ಭಾರತವೂ ಸೇರಿದಂತೆ ಇಡೀ ವಿಶ್ವ ಕೊರೊನಾ ಮಹಾಮಾರಿಯಿಂದ ತತ್ತರಿಸುತ್ತಿದೆ. ಈ ಜಾಗತಿಕ ಮಹಾಮಾರಿಯಿಂದ ಇಡೀ ಮನುಕುಲ ನಲುಗುತ್ತಿದೆ. ಆದರೆ ಭಾರತ ಈ ಘಾತಕ ವೈರಾಣುವಿನ ವಿರುದ್ಧ ದಿಟ್ಟವಾಗಿ ಹೋರಾಡುತ್ತಿದೆ. ಅಷ್ಟೇ ಅಲ್ಲ, ಜಾಗತಿಕ ಹೋರಾಟದಲ್ಲೂ ಮಹತ್ವದ ಪಾತ್ರ ನಿರ್ವಹಿಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಕೊರೊನಾ ಸಂಕಷ್ಟದ ಸಮಯದಲ್ಲೂ ದೇಶದ ಅರ್ಥವ್ಯವಸ್ಥೆ ಸ್ಥಿರವಾಗಿರುವುದು ಸಂತಸದ ಸಂಗತಿ. ಎಲ್ಲಾ ವಲಯಗಳು ದೇಶದ ಅಭಿವೃದ್ಧಿಗೆ ತಮ್ಮ ಕೊಡುಗೆಯನ್ನು ನೀಡುತ್ತಿದ್ದು, ಭಾರತ ಆತ್ಮನಿರ್ಭರವಾಗುವತ್ತ ದೃಢ ಹೆಜ್ಜೆಯನ್ನು ಇರಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಅಮೃತ ಕಾಲದಲ್ಲಿರುವ ಭಾರತ, ಸ್ವಾತಂತ್ರ್ಯದ 100ನೇ ಸಂಭ್ರಮಾಚರಣೆ ವೇಳೆ ಮತ್ತಷ್ಟು ಸದೃಢವಾಗುವುದನ್ನು ನಾವೆಲ್ಲರೂ ನೋಡಲಿದ್ದೇವೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ದೇಶದ 130 ಕೋಟಿ ಜನರ ಸಹಕಾರದಿಂದ ನಾವು ಕೊರೊನಾ ವೈರಾಣುವಿನ ವಿರುದ್ಧ ಯಶಾಸ್ವಿ ಹೋರಾಟವನ್ನು ಮುನ್ನಡೆಸುತ್ತಿದ್ದೇವೆ. ಈ ಹೋರಾಟ ಇನ್ನೂ ನಿಂತಿಲ್ಲವಾದರೂ, ಅಂತಿಮ ಜಯ ನಮ್ಮದೇ ಎಂಬುದರಲ್ಲಿ ಯಾವುದೇ ಅನುಮಾನ ಬೇಡ ಎಂದು ಪ್ರಧಾನಿ ಮೋದಿ ದೇಶಕ್ಕೆ ಭರವಸೆ ನೀಡಿದರು.
ಕೊರೊನಾ ಕಾಲದಲ್ಲಿ ದೇಶದ ಯುವಕರು ತೋರಿದ ಸಾಮಾಜಿಕ ಕಳಕಳಿ ಪ್ರಶಂಸನೀಯ. ದೇಶ ಕೂಗಿದಾಗ ನಮ್ಮ ಯುವಕರು ಟೊಂಕ ಕಟ್ಟಿ ನಿಲ್ಲುತ್ತಾರೆ ಎಂಬುದಕ್ಕೆ ಇದು ಉತ್ತಮ ಉದಾಹರಣೆ. ಎಲ್ಲಾ ವಲಯದಲ್ಲಿ ಯುವಕರು ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು, ದೇಶದ ಅರ್ಥವ್ಯವಸ್ಥೆ ಸದೃಢವಾಗಿರುವಂತೆ ನೋಡಿಕೊಂಡಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.
ಕೊರೊನಾ ಕಾಲದಲ್ಲಿ ಇಡೀ ದೇಶ ಒಂದಾಗಿ ಹೋರಾಡಿದೆ. ಆದರೆ ರಾಜಕೀಯವಾಗಿ ಮಾತ್ರ ಕೆಲವರು ಈ ಹೋರಾಟವನ್ನು ದುರ್ಬಲಗೊಳಿಸಲು ಪ್ರಯತ್ನಿಸಿದರು. ಆದರೆ ದೇಶ ಅವರ ಈ ಹುನ್ನಾರವನ್ನು ಸ್ಪಷ್ಟವಾಗಿ ಅರಿತಿದ್ದಲ್ಲದೇ, ಅದಕ್ಕೆ ಬಹುದೊಡ್ಡ ಪೆಟ್ಟನ್ನೂ ನೀಡಿತು ಎಂದು ಪ್ರಧಾನಿ ಮೋದಿ ಪರೋಕ್ಷವಾಗಿ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.
ತಮ್ಮ ಭಾಷಣದುದ್ದಕ್ಕೂ ಕೃಷಿ, ಕೈಗಾರಿಕೆ, ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ವಲಯಗಳ ಅಅಭಿವೃದ್ಧಿಗೆ ಕೇಂದ್ರ ಸರ್ಕಾರ ಕೈಗೊಂಡ ನಿರ್ಣಯಗಳ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು. ಭಾರತ ಅತ್ಯಂತ ಆತ್ಮವಿಶ್ವಾಸದಿಂದ ಹೆಜ್ಜೆ ಇಡುತ್ತಿದ್ದು, ಆತ್ಮನಿರ್ಭರತೆ ಸಾಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
Read more
[wpas_products keywords=”deal of the day sale today offer all”]