ಕೋವಿಡ್ ಸಾಂಕ್ರಾಮಿಕದ ವೇಳೆ ನಿರಂತರವಾಗಿ ದುಡಿದಿದ್ದ ಮಧ್ಯಪ್ರದೇಶದ ಪೈಲಟ್‌ಗೆ, ಕಳೆದ ವರ್ಷ ಗ್ವಾಲಿಯರ್ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಇಳಿಸುವಾಗ ಅಪಘಾತ ಮಾಡಿ ವಿಮಾನಕ್ಕೆ ಹಾನಿ ಮಾಡಿದ್ದಕ್ಕಾಗಿ ಅಲ್ಲಿನ ರಾಜ್ಯ ಸರ್ಕಾರ 85 ಕೋಟಿ ರೂಪಾಯಿ ಬಿಲ್ ನೀಡಿದೆ.
ಮಧ್ಯಪ್ರದೇಶ ಸರ್ಕಾರದ ಸಹ ಪೈಲಟ್ ಜತೆಗೆ ಕ್ಯಾಪ್ಟನ್ ಮಜೀದ್ ಅಖ್ತರ್ ಅವರು ಕೆಲವು ಶಂಕಿತ ಕೋವಿಡ್ ರೋಗಿಗಳ ಮಾದರಿಗಳು ಹಾಗೂ ಸೋಂಕಿತರ ಚಿಕಿತ್ಸೆಗಾಗಿ ಔಷಧಗಳನ್ನು ರವಾನೆ ಮಾಡುತ್ತಿದ್ದರು. ಗ್ವಾಲಿಯರ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡುವಾಗ ರನ್‌ವೇನಲ್ಲಿ ಅಳವಡಿಸಿದ್ದ ಅರೆಸ್ಟೆರ್ ಬ್ಯಾರಿಯರ್‌ಗೆ (ಬಲೆಯಂತಹ ಸಾಧನ) ವಿಮಾನ ಅಪ್ಪಳಿಸಿತ್ತು. ಈ ಅಡ್ಡಬಲೆಯ ಬಗ್ಗೆ ತಮಗೆ ಮಾಹಿತಿ ನೀಡಿರಲಿಲ್ಲ ಎಂದು ಪೈಲಟ್ ಹೇಳಿದ್ದರು. ನಿಯಮಾವಳಿ ಪ್ರಕಾರ ವಿಮಾನ ಹಾರಾಟಕ್ಕೆ ಅವಕಾಶ ನೀಡುವ ಮುನ್ನ ಅದಕ್ಕೆ ವಿಮೆ ಮಾಡಿರದ ವಿಚಾರದಲ್ಲಿ ತಪ್ಪು ಯಾರದು ಎಂದು ತಿಳಿಯಲು ತನಿಖೆ ನಡೆಸುವಂತೆ ಒತ್ತಾಯಿಸಿದ್ದರು.
ಆದರೆ, ಕಳೆದ ವಾರ ಪೈಲಟ್ ವಿರುದ್ಧ ಆರೋಪಪಟ್ಟಿ ಸಿದ್ಧಪಡಿಸಿರುವ ರಾಜ್ಯ ಸರ್ಕಾರ, ವಿಮಾನ ಅಪಘಾತದಿಂದ ಉಂಟಾದ ಹಾನಿಯಿಂದ ಅದನ್ನು ಸಂಪೂರ್ಣ ಗುಜರಿಗೆ ಹಾಕುವಂತಾಗಿದ್ದು, ಸುಮಾರು 60 ಕೋಟಿ ರೂ ನಷ್ಟವಾಗಿದೆ. ಜತೆಗೆ ಇದರ ಪರಿಣಾಮವಾಗಿ ಖಾಸಗಿ ಸಂಸ್ಥೆಗಳಿಂದ ವಿಮಾನಗಳನ್ನು ಬಾಡಿಗೆಗೆ ಪಡೆದುಕೊಳ್ಳುವಂತಾಗಿದ್ದಕ್ಕೆ ಹೆಚ್ಚುವರಿ 25 ಕೋಟಿ ರೂ ನೀಡಬೇಕು ಎಂದು ಹೇಳಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕ್ಯಾಪ್ಟನ್ ಮಜಿದ್ ಅಖ್ತರ್, ಗ್ವಾಲಿಯರ್ ವಿಮಾನ ನಿಲ್ದಾಣದಲ್ಲಿ ಅಳವಡಿಸಿದ್ದ ಅರೆಸ್ಟರ್ ಬ್ಯಾರಿಯರ್‌ನಿಂದಾಗಿ ಅಪಘಾತ ಉಂಟಾಗಿದೆ. ಇದರ ಬಗ್ಗೆ ವಾಯು ಸಂಚಾರ ನಿಯಂತ್ರಣ (ಎಟಿಸಿ) ತಮಗೆ ಮಾಹಿತಿ ನೀಡಿರಲಿಲ್ಲ ಎಂದು ಹೇಳಿದ್ದಾರೆ. 27 ವರ್ಷ ಅನುಭವಿರುವ ಪೈಲಟ್, ಗ್ವಾಲಿಯರ್ ಎಟಿಸಿಯಿಂದ ಪಡೆದುಕೊಂಡ ಎಲ್ಲ ಸೂಚನೆಗಳನ್ನು ಹೊಂದಿರುವ ಕಪ್ಪು ಪೆಟ್ಟಿಗೆಯಲ್ಲಿರುವ ವಿವರಗಳನ್ನು ತಮಗೆ ನೀಡಿಲ್ಲ ಎಂದು ಆರೋಪಿಸಿದ್ದಾರೆ.
ಸರ್ಕಾರಿ ಸ್ವಾಮ್ಯದ ವಿಮಾನವು 2021ರ ಮೇ 6ರಂದು ರನ್‌ವೇನಲ್ಲಿ ಅಪಘಾತಕ್ಕೆ ಈಡಾಗಿತ್ತು. ಬೀಚ್ ಕ್ರಾಫ್ಟ್ ಕಿಂಗ್ ಏರ್ ಬಿ 250 ಜಿಟಿ ವಿಮಾನವು ಅಹ್ಮದಾಬಾದ್‌ನಿಂದ ಗ್ವಾಲಿಯರ್‌ಗೆ 71 ಪೆಟ್ಟಿಗೆಗಳಷ್ಟು ರೆಮ್ಡಿಸಿವಿರ್ ಔಷಧವನ್ನು ಸಾಗಿಸುತ್ತಿತ್ತು. ಅರೆಸ್ಟರ್ ಬ್ಯಾರಿಯರ್‌ಗೆ ಡಿಕ್ಕಿ ಹೊಡೆದು ಅದು ರನ್‌ವೇನಲ್ಲಿ ನಿಂತುಕೊಂಡಿತ್ತು. ವಿಮಾನದಲ್ಲಿದ್ದ ಪೈಲಟ್ ಮಜಿದ್ ಅಖ್ತರ್, ಸಹ ಪೈಲಟ್ ಶಿವ್ ಜೈಸ್ವಾಲ್ ಮತ್ತು ನೈಬ್ ತಹಶೀಲ್ದಾರ್ ದಿಲೀಪ್ ದ್ವಿವೇದಿ ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದರು.
ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯವು (ಡಿಜಿಸಿಎ) ಕಳೆದ ವರ್ಷದಿಂದ ಅಖ್ತರ್ ಅವರ ವಿಮಾನ ಹಾರಾಟ ಪರವಾನಗಿಯನ್ನು ಅಮಾನತುಗೊಳಿಸಿದೆ. ವಿಮಾನ ಅಪಘಾತ ತನಿಖಾ ಸಂಸ್ಥೆ ಕೂಡ ಈ ಪ್ರಕರಣದ ತನಿಖೆ ನಡೆಸುತ್ತಿದೆ.
ವಿಮಾನ ಹಾರಾಟಕ್ಕೂ ಮುನ್ನ ಅದರ ವಿಮಾ ಶಿಷ್ಟಾಚಾರಗಳನ್ನು ಪಾಲಿಸುವುದು ಕಡ್ಡಾಯ. ಆದರೆ ಅದರ ಬಗ್ಗೆ ಪರಿಶೀಲಿಸಿದೆ ವಿಮಾನ ಹಾರಾಟಕ್ಕೆ ಅವಕಾಶ ನೀಡಿದ್ದು ಹೇಗೆ ಎಂಬ ಬಗ್ಗೆ ರಾಜ್ಯ ಸರ್ಕಾರ ಮೌನವಹಿಸಿದೆ. ಗುಜರಿಗೆ ಹಾಕುವಂತಾಗಿದ್ದರೂ ಸರ್ಕಾರವು ವಿಮಾ ಶಿಷ್ಟಾಚಾರಗಳನ್ನು ಸರಿಯಾಗಿ ಅನುಸರಿಸಿದ್ದರೆ ವಿಮಾನದ ವೆಚ್ಚವನ್ನು ಭರಿಸಲು ಸಾಧ್ಯವಿತ್ತು ಎಂದು ಪರಿಣತರು ಹೇಳಿದ್ದಾರೆ. ಹೊಸದಾಗಿ ಖರೀರಿದಿಸಿದ್ದ ವಿಮಾನದ ಮುಂದಿನ ಕಾಕ್‌ಪಿಟ್ ಭಾಗ, ಪ್ರೊಪೆಲ್ಲರ್ ಬ್ಲೇಡ್‌ಗಳು, ಪ್ರೊಪೆಲ್ಲರ್ ಹಬ್ ಮತ್ತು ಚಕ್ರಗಳಿಗೆ ತೀವ್ರ ಹಾನಿಯಾಗಿತ್ತು.
ಏಳು ಸೀಟುಗಳ ಬೀಚ್ ಕ್ರಾಫ್ಟ್ ಕಿಂಗ್ ವಿಮಾನವನ್ನು 2019ರಲ್ಲಿ 65 ಕೋಟಿ ರೂ.ಗೂ ಅಧಿಕ ಬೆಲೆಗೆ ಮಧ್ಯಪ್ರದೇಶ ಸರ್ಕಾರ ಖರೀದಿಸಿತ್ತು.
Read more
[wpas_products keywords=”deal of the day sale today offer all”]