ನವದೆಹಲಿ: ಕೇಂದ್ರ ಸರ್ಕಾರದ ಪ್ರಸ್ತಾವಿತ ನದಿ ಜೋಡಣೆ ಯೋಜನೆಯಿಂದ ರಾಜ್ಯಕ್ಕೆ ಸಮರ್ಪಕ ಪಾಲು ದೊರೆಯಬೇಕಿದೆ. ಈ ಸಂಬಂಧ ಕೇಂದ್ರದ ಜಲಶಕ್ತಿ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ರಾಜ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚಿಸಲು ಇಲ್ಲಿ ಸೋಮವಾರ ಆಯೋಜಿಸಿದ್ದ ರಾಜ್ಯದ ಸಂಸತ್ ಸದಸ್ಯರ ಸಭೆಗೆ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮ ನದಿ ಕಣಿವೆಯಲ್ಲಿ ಲಭ್ಯವಿರುವ ನೀರು, ನದಿ ಜೋಡಣೆಯಿಂದ ದೊರೆಯುವ ನೀರು ನಮ್ಮ ಅಗತ್ಯವನ್ನು ಪೂರೈಸುವಂತಾಗಬೇಕು ಕೂಡಲೇ ಆಯಾ ರಾಜ್ಯಗಳ ಪಾಲನ್ನು ನಿರ್ಧಾರವಾಗಬೇಕು ಎಂಬುದು ನಮ್ಮ ನಿಲುವು’ ಎಂದರು.
ನದಿ ಜೋಡಣೆಯ ವಿಸ್ತೃತ ಯೋಜನಾ ವರದಿಯನ್ನು ಅಂತಿಮಗೊಳಿಸುವ ಮೊದಲು, ನದಿ ಕಣಿವೆ ವ್ಯಾಪ್ತಿಯ ಎಲ್ಲ ರಾಜ್ಯಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಕೋರಲಾಗಿದೆ. ರಾಜ್ಯಕ್ಕೆ ನೀರಿನ ನ್ಯಾಯಸಮ್ಮತ ಪಾಲನ್ನು ಪಡೆದುಕೊಳ್ಳಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ಅವರು ಹೇಳಿದರು.
‘ನದಿ ಜೋಡಣೆ ಯೋಜನೆಯಲ್ಲಿ ನಮ್ಮ ಜೀವನದಿಗಳಾದ ಕೃಷ್ಣಾ ಮತ್ತು ಕಾವೇರಿ ಜಲಾನಯನ ಪ್ರದೇಶಗಳ ಪ್ರಶ್ನೆ ಅಡಗಿರುವುದರಿಂದ ಈ ಹಿಂದೆಯೇ ರಾಜ್ಯದ ನಿಲುವನ್ನು ಸ್ಪಷ್ಟಪಡಿಸಲಾಗಿದೆ. ನೀರಿನ ಸಮರ್ಪಕ ಪಾಲು ಪಡೆದ ನಂತರವೇ ಯೋಜನೆಗೆ ಸಮ್ಮತಿ ನೀಡಲಾಗುತ್ತದೆ’ ಎಂದು ಅವರು ಒತ್ತಿಹೇಳಿದರು.
ರಾಜ್ಯದ ಕಾನೂನು ತಂಡರೊಂದಿಗೆ ಮಂಗಳವಾರ ಸಭೆ ನಡೆಸಿ ಈ ಸಂಬಂಧ ಚರ್ಚಿಸಲಾಗುವುದು ಎಂದು ಅವರು ತಿಳಿಸಿದರು. ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಈ ಸಂದರ್ಭ ಹಾಜರಿದ್ದರು.
Read more from source
[wpas_products keywords=”deal of the day sale today kitchen”]