Karnataka news paper

ನಟ ದರ್ಶನ್‌ ಅಭಿನಯದ ‘ಮೆಜೆಸ್ಟಿಕ್‌’ಗೆ 20ರ ಸಂಭ್ರಮ: ರಿರಿಲೀಸ್‌ಗೆ ಸಿದ್ಧತೆ


ಚಂದನವನದ ಚಾಲೆಂಜಿಂಗ್‌ ಸ್ಟಾರ್‌, ಅಭಿಮಾನಿಗಳ ಪಾಲಿನ ‘ದಾಸ’, ‘ಡಿ ಬಾಸ್‌’, ‘ದಚ್ಚು’.. ನಾಯಕನಾಗಿ ತೆರೆ ಮೇಲೆ ಕಾಣಿಸಿಕೊಂಡು ಇಂದಿಗೆ(ಫೆ.8) 20 ವರ್ಷ. ದರ್ಶನ್‌ ಅವರ ಅದೃಷ್ಟ ಬದಲಾಯಿಸಿದ ಸಿನಿಮಾ ‘ಮೆಜೆಸ್ಟಿಕ್‌’ ಬಿಡುಗಡೆಯಾಗಿ 20 ವರ್ಷ ಕಳೆದಿದ್ದು, ಶೀಘ್ರದಲ್ಲೇ ಈ ಸಿನಿಮಾ ರಿರಿಲೀಸ್‌ ಆಗುವ ಸೂಚನೆಯನ್ನು ದರ್ಶನ್‌ ಅವರು ಟ್ವಿಟರ್‌ನಲ್ಲಿ ನೀಡಿದ್ದಾರೆ. 

ಈ ಕುರಿತು ಪೋಸ್ಟ್‌ ಮಾಡಿರುವ ಅವರು, ‘ನಿಮ್ಮೆಲ್ಲರ ಮನದಂಗಳಕ್ಕೆ ‘ದಾಸ’ನಾಗಿ ಇಟ್ಟ ಮೊದಲ ಹೆಜ್ಜೆ ‘ಮೆಜೆಸ್ಟಿಕ್’ ಬಿಡುಗಡೆಯಾಗಿ ಇಂದಿಗೆ ಎರಡು ದಶಕಗಳು ಕಳೆದಿವೆ. ಇಂತಹ ಒಳ್ಳೆ ಬುನಾದಿಯನ್ನು ನೀಡಿದ ಚಿತ್ರಕ್ಕೆ ಶ್ರಮಿಸಿದ ನಿರ್ದೇಶಕ, ನಿರ್ಮಾಪಕರು ಹಾಗೂ ಪ್ರತಿಯೊಬ್ಬರಿಗೂ ನನ್ನ ಹೃದಯಪೂರ್ವಕ ವಂದನೆಗಳು. ನಿಮ್ಮ ಪ್ರೀತಿಗೆ ನಾ ಸದಾ ಚಿರಋಣಿ’ ಎಂದಿದ್ದಾರೆ.

ರಂಗಭೂಮಿ, ಧಾರಾವಾಹಿಯಲ್ಲಿ ನಟಿಸಿ ಬಣ್ಣದಲೋಕ ಪ್ರವೇಶಿಸಿದ್ದ ದರ್ಶನ್‌ ಅವರು, ಛಾಯಾಗ್ರಾಹಕ ಬಿ.ಸಿ. ಗೌರಿಶಂಕರ್‌ ಬಳಿ ಅಸಿಸ್ಟೆಂಟ್ ಕ್ಯಾಮೆರಾಮನ್‌ ಆಗಿ ಕೆಲಕಾಲ ಕಾರ್ಯ ನಿರ್ವಹಿಸಿದ್ದರು. ಲೈಟ್‌ಬಾಯ್‌ ಆಗಿ ಚಿತ್ರರಂಗದಲ್ಲಿ ದುಡಿದಿದ್ದ ದರ್ಶನ್‌, ನಾಯಕನಾಗುವುದಕ್ಕೂ ಮುನ್ನ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದರು. ಅವರ ವೃತ್ತಿಬದುಕಿಗೆ ತಿರುವು ನೀಡಿದ ಚಿತ್ರ ‘ಮೆಜೆಸ್ಟಿಕ್’. ಪಿ.ಎನ್.‌ ಸತ್ಯ ‌ನಿರ್ದೇಶನದ‌‌ ಈ‌ ಸಿನಿಮಾ 2002ರ ಫೆ. 8ರಂದು ತೆರೆಕಂಡಿತ್ತು. ನಾಯಕನಾಗಿ ಅಭಿನಯಿಸಿದ ಮೊದಲ ಚಿತ್ರವೇ ಶತದಿನೋತ್ಸವ ಆಚರಿಸಿತು. ಅಲ್ಲಿಂದ ಇಲ್ಲಿಯವರೆಗೂ ಹಲವು ಹಿಟ್‌ ಸಿನಿಮಾಗಳನ್ನು ನೀಡಿರುವ ದರ್ಶನ್‌, ಇದೀಗ ತಮ್ಮ 55ನೇ ಸಿನಿಮಾ ‘ಕ್ರಾಂತಿ’ಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರವನ್ನು ಶೈಲಜಾ ನಾಗ್‌ ಹಾಗೂ ಬಿ.ಸುರೇಶ್‌ ನಿರ್ಮಾಣ ಮಾಡುತ್ತಿದ್ದು, ವಿ.ಹರಿಕೃಷ್ಣ ನಿರ್ದೇಶಿಸುತ್ತಿದ್ದಾರೆ.

2019ರಲ್ಲಿ ದರ್ಶನ್ ಅಭಿನಯದ ‘ಯಜಮಾನ’, ‘ಕುರುಕ್ಷೇತ್ರ’ ಮತ್ತು ‘ಒಡೆಯ’ ಸಿನಿಮಾಗಳು ತೆರೆಕಂಡಿದ್ದವು. 2021ರ ಮಾರ್ಚ್‌ನಲ್ಲಿ ತೆರೆಕಂಡ ‘ರಾಬರ್ಟ್‌’ ದರ್ಶನ್‌ ನಟನೆಯ 53ನೇ ಸಿನಿಮಾ. ಎಸ್‌.ವಿ. ರಾಜೇಂದ್ರಸಿಂಗ್‌ ಬಾಬು ನಿರ್ದೇಶಿಸಿರುವ ‘ರಾಜವೀರ ಮದಕರಿ ನಾಯಕ’ ಚಿತ್ರದಲ್ಲೂ ದರ್ಶನ್‌ ತೊಡಗಿಸಿಕೊಂಡಿದ್ದಾರೆ.



Read More…Source link

[wpas_products keywords=”deal of the day party wear for men wedding shirt”]