Karnataka news paper

ರಾಜ್ಯದ ಸಂಸದರೊಂದಿಗೆ ಮುಖ್ಯಮಂತ್ರಿ ಬೊಮ್ಮಾಯಿ ಸಭೆ: ಏನೇನು ಚರ್ಚೆ?


ನವದೆಹಲಿ: ನೀರಾವರಿ, ನಗರಾಭಿವೃದ್ಧಿ, ರೈಲ್ವೆ, ಬಂದರು, ರಸ್ತೆ ಅಭಿವೃದ್ಧಿಗಾಗಿ ಕರ್ನಾಟಕ ಕೈಗೆತ್ತಿಕೊಳ್ಳಲಿರುವ ಯೋಜನೆಗಳಿಗೆ ಕೇಂದ್ರ ಸರ್ಕಾರದ ನೆರವು ಕೋರಲು ನಿರ್ಧರಿಸಲಾಗಿದೆ. ಇದಕ್ಕಾಗಿ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲು ಕರ್ನಾಟಕದ ಸಂಸದರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಡೆಸಿದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಕೇಂದ್ರ ಸರ್ಕಾರದ ನೆರವಿನ ವಿವಿಧ ಯೋಜನೆಗಳ ಅನುಷ್ಠಾನದ ಕುರಿತು ಕರ್ನಾಟಕದ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರೊಂದಿಗೆ ಬಸವರಾಜ ಬೊಮ್ಮಾಯಿ ಸೋಮವಾರ ಸಭೆ ನಡೆಸಿದರು. ನೀರಾವರಿ, ರೈಲ್ವೆ ಮತ್ತು ರಸ್ತೆ ಅಭಿವೃದ್ಧಿ ಕುರಿತ ಯೋಜನೆಗಳಿಗೆ ಇರುವ ಅಡ್ಡಿ– ಆತಂಕಗಳ ನಿವಾರಣೆಗೆ ರಾಜ್ಯ ಸರ್ಕಾರ ಶ್ರಮಿಸಬೇಕು ಎಂದು ಸಭೆಯಲ್ಲಿದ್ದ ಸದಸ್ಯರು ಮನವಿ ಸಲ್ಲಿಸಿದರು.

ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಘೋಷಿಸಿರುವ ನೆರವನ್ನು ಸಮರ್ಪಕವಾಗಿ ಬಿಡುಗಡೆ ಮಾಡಲಾಗುವುದು. 15ನೇ ಹಣಕಾಸು ಆಯೋಗದ ಶಿಫಾರಸಿನ ಅನ್ವಯ ರಾಜ್ಯಕ್ಕೆ ಅಗತ್ಯ ಹಣಕಾಸಿನ ನೆರವು ನೀಡಲಾಗುವುದು ಎಂದು ಹಾಜರಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಭರವಸೆ ನೀಡಿದರು.

ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ನಾರಾಯಣಸ್ವಾಮಿ, ಭಗವಂತ ಖೂಬಾ ಕೂಡ ಇದ್ದರು.

ಕೇಂದ್ರ ಸಚಿವರಿಗೆ ಮನವಿ
ಹೊರ ರಾಜ್ಯದ ಗಣಿಗಳಿಂದ ರಾಜ್ಯಕ್ಕೆ ಕಲ್ಲಿದ್ದಲು ಸಾಗಣೆಗೆ ಅನುಕೂಲ ಕಲ್ಪಿಸಲು ಅಗತ್ಯ ಪ್ರಮಾಣದ ರೇಕ್‌ಗ
ಳನ್ನು ಪೂರೈಸುವಂತೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಬೊಮ್ಮಾಯಿ ಹೇಳಿದರು.

ಈ ಕುರಿತು ರೈಲ್ವೆ ಮಂಡಳಿ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಸಚಿವರಿಂದ ಭರವಸೆ ದೊರೆತಿದೆ ಎಂದು ಭೇಟಿಯ ನಂತರ ಅವರು ಸುದ್ದಿಗಾರರಿಗೆ ತಿಳಿಸಿದರು.

ವಿದ್ಯುತ್‌ ಕಂಪನಿಗಳು (ಎಸ್ಕಾಂಗಳು) ಅಂತರ ಇಲಾಖಾ ಬಿಲ್‌ ಪಾವತಿಸಬೇಕು ಎಂಬ ಷರತ್ತು ವಿಧಿಸಲಾಗಿದೆ. ಈ ಷರತ್ತುಗಳನ್ನು ರದ್ದುಗೊಳಿಸುವಂತೆ ಕೇಂದ್ರ ಇಂಧನ ಸಚಿವ ಆರ್‌.ಕೆ. ಸಿಂಗ್‌ ಅವರನ್ನು ಭೇಟಿ ಮಾಡು ಕೋರಲಾಯಿತು ಎಂದ ಅವರು, ಬಿಲ್‌ ಪಾವತಿ ಪ್ರಕ್ರಿಯೆ ರದ್ದುಪಡಿಸಿದಲ್ಲಿ ಎಸ್ಕಾಂಗಳಿಗೆ ಬ್ಯಾಂಕ್‌ನಿಂದ ಸಾಲ ಸೌಲಭ್ಯ ದೊರೆಯಲಿದೆ ಎಂದರು.

ಇತರ ರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕವು ವಿದ್ಯುತ್‌ ಬಳಕೆದಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಹಾಯಧನ ನೀಡುತ್ತಿದೆ. ಅಂದಾಜು ₹ 15,000 ಕೋಟಿಯಷ್ಟು ಸಹಾಯಧನ ನೀಡಲಾಗುತ್ತಿದೆ. ಹಿಂದಿನ ವರ್ಷಗಳ ಬಾಕಿ ಮೊತ್ತವನ್ನು ಪಾವತಿಸಲು ಮತ್ತಷ್ಟು ಸಮಯಾವಕಾಶ ಒದಗಿಸುವ ಅಗತ್ಯವಿದೆ ಎಂದೂ ಸಚಿವರಿಗೆ ಮನವರಿಕೆ ಮಾಡಲಾಗಿದೆ ಎಂದು ಹೇಳಿದರು.

ಕೇಂದ್ರದ ಆರೋಗ್ಯ ಸಚಿವ ಮನಸುಖ್‌ ಮಾಂಡವಿಯಾ ಅವರನ್ನು ಭೇಟಿ ಮಾಡಿ ಕೋವಿಡ್‌ ಸ್ಥಿತಿಗತಿ ಕುರಿತು ಚರ್ಚಿಸಲಾಗಿದೆ ಎಂದೂ ತಿಳಿಸಿದರು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನೂ ಭೇಟಿ ಮಾಡಿ ಚರ್ಚಿಸಲಾಗಿದೆ. ರಾಜ್ಯ ಗಳಿಗೆ 50 ವರ್ಷಗಳ ಅವಧಿಗೆ ಬಡ್ಡಿರಹಿತವಾಗಿ ₹ 1 ಲಕ್ಷ ಕೋಟಿ ಸಾಲ ಮಂಜೂರು ಮಾಡುವ ಕಾರ್ಯಕ್ರಮದಡಿ ಕರ್ನಾಟಕಕ್ಕೆ ಅಗತ್ಯ ನೆರವು ನೀಡು
ವಂತೆ ಮನವಿ ಮಾಡಲಾಗಿದೆ. ಅಂದಾಜು ₹ 4,000 ಕೋಟಿ ಸಾಲ ದೊರೆಯಬಹುದು ಎಂದು ಮುಖ್ಯಮಂತ್ರಿ ಬೊಮ್ಮಾಯಿ ವಿವರ ನೀಡಿದರು.

ರಾಜ್ಯಗಳಿಗೆ ಕೇಂದ್ರ ಸರ್ಕಾರ ನೀಡುವ ಜಿಎಸ್‌ಟಿ ಪರಿಹಾರವನ್ನು 2024-25ರವರೆಗೆ ವಿಸ್ತರಿಸುವಂತೆ ಕೋರಲಾಗಿದೆ. 2022ರ ಮಾರ್ಚ್‌ ವೇಳೆಗೆ ಜಿಎಸ್‌ಟಿ ಪರಿಹಾರ ವಿತರಣೆಯ ಅವಧಿ ಮುಕ್ತಾಯಗೊಳ್ಳಲಿದೆ. ಕೋವಿಡ್‌ನಿಂದಾಗಿ ರಾಜ್ಯ ಸರ್ಕಾರಗಳು ಸಂಪನ್ಮೂಲ ಕ್ರೋಡೀಕರಣ ಸಮಸ್ಯೆ ಎದುರಿಸುತ್ತಿವೆ. ಈ ಸಂಬಂಧ ಕೇಂದ್ರವು ಪರಿಹಾರದ ಅವಧಿ ವಿಸ್ತರಿಸಿ ಸಂಕಷ್ಟ ಬಗೆಹರಿಸುವಂತೆ ಆಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು.



Read more from source

[wpas_products keywords=”deal of the day sale today kitchen”]