.
‘ಒಂದು ವಾರಗಳ ಕಾಲ ಕಾಲೇಜುಗಳನ್ನು ಬಂದ್ ಮಾಡಿ, ಅಲ್ಲಿನ ಆಡಳಿತ ಮಂಡಳಿ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹಿರಿಯ ಅಧಿಕಾರಿಗಳಿಗೆ ಜವಾಬ್ದಾರಿ ಕೊಡಬೇಕು. ಆ ಮೂಲಕ ಪರಿಸ್ಥಿತಿ ನಿಯಂತ್ರಿಸಬೇಕು’ ಎಂದರು.
‘ಹಿಜಾಬ್ ವಿವಾದದ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡವಿದೆ’ ಎಂಬ ಬಿಜೆಪಿ ನಾಯಕರ ಹೇಳಿಕೆಗೆ, ‘ಈ ವಿಷಯದಲ್ಲಿ ನಾನು ಯಾರಿಗೂ ಉತ್ತರ ಕೊಡಲು ಹೋಗುವುದಿಲ್ಲ. ಯಾರೆಲ್ಲ ರಾಜಕಾರಣ ಮಾಡುತ್ತಿದ್ದಾರೆ, ಯಾರು ಎಷ್ಟೆಷ್ಟು ಶಾಲುಗಳಿಗೆ ಆದೇಶ ಕೊಟ್ಟಿದ್ದಾರೆ ಎನ್ನುವುದೆಲ್ಲ ನನಗೆ ಗೊತ್ತಿದೆ. ಸಚಿವರ ರಾಜಕೀಯ, ಬಿಜೆಪಿ ರಾಜಕೀಯ, ಸಂಘ ಪರಿವಾರದ ರಾಜಕೀಯ, ಕಾಂಗ್ರೆಸ್ ರಾಜಕೀಯ, ಎಸ್‌ಡಿಪಿಐ ರಾಜಕೀಯ ಇವೆಲ್ಲ ಈಗ ಬೇಡ. ಮಕ್ಕಳ ಮನಸ್ಸಿನಲ್ಲಿ ವಿಷ ಬಿಜ ಬಿತ್ತುವುದು ಬೇಡ. ನ್ಯಾಯಾಲಯ ಕೊಡುವ ಆದೇಶಕ್ಕೆ ಎಲ್ಲರೂ ತಲೆಬಾಗಬೇಕು’ ಎಂದರು.
Read more from source
[wpas_products keywords=”deal of the day sale today kitchen”]