Karnataka news paper

ಸಂಪಾದಕೀಯ: ಹಿಜಾಬ್‌ ‘ಉತ್ಪಾದಿತ’ ಪ್ರಕರಣ ಪ್ರಜಾತಂತ್ರದ ಆಶಯಗಳ ಅಣಕ


ರಾಜ್ಯದ ಕೆಲವೆಡೆ ವಿಶೇಷವಾಗಿ ಕರಾವಳಿಯ ಕೆಲವು ಕಾಲೇಜುಗಳಲ್ಲಿ ಹಿಜಾಬ್‌ ಧರಿಸಿದ ವಿದ್ಯಾರ್ಥಿನಿಯರಿಗೆ ತರಗತಿಗಳಿಗೆ ಪ್ರವೇಶ ನಿರಾಕರಿಸುತ್ತಿರುವುದು ಕಳವಳ ಉಂಟುಮಾಡುವ ವಿದ್ಯಮಾನ. ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ಹತ್ತಾರು ಸರ್ಕಾರಿ ಕಾರ್ಯಕ್ರಮಗಳು ಜಾರಿಯಲ್ಲಿವೆ. ‘ಹೆಣ್ಣುಮಕ್ಕಳನ್ನು ರಕ್ಷಿಸಿ, ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿ’ ಎನ್ನುವುದು ಕೇಂದ್ರ ಸರ್ಕಾರದ ಜನಪ್ರಿಯ ಘೋಷಣೆ.

ಈ ಕಾಳಜಿ ಹಾಗೂ ಘೋಷಣೆಯನ್ನು ಅಣಕಿಸುವಂತಿರುವ ‘ಹಿಜಾಬ್‌ ರಾಜಕೀಯ’ಕ್ಕೆ ಕರ್ನಾಟಕ ವೇದಿಕೆಯಾಗಿರುವುದು ಪ್ರಜ್ಞಾವಂತರು ತಲೆತಗ್ಗಿಸಬೇಕಾದ ವಿದ್ಯಮಾನ. ‘ಉತ್ಪಾದಿತ ಸಮಸ್ಯೆ’ಯನ್ನು ಸೌಹಾರ್ದವಾಗಿ ಬಗೆಹರಿಸಬೇಕಿದ್ದ ಸರ್ಕಾರವು ಕಾಲೇಜುಗಳ ಆಡಳಿತ ಮಂಡಳಿಯ ಬೆಂಬಲಕ್ಕೆ ನಿಂತಿರುವುದು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯವೆಂದು ಇದ್ದಕ್ಕಿದ್ದಂತೆ ಆದೇಶ ಹೊರಡಿಸಿರುವುದು ಅಲ್ಪಸಂಖ್ಯಾತರಲ್ಲಿ ಅಸುರಕ್ಷತೆ ಉಂಟು ಮಾಡುವ ಕ್ರಮವಾಗಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಕ್ಷದ ಅಥವಾ ನಿರ್ದಿಷ್ಟ ಸಮುದಾಯದ ಅಜೆಂಡಾವನ್ನು ಜಾರಿಗೊಳಿಸಲು ಅವಕಾಶವಿಲ್ಲ. ಎಲ್ಲ ವರ್ಗದವರನ್ನು ಸೌಹಾರ್ದದಿಂದ ನಡೆಸಿಕೊಳ್ಳಬೇಕಾದುದು ಸರ್ಕಾರದ ಕರ್ತವ್ಯ.

ವಿದ್ಯಾರ್ಥಿನಿಯರ ಶೈಕ್ಷಣಿಕ ಹಿತವನ್ನು ಕಡೆಗಣಿಸಿರುವ ಸರ್ಕಾರ, ಹಿಜಾಬ್‌ ವಿಷಯದಲ್ಲಿ ಹಟ ಹಿಡಿದಿದೆ ಹಾಗೂ ಹೆಣ್ಣುಮಕ್ಕಳ ಭವಿಷ್ಯದ ಜೊತೆಗೆ ಕಣ್ಣಾಮುಚ್ಚಾಲೆ ಆಡುತ್ತಿದೆ. ಹಿಜಾಬ್‌ ಧರಿಸಿದ ಹೆಣ್ಣುಮಕ್ಕಳಿಗೆ ತರಗತಿಗೆ ಪ್ರವೇಶವಿಲ್ಲ ಎನ್ನುವುದಾದರೆ, ಪಗಡಿ ಧರಿಸಿದ ಸಿಖ್‌ ವಿದ್ಯಾರ್ಥಿಯನ್ನು ಸರ್ಕಾರ ಹೇಗೆ ಭಾವಿಸುತ್ತದೆ ಎನ್ನುವ ಪ್ರಶ್ನೆಗೆ ಸರ್ಕಾರ ಸ್ಪಷ್ಟನೆ ನೀಡಬೇಕಾಗಿದೆ.

ಶಾಲೆಗಳ ಶೈಕ್ಷಣಿಕ ಕಾರ್ಯಕ್ರಮದ ಭಾಗವೇ ಆಗಿರುವ ಪೂಜಾ ಆಚರಣೆಗಳ ಬಗೆಗಿನ ನಿಲುವನ್ನೂ ಸರ್ಕಾರ ಬಹಿರಂಗಪಡಿಸಬೇಕು.

ಹಿಜಾಬ್ ಧರಿಸಿಯೇ ಕಾಲೇಜಿಗೆ ಬರುತ್ತೇವೆಂದು ಹಟ ಹಿಡಿದಿರುವ ಹೆಣ್ಣುಮಕ್ಕಳು ಕೆಲವರ ಕಣ್ಣಿಗೆ ಹಟಮಾರಿಗಳಂತೆ ಕಾಣಿಸುತ್ತಿದ್ದಾರೆ. ಆದರೆ, ಮುಸ್ಲಿಂ ಸಮುದಾಯದ ಕೆಲವು ವಿದ್ಯಾರ್ಥಿನಿಯರು ತೀರಾ ಇತ್ತೀಚಿನವರೆಗೂ ಸಮವಸ್ತ್ರದೊಂದಿಗೆ ಹಿಜಾಬ್‌ ಧರಿಸಿ ತರಗತಿಗಳಿಗೆ ಹಾಜರಾಗುತ್ತಿದ್ದುದು ಹಾಗೂ ಅದರ ಬಗ್ಗೆ ಯಾರಿಗೂ ಆಕ್ಷೇಪ ಇಲ್ಲದಿದ್ದುದನ್ನು ಮರೆಯಬಾರದು.

ಈವರೆಗೆ ಇಲ್ಲದ ವಿರೋಧವು ಧುತ್ತನೆ ಉದ್ಭವವಾದುದರ ಹಿಂದೆ ರಾಜಕೀಯ ವಾಸನೆ ಇದೆಯೇ ಹೊರತು, ಶೈಕ್ಷಣಿಕ ಹಿತಾಸಕ್ತಿಯಲ್ಲ.
ಶಿಕ್ಷಣದ ಬೆಳಕಿಗೆ ಈಗಷ್ಟೇ ತೆರೆದುಕೊಳ್ಳುತ್ತಿರುವ ಹೆಣ್ಣುಮಕ್ಕಳನ್ನು ಹಿಜಾಬ್‌ ನೆಪದಲ್ಲಿ ತರಗತಿಗಳಿಂದ ಹೊರಗೆ ನಿಲ್ಲಿಸುವುದು ಅಮಾನವೀಯ. ಯಾರದೋ ಹಟಕ್ಕೆ ಹೆಣ್ಣುಮಕ್ಕಳ ಶಿಕ್ಷಣ ಬಲಿಯಾಗಲು ಸರ್ಕಾರ ಅವಕಾಶ ಕಲ್ಪಿಸಬಾರದು. ಹಿಜಾಬ್ ಎನ್ನುವುದು ಮುಸ್ಲಿಂ ಹೆಣ್ಣುಮಕ್ಕಳಿಗೆ ಧಾರ್ಮಿಕ ಹೇರಿಕೆಯೇ ಅಲ್ಲವೇ ಎನ್ನುವುದನ್ನು ಆ ಧರ್ಮಕ್ಕೆ ಹಾಗೂ ನ್ಯಾಯಾಲಯದ ವಿವೇಚನೆಗೆ ಬಿಡುವುದು ಎಲ್ಲರ ಹಿತದೃಷ್ಟಿಯಿಂದ ಒಳ್ಳೆಯದು.

ಪುರುಷರಿಗಿಲ್ಲದ, ಹೆಣ್ಣುಮಕ್ಕಳಿಗೆ ಸೀಮಿತವಾದ ತೊಡಕುಗಳು ಎಲ್ಲ ಧರ್ಮಗಳಲ್ಲೂ ಇವೆ.  ಹಾಗಾಗಿ ಧಾರ್ಮಿಕ ಚಹರೆಗಳನ್ನು ಹೊಂದುವವರನ್ನು ಅವರ ಪಾಡಿಗೆ ಬಿಟ್ಟು, ಕಲಿಸುವುದರ ಬಗ್ಗೆಯಷ್ಟೇ ಶಾಲಾ ಕಾಲೇಜುಗಳು ಗಮನಹರಿಸಬೇಕಾಗಿದೆ. ಹಿಜಾಬ್‌ ಅನ್ನು ವಿರೋಧಿಸುವ ನಡವಳಿಕೆಯು ಹಿಜಾಬ್‌ ತೊಡುವವರನ್ನೇ ಅವಮಾನಿಸುವಂತಿದೆ, ಅನುಮಾನಿಸುವಂತಿದೆ. ನಮ್ಮ ವಿದ್ಯಾರ್ಥಿಗಳು ಪಠ್ಯದ ಬಗ್ಗೆ ಚರ್ಚಿಸುವುದನ್ನು ಬಿಟ್ಟು, ಹಿಜಾಬ್ ಅಥವಾ ಕೇಸರಿ ಶಾಲಿಗೆ ಜೋತುಬೀಳುವ ಪರಿಸ್ಥಿತಿಯನ್ನು
ಸೃಷ್ಟಿಸುತ್ತಿದ್ದೇವೆ.

ಹಿಜಾಬ್‌ಗೆ ಕೇಸರಿ ಶಾಲು ಪ್ರತ್ಯುತ್ತರ ಎನ್ನುವ ನಡವಳಿಕೆಯ ಮೂಲಕ ವಿದ್ಯಾರ್ಥಿಗಳಲ್ಲಿ ಸೇಡಿನ ಮನೋಭಾವ ಉಂಟುಮಾಡುತ್ತಿದ್ದೇವೆ. ಈ ಪರಿಸ್ಥಿತಿ ರೂಪುಗೊಳ್ಳುವುದಕ್ಕೆ ರಾಜಕಾರಣಿಗಳು ಹಾಗೂ ಮತೀಯ ಸಂಘಟನೆಗಳು ನೇರ ಕಾರಣ. ಕ್ಷುಲ್ಲಕ ರಾಜಕೀಯ ನಡೆಗಳನ್ನು ಬೆಂಬಲಿಸದೆ, ಎಲ್ಲ ಸಮುದಾಯಗಳ ವಿದ್ಯಾರ್ಥಿಗಳು ಒಟ್ಟಿಗೆ ಕಲಿಯುವುದಕ್ಕೆ ಅಗತ್ಯವಾದ ಪರಿಹಾರವನ್ನು ಕಂಡುಕೊಳ್ಳುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು.

‘ಕ್ರಿಯೆಗೆ ತಕ್ಕ ಪ್ರತಿಕ್ರಿಯೆ’ ಎನ್ನುವ ಸೇಡಿನ ಭಾಷೆ ಸರ್ಕಾರದ್ದಾಗಬಾರದು.

ವಿದ್ಯಾರ್ಥಿನಿಯರ ಶೈಕ್ಷಣಿಕ ಭವಿಷ್ಯದ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲದವರಂತೆ ಮಾತನಾಡುತ್ತಿರುವ ರಾಜಕಾರಣಿಗಳು ತಾವು ಪ್ರತಿನಿಧಿಸುವ ಸ್ಥಾನಮಾನಗಳ ಮರ್ಯಾದೆಯನ್ನು ಕಳೆಯುವಂತೆ ವರ್ತಿಸುತ್ತಿದ್ದಾರೆ. ‘ಹಿಜಾಬ್‌ ಬೆಂಬಲಿಸುವವರು ಪಾಕಿಸ್ತಾನಕ್ಕೆ ಹೋಗಲಿ’, ‘ದಕ್ಷಿಣ ಕನ್ನಡವನ್ನು ತಾಲಿಬಾನ್‌ ಆಗಲು ಬಿಡುವುದಿಲ್ಲ’ ಎಂದು ಪದೇ ಪದೇ ಮಾತನಾಡುವ ಪ್ರಜಾಪ್ರತಿನಿಧಿಗಳು ಜನರಲ್ಲಿ ಭಾವನೆಗಳನ್ನು ಕೆರಳಿಸಲು ಪ್ರಯತ್ನಿಸುವ ಮೂಲಕ ತಮ್ಮ ಸ್ಥಾನಗಳಿಗೆ ಹಾಗೂ ಸಂವಿಧಾನದ ಆಶಯಗಳಿಗೆ ದ್ರೋಹ ಬಗೆಯುತ್ತಿದ್ದಾರೆ.

ಶಾಲಾ ಕಾಲೇಜುಗಳಲ್ಲಿ ಧರ್ಮನಿರಪೇಕ್ಷತೆ ಜಾರಿಯಲ್ಲಿರಬೇಕೆಂದು ಅಪೇಕ್ಷಿಸುವುದು ಸ್ವಾಗತಾರ್ಹ. ಆದರೆ, ಸಮಾಜದಲ್ಲಿ ಧರ್ಮನಿರಪೇಕ್ಷತೆಯ ನಿಜವಾದ ರಾಯಭಾರಿಗಳಂತೆ ಕಾರ್ಯನಿರ್ವಹಿಸಬೇಕಾದವರು ರಾಜಕಾರಣಿಗಳು, ವಿಶೇಷವಾಗಿ ಶಾಸನಸಭೆಗಳಲ್ಲಿ ಜನರನ್ನು ಪ್ರತಿನಿಧಿಸುವವರು.

ದುರದೃಷ್ಟವಶಾತ್‌, ಪ್ರಜಾಪ್ರತಿನಿಧಿಗಳಲ್ಲಿ ಹೆಚ್ಚಿನವರು ಒಂದಲ್ಲಾ ಒಂದು ಬಗೆಯಲ್ಲಿ ತಮ್ಮನ್ನು ನಿರ್ದಿಷ್ಟ ಕೋಮುಗಳಿಗೆ ಸೀಮಿತಗೊಳಿಸಿಕೊಂಡಿದ್ದಾರೆ. ಧರ್ಮದ ಲಾಂಛನಗಳನ್ನು ಎಗ್ಗಿಲ್ಲದೆ ಪ್ರದರ್ಶಿಸುತ್ತಿದ್ದಾರೆ.

ಮುಸ್ಲಿಂ ಧರ್ಮೀಯರಲ್ಲಿ ಅಸುರಕ್ಷತೆ ಮೂಡಿಸುವ ಕೆಲಸದಲ್ಲೂ ತೊಡಗಿದ್ದಾರೆ. ಸಂವಿಧಾನದ ಆಶಯಗಳನ್ನು ಮರೆತು, ತಮ್ಮ ವೈಯಕ್ತಿಕ ಭಾವನೆಗಳನ್ನೇ ಸಮಾಜದಲ್ಲಿ ಮುಂದು ಮಾಡಲು ಹೊರಟಿದ್ದಾರೆ. ಇಲ್ಲದ ಬಿಕ್ಕಟ್ಟುಗಳನ್ನು ಸೃಷ್ಟಿಸುವ ಮೂಲಕ ಸಮಾಜದಲ್ಲಿನ ನೈಜ ಸಮಸ್ಯೆಗಳನ್ನು ಹಿನ್ನೆಲೆಗೆ ಸರಿಸುತ್ತಿದ್ದಾರೆ.

ಜನರ ಸಂಕಟ–ಸಮಸ್ಯೆಗಳ ಬಗ್ಗೆ ಮಾತನಾಡಬೇಕಾದವರು ಧರ್ಮಾಧಾರಿತ ವಿಷಯಗಳನ್ನು ತಮ್ಮ ಮೂಗಿನ ನೇರಕ್ಕೆ ತಕ್ಕಂತೆ ವ್ಯಾಖ್ಯಾನಿಸುತ್ತಿದ್ದಾರೆ, ಕಿಡಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ನಿರ್ದಿಷ್ಟ ಧರ್ಮದ ಬಗ್ಗೆ ಕಾಳಜಿಯಿರುವವರು ರಾಜಕಾರಣವನ್ನು ತೊರೆದು, ಧಾರ್ಮಿಕ ಚಟುವಟಿಕೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಳ್ಳುವುದಕ್ಕೆ ಯಾರ ಅಡ್ಡಿಯೂ ಇಲ್ಲ.

ಪ್ರಜಾತಂತ್ರದ ಬಗ್ಗೆ ಮಾತನಾಡುತ್ತಲೇ, ಅದರ ಆಶಯಗಳನ್ನು ಗಾಸಿಗೊಳಿಸುವ ಕೆಲಸದಲ್ಲಿ ತೊಡಗುವ ಕೂಗುಮಾರಿಗಳನ್ನು ಸುಮ್ಮನಿರಿಸುವ ಕೆಲಸವನ್ನು ಆಯಾ ‍ಪಕ್ಷಗಳು ಇನ್ನಾದರೂ ಮಾಡಬೇಕು.



Read more from source

[wpas_products keywords=”deal of the day sale today kitchen”]