The New Indian Express
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸೋಮವಾರ ರಾಷ್ಟ್ರ ರಾಜಧಾನಿ ನವದೆಹಲಿಗೆ ಭೇಟಿ ನೀಡುತ್ತಿದ್ದು, ಈ ವೇಳೆ ಬಿಜೆಪಿ ವರಿಷ್ಠರ ಭೇಟಿ ಮಾಡಿ ಕೇಂದ್ರ ಬಜೆಟ್ ಹಾಗೂ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಕೇಂದ್ರದ ನಾಯಕರು ಪಂಚ ರಾಜ್ಯಗಳ ಚುನಾವಣಾ ಪ್ರಚಾರ ಕಾರ್ಯಕ್ರಮಗಳಲ್ಲಿ ಕಾರ್ಯಮಗ್ನರಾಗಿದ್ದು, ದೆಹಲಿಗೆ ಭೇಟಿ ನೀಡಲಿರುವ ಬೊಮ್ಮಾಯಿಯವರಿಗೆ ಪಕ್ಷದ ವರಿಷ್ಠರ ಭೇಟಿಗೆ ಅವಕಾಶ ಸಿಕ್ಕಲ್ಲಿ ಸಂಪುಟ ಕಸರತ್ತಿನ ಬಗ್ಗೆ ಚರ್ಚೆ ನಡೆಸಲಿದ್ದಾರೆಂದು ಹೇಳಲಾಗುತ್ತಿದೆ.
ಉನ್ನತ ನಾಯಕರ ಭೇಟಿಗೆ ಅವಕಾಶ ಕೇಳಲಾಗಿದ್ದು, ಈ ವೇಳೆ ಸಂಪುಟ ವಿಸ್ತರಣೆ ಕುರಿತು ಮಾತುಕತೆ ನಡೆಸಲಾಗುತ್ತದೆ ಎಂದು ಸಿಎಂ ಬೊಮ್ಮಾಯಿಯವರು ಹೇಳಿದ್ದಾರೆ.
ಇದಷ್ಟೇ ಅಲ್ಲದೆ , ಅಂತರ್ ರಾಜ್ಯ ಜಲ ವಿವಾದ ಕುರಿತು ಚರ್ಚೆ ನಡೆಸಲು ಕಾನೂನು ತಜ್ಞರನ್ನೂ ಭೇಟಿ ಮಾಡಲಾಗುತ್ತದೆ. ಮಾರ್ಚ್ ತಿಂಗಳಿನಲ್ಲಿ ರಾಜ್ಯ ಬಜೆಟ್ ಮಂಡನೆ ಮಾಡಲಾಗುತ್ತಿದ್ದು, ಕೇಂದ್ರ ಬಜೆಟ್ ಕುರಿತಂತೆಯೂ ನಾಯಕರೊಂದಿಗೆ ಚರ್ಚೆ ನಡೆಸಲಾಗುತ್ತದೆ. ರಾಜ್ಯದ ಆರ್ಥಿಕ ಪರಿಸ್ಥಿತಿ, ಜಿಎಸ್’ಟಿ ಪರಿಹಾರದ ಕುರಿತು ಮಾತುಕತೆ ನಡೆಸಲಾಗುತ್ತದೆ. ವಿತ್ತ ಸಚಿವರ ಭೇಟಿಗೆ ಅವಕಾಶ ಕೇಳಲಾಗಿದೆ ಎಂದು ತಿಳಿಸಿದ್ದಾರೆ.
ಸೀತಾರಾಮನ್ ಅವರು ಇತ್ತೀಚೆಗೆ ಮಂಡಿಸಿದ ಕೇಂದ್ರ ಬಜೆಟ್ ನಲ್ಲಿ ನದಿ ಜೋಡಣೆ ಯೋಜನೆಗೆ ಹಸಿರು ನಿಶಾನೆ ತೋರಿರುವ ಹಿನ್ನೆಲೆಯಲ್ಲಿ ವಿತ್ತ ಸಚಿವರೊಂದಿಗಿನ ಬೊಮ್ಮಾಯಿಯವರ ಈ ಭೇಟಿ ಮಹತ್ವ ಪಡೆದುಕೊಂಡಿದೆ.
ಇದನ್ನೂ ಓದಿ: ದೆಹಲಿ ಪ್ರವಾಸ, ವರಿಷ್ಠರ ಭೇಟಿಗೂ ಮುನ್ನ ಕುತೂಹಲ ಮೂಡಿಸಿದ ಯಡಿಯೂರಪ್ಪ- ಸಿಎಂ ಬೊಮ್ಮಾಯಿ ಭೇಟಿ; ರಾಜಕೀಯ ಚರ್ಚೆ
ಭೇಟಿ ವೇಳೆ ಬೊಮ್ಮಾಯಿ ಅವರು ಮೇಕೆದಾಟು ಸಮತೋಲನ ಜಲಾಶಯ ಯೋಜನೆ ಅನುಷ್ಠಾನಕ್ಕೆ ಕೇಂದ್ರದ ಬೆಂಬಲವನ್ನು ಕೋರಬಹುದು ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ. ಕರ್ನಾಟಕದಲ್ಲಿ ರೈಲ್ವೆ ಯೋಜನೆಗಳಿಗೆ ಹೆಚ್ಚಿನ ಹಣವನ್ನು ಮಂಜೂರು ಮಾಡಿದ್ದಕ್ಕಾಗಿ ಮತ್ತು ರಾಜ್ಯಗಳಿಗೆ ಹಣಕಾಸಿನ ನೆರವು ಹೆಚ್ಚಿಸಿದ್ದಕ್ಕಾಗಿ ಅವರು ಕೇಂದ್ರಕ್ಕೆ ಧನ್ಯವಾದ ಹೇಳುವ ಸಾಧ್ಯತೆಗಳೂ ಇವೆ ಎಂದು ಹೇಳಲಾಗುತ್ತಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಾಥಮಿಕ ಶಿಕ್ಷಣ ಸಚಿವ ನಾಗೇಶ್ ಅವರು, ಸಚಿವ ಸಂಪುಟ ವಿಸ್ತರಣೆ ವಿಚಾರ ಮಾಧ್ಯಮಗಳಲ್ಲಿ ಮಾತ್ರ ಚರ್ಚೆಯಾಗುತ್ತಿದೆಯೇ ಹೊರತು ಬಿಜೆಪಿ ಅಥವಾ ಸರ್ಕಾರದಲ್ಲಿ ಅಲ್ಲ. ಬೊಮ್ಮಾಯಿ ಮತ್ತು ಪಕ್ಷದ ಹೈಕಮಾಂಡ್ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ. ರಾಜ್ಯ ಬಜೆಟ್‌ಗೂ ಮುನ್ನ ಕೇಂದ್ರ ಸಚಿವರು, ರಾಜ್ಯದ ಸಂಸದರು ಹಾಗೂ ಪಕ್ಷದ ಮುಖಂಡರನ್ನು ಭೇಟಿ ಮಾಡಲು ಬೊಮ್ಮಾಯಿ ನವದೆಹಲಿಗೆ ಭೇಟಿ ನೀಡುತ್ತಿದ್ದಾರೆ. “ರಾಜ್ಯ ಬಜೆಟ್‌ಗೂ ಮುನ್ನ ರಾಜ್ಯದ ಸಂಸದರು ಮತ್ತು ಕೇಂದ್ರ ಸಚಿವರನ್ನು ಭೇಟಿ ಮಾಡುವ ಸಂಪ್ರದಾಯಗಳಿವೆ. ಬೊಮ್ಮಾಯಿ ಅವರ ದೆಹಲಿ ಭೇಟಿಗೆ ಬೇರೆ ಬಣ್ಣ ಕೊಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
Read more
[wpas_products keywords=”deal of the day”]