ಬೆಂಗಳೂರು: ಸಣ್ಣ ರೈತರಿಂದ 20 ಕ್ವಿಂಟಲ್ ಮಾತ್ರ ರಾಗಿ ಖರೀದಿ ಮಾಡುವ ಸಂಬಂಧ ಸರ್ಕಾರ ಹೊರಡಿಸಿರುವ ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದು ಜೆಡಿಎಸ್‌ನ ಮಾಜಿ ಶಾಸಕ ವೈ.ಎಸ್.ವಿ.ದತ್ತ ಒತ್ತಾಯಿಸಿದ್ದಾರೆ.
ಆದರೆ, ಈ ವಿಚಾರವಾಗಿ ಮನವಿ ಪತ್ರವನ್ನು ರಾಜ್ಯ ಸರ್ಕಾರಕ್ಕಾಗಲೀ ಅಥವಾ ತಮ್ಮದೇ ಪಕ್ಷದ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕೊಡದೇ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ದತ್ತ, ಸರ್ಕಾರದ ನಿರ್ಧಾರದಿಂದ ರೈತರು ಸಂಕಷ್ಟದಲ್ಲಿದ್ದಾರೆ. ರೈತರು ಬೆಳೆದ ಉಳಿಕೆ ರಾಗಿಯನ್ನು ಏನು ಮಾಡಬೇಕು? ರಾಗಿ ಬೆಳೆ ಖರೀದಿ ಕಡಿತ ಮಾಡಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಯಲುಸೀಮೆ ರಾಗಿ ಬೆಳೆಗಾರರ ಸಮಸ್ಯೆ ಘನಘೋರವಾಗಿದೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿದರೆ, ಇದು ಸರ್ಕಾರದ ಆದೇಶ, ನಾವು ಏನೂ ಮಾಡಲು ಸಾಧ್ಯವಿಲ್ಲ. ಬೆಂಗಳೂರಿನಲ್ಲೇ ಬದಲಾವಣೆ ಆಗಬೇಕಿದೆ ಎನ್ನುತ್ತಾರೆ. ಕಡೂರಿನಲ್ಲಿ ಈ ವಿಚಾರವಾಗಿ ಪ್ರತಿಭಟನೆ ನಡೆಸಲಾಗಿದೆ ಎಂದು ಅವರು ಹೇಳಿದರು.
ರಾಗಿ ಖರೀದಿಗೆ ಬೆಂಬಲ ಬೆಲೆ ಘೋಷಣೆ ಮಾಡಿ ಖರೀದಿ ಕೇಂದ್ರಗಳನ್ನು ಸರ್ಕಾರ ತೆರೆದಿದೆ. ಈ ಹಿಂದೆ ರೈತರು ಬೆಳೆದಷ್ಟು ರಾಗಿಯನ್ನು ಖರೀದಿಸಲು ಅವಕಾಶವಿತ್ತು. 2021ರಲ್ಲಿ 52 ಲಕ್ಷ ಕ್ವಿಂಟಲ್ ರಾಗಿ ಖರೀದಿಸಲಾಗಿತ್ತು. ಅದರಲ್ಲಿ ಕಡೂರು ಕ್ಷೇತ್ರದಲ್ಲಿ 4 ಲಕ್ಷ ಕ್ವಿಂಟಲ್ ಖರೀದಿಸಲಾಗಿತ್ತು. ಈ ಬಾರಿ ರೈತರಿಂದ 20 ಕ್ವಿಂಟಲ್ ಮಾತ್ರ ಖರೀದಿಸಲಾಗಿದೆ. ಒಟ್ಟು 1.90 ಲಕ್ಷ ಟನ್ ಮಾತ್ರ ಖರೀದಿಯಾಗಿದೆ ಎಂದರು.
ವಿಧಾನಸೌಧಕ್ಕೆ ಬಂದರೂ ಸಮಸ್ಯೆ ಬಗೆಹರಿದಿಲ್ಲ. ಅಧಿವೇಶನದಲ್ಲಿ ಈ ವಿಚಾರ ಚರ್ಚೆ ಆಗಬೇಕು ಎಂಬುದು ರೈತರ ಬೇಡಿಕೆ. ಆದೇಶದಲ್ಲಿರುವ ಸಣ್ಣ, ಅತಿ ಸಣ್ಣ ರೈತರು ಎಂಬ ಉಲ್ಲೇಖವನ್ನು ತೆಗೆದುಹಾಕಬೇಕು. ಕಡೂರು ತಾಲ್ಲೂಕಿನ ರಾಗಿ ಬೆಳೆಗಾರರಿಂದ ಕಳೆದ ಬಾರಿಯಂತೆ 50 ಕ್ವಿಂಟಲ್ ಖರೀದಿ ಮಾಡಬೇಕು ಎಂದು ಒತ್ತಾಯಿಸಿದರು.
Read more from source
[wpas_products keywords=”deal of the day sale today kitchen”]