Karnataka news paper

ವಿದ್ಯಾರ್ಥಿಗಳಲ್ಲಿ ವಿಷ ಬೀಜ ಬಿತ್ತುತ್ತಿರುವ ಕಾಂಗ್ರೆಸ್‌: ವಿಜಯೇಂದ್ರ ಆರೋಪ


ಬೆಳಗಾವಿ: ‘ಶಾಲಾ–ಕಾಲೇಜು ವಿದ್ಯಾರ್ಥಿಗಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಮಂಗಳವಾರ ಮಾತನಾಡಿದ ಅವರು, ‘ರಾಜ್ಯದಲ್ಲಿ ಹಿಜಾಬ್–ಕೇಸರಿ ಶಾಲು ವಿವಾದ ಸೃಷ್ಟಿಸಿದ್ದೇ ಕಾಂಗ್ರೆಸ್‌. ಇದು ಅತ್ಯಂತ ಖಂಡನೀಯ’ ಎಂದರು.

‘ವಿದ್ಯಾರ್ಥಿಗಳು ಅಯಾ ಶಾಲೆ–ಕಾಲೇಜುಗಳ ಸಮವಸ್ತ್ರ ಧರಿಸಿ ಹಾಜರಾಗುವುದು ಹಿಂದಿನಿಂಲೂ ಬಂದಿರುವ ಪದ್ಧತಿ. ಎಲ್ಲರೂ ಒಂದೇ ಎನ್ನುವ ಭಾವವನ್ನು ಸಮವಸ್ತ್ರ ಸೂಚಿಸುತ್ತದೆ. ಶಾಲೆಗಳಲ್ಲಿ ಎಲ್ಲರೂ ಸಮಾನರು. ಅಲ್ಲಿ ಜಾತಿ ವಿಚಾರ ಬರಬಾರದು. ಹಿಂದೂ–ಮುಸ್ಲಿಂ ಎನ್ನುವುದು ಸುಳಿಯಬಾರದು. ಕ್ಯಾಂಪಸ್‌ಗೆ ಹೋದ ಮೇಲೆ ಎಲ್ಲರೂ ವಿದ್ಯಾರ್ಥಿಗಳಷ್ಟೆ’ ಎಂದರು.

‘ಹಿಜಾಬ್ ವಿಚಾರದಲ್ಲಿ ವಿಶೇಷವಾಗಿ ಕಾಂಗ್ರೆಸ್ ಮುಖಂಡರು ರಾಜಕಾರಣ ಮಾಡುತ್ತಿದ್ದಾರೆ. ಅವರು ಇದನ್ನು ಇಲ್ಲಿಗೇ ನಿಲ್ಲಿಸಿದರೆ ಒಳ್ಳೆಯದು’ ಎಂದು ಸಲಹೆ ನೀಡಿದರು.

‘ಹಿಜಾಬ್ ವಿಚಾರ ಮುಂದಿಟ್ಟುಕೊಂಡು ರಾಜಕಾರಣ ಮಾಡುವ ದರ್ದು ಬಿಜೆಪಿಗಿಲ್ಲ. ಅದೇನಿದ್ದರೂ  ಕಾಂಗ್ರೆಸ್‌ನವರ ಕೆಲಸ. ಬಿಜೆಪಿಯವರು ಮೂಗು ತೂರಿಸುವ ಪ್ರಶ್ನೆಯೇ ಇಲ್ಲ’ ಎಂದು ಪ್ರತಿಕ್ರಿಯಿಸಿದರು.

‘ಎಲ್ಲದಕ್ಕೂ ರಾಜಕೀಯ ಬಣ್ಣ ಕೊಟ್ಟು ಗೊಂದಲ ಸೃಷ್ಟಿಸುವ ವಿರೋಧ ಪಕ್ಷದವರ ಮಾತುಗಳಿಗೆ ವಿದ್ಯಾರ್ಥಿಗಳು ಕಿವಿಕೊಡಬಾರದು. ಎಲ್ಲರೊಂದಿಗೆ ಬೆರೆತು ಪಾಠ ಕೇಳಬೇಕು’ ಎಂದು ಕೋರಿದರು.

‘ಬಿಜೆಪಿಗೆ ಅಭಿವೃದ್ಧಿಗಿಂತಲೂ ರಾಜಕಾರಣವೆ ಮುಖ್ಯ’ ಎನ್ನುವ ವಿರೋಧಪಕ್ಷದವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ನಾವೇನು ಮಾಡಿದ್ದೇವೆ ಎನ್ನುವುದನ್ನು ಜನರು ಮುಂದಿನ ಚುನಾವಣೆಯಲ್ಲಿ ತೀರ್ಮಾನಿಸುತ್ತಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆ ಆಧಾರದ ಮೇಲೆ ಚುನಾವಣೆ ಎದುರಿಸುತ್ತೇವೆ’ ಎಂದರು.



Read more from source

[wpas_products keywords=”deal of the day sale today kitchen”]